ಹಾಪ್‌ಕಾಮ್ಸ್‌ಗಳಿಗೆ ಸಿಗದ ಹೈ-ಟೆಕ್ ಸ್ಪರ್ಶ, ಸರ್ಕಾರ ನಿರಾಸಕ್ತಿ

| Published : Jun 12 2024, 12:31 AM IST

ಹಾಪ್‌ಕಾಮ್ಸ್‌ಗಳಿಗೆ ಸಿಗದ ಹೈ-ಟೆಕ್ ಸ್ಪರ್ಶ, ಸರ್ಕಾರ ನಿರಾಸಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ದ್ರಾಕ್ಷಿ ರಸ, ಖರ್ಬೂಜ, ಕಬ್ಬಿನ ಜ್ಯೂಸ್‌ಗಳು ಸೇರಿದಂತೆ ಗ್ರಾಹಕರನ್ನು ಸೆಳೆಯುವುದಕ್ಕೆ ಬೇಕಾದ ಹಲವಾರು ಉತ್ಪನ್ನಗಳನ್ನು ಮಳಿಗೆಗಳಲ್ಲಿ ಇಡಲಾಗುತ್ತಿದ್ದರೂ ಅವುಗಳತ್ತ ಗ್ರಾಹಕರು ತಿರುಗಿನೋಡುವಂತೆ ಮಾಡುವಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ನೌಕರರು, ಅಧಿಕಾರಿಗಳು ವೈಫಲ್ಯ ಸಾಧಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಮೂರ್ನಾಲ್ಕು ದಶಕಗಳ ಹಿಂದೆ ತಲೆಎತ್ತಿದ ಹಾಪ್‌ಕಾಮ್ಸ್‌ಗಳು ಬದಲಾವಣೆಯನ್ನೇ ಕಾಣದೆ ಯಥಾಸ್ಥಿತಿಯಲ್ಲೇ ಉಳಿದುಕೊಂಡಿವೆ. ಸರ್ಕಾರಗಳ ನಿರ್ಲಕ್ಷ್ಯದಿಂದ ಹೈ-ಟೆಕ್ ಸ್ಪರ್ಶ ಕಂಡಿಲ್ಲ. ಅವುಗಳನ್ನು ಉನ್ನತೀಕರಣಗೊಳಿಸುವ ಆಸಕ್ತಿ ಆಳುವವರಲ್ಲೂ ಇಲ್ಲ. ಲಾಭವಿದ್ದರೂ ಹಾಪ್‌ಕಾಮ್ಸ್‌ಗಳನ್ನು ಜನಾಕರ್ಷಿಸುವಂತೆ ಮಾಡುವಲ್ಲಿ ಆಡಳಿತಮಂಡಳಿ, ಅಧಿಕಾರಿಗಳು, ನೌಕರರಲ್ಲಿ ಬದ್ಧತೆ ಮತ್ತು ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ.ಜಿಲ್ಲೆಯಲ್ಲಿ ಹಾಲಿ ೧೪ ಹಾಪ್‌ಕಾಮ್ಸ್‌ಗಳಿವೆ. ಮಂಡ್ಯ-೮, ಪಾಂಡವಪುರ-೧, ಶ್ರೀರಂಗಪಟ್ಟಣ-೨, ಮದ್ದೂರು ತಾಲೂಕಿನಲ್ಲಿ ೩ ಹಾಪ್‌ಕಾಮ್ಸ್‌ಗಳಿದ್ದು, ಕೆ.ಆರ್.ಪೇಟೆ ಮತು ನಾಗಮಂಗಲ ತಾಲೂಕಿನಲ್ಲಿ ಒಂದೇ ಒಂದು ಹಾಪ್‌ಕಾಮ್ಸ್ ಇಲ್ಲ. ಹೊಸದಾಗಿ ಎರಡು ಮಳಿಗೆಗಳನ್ನು ಆರಂಭಿಸುವುದಕ್ಕೆ ಚಿಂತನೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಮಳಿಗೆಗಳು ಆಕರ್ಷಣೀಯವಾಗಿಲ್ಲ: ರಸ್ತೆ ಬದಿಯ ತಳ್ಳುವ ಗಾಡಿಯಲ್ಲಿ ಹಣ್ಣುಗಳನ್ನಿಟ್ಟುಕೊಂಡು ವ್ಯಾಪಾರ ಮಾಡುವ ಸಾಮಾನ್ಯ ವರ್ತಕರು ಹಣ್ಣುಗಳನ್ನು ಗ್ರಾಹಕರನ್ನು ಆಕರ್ಷಿಸುವಂತೆ ಚೆಂದವಾಗಿ ಜೋಡಿಸಿರುತ್ತಾನೆ. ಅಂಗಡಿ ನೋಡಿದರೆ ಹಣ್ಣುಗಳನ್ನು ಕೊಳ್ಳಲು ಮುಂದಾಗುವಂತೆ ಅಚ್ಚುಕಟ್ಟಾಗಿ ಇಟ್ಟುಕೊಂಡಿರುತ್ತಾನೆ. ಆದರೆ, ಬಹುತೇಕ ಹಾಪ್‌ಕಾಮ್ಸ್ ಮಳಿಗೆಗಳು ಆಕರ್ಷಣೆಯನ್ನೇ ಕಳೆದುಕೊಂಡಿವೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಣ್ಣುಗಳೂ ಸೇರಿ ವಿವಿಧ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತಿಯನ್ನೂ ತೋರಿಸುತ್ತಿಲ್ಲ.ಪ್ರತಿ ತಿಂಗಳು ಕೈತುಂಬಾ ವೇತನ ಪಡೆಯುವ ನೌಕರರು ಹಾಪ್‌ಕಾಮ್ಸ್ ಮಳಿಗೆಗೆ ಗ್ರಾಹಕರನ್ನು ಆಕರ್ಷಿಸಿ ವ್ಯಾಪಾರ ವೃದ್ಧಿಯಾಗುವಂತೆ ಮಾಡುವ ಇಚ್ಛಾಶಕ್ತಿಯನ್ನೇ ಪ್ರದರ್ಶಿಸದಿರುವುದು ಬೆಳವಣಿಗೆಗೆ ಹಿನ್ನಡೆ ಉಂಟುಮಾಡಿದೆ. ಕುಂಟು ನೆಪಗಳನ್ನು ಹೇಳುತ್ತಾ ಸರಿಯಾಗಿ ಕಾರ್ಯನಿರ್ವಹಿಸದಿರುವುದು. ಹಾಪ್‌ಕಾಮ್ಸ್‌ಗಳಿಗೆ ನಿಗದಿತ ಕಾಲಾವಧಿಯನ್ನು ನಿಗದಿಪಡಿಸದಿರುವುದರಿಂದ ಇಷ್ಟ ಬಂದಂತೆ ಬಾಗಿಲು ತೆರೆಯುವುದು, ಹಾಕುವುದು ಮಾಡುತ್ತಿರುವುದರಿಂದ ಜನಾಕರ್ಷಣೆಯನ್ನೇ ಕಳೆದುಕೊಂಡಿವೆ.ನಿತ್ಯ ೧ ಲಕ್ಷಕ್ಕೂ ಹೆಚ್ಚು ವ್ಯಾಪಾರ: ಜಿಲ್ಲೆಯಲ್ಲಿರುವ 14 ಅಂಗಡಿಗಳಿಂದ ನಿತ್ಯ ೧ ಲಕ್ಷ ರು.ಗೂ ಮೀರಿ ವ್ಯಾಪಾರವಾಗುತ್ತಿದೆ ಎಂದು ಆಡಳಿತ ಮಂಡಳಿಯವರು, ಅಧಿಕಾರಿಗಳೇ ಹೇಳುತ್ತಾರೆ. ಏನಿಲ್ಲವೆಂದರೂ ತಿಂಗಳಿಗೆ 35 ರಿಂದ 40 ಲಕ್ಷ ರು. ವ್ಯಾಪಾರವಾಗುತ್ತದೆ. ಅದರಲ್ಲಿ ಶೇ.೨-೩ರಷ್ಟು ಲಾಭವಿದ್ದರೂ ಸಹಕಾರಿ ಸಂಸ್ಥೆಗೆ ೨ ರಿಂದ ೩ ಲಕ್ಷ ರು. ಉಳಿಯುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲೂ ಹಾಪ್‌ಕಾಮ್ಸ್‌ಗಳು ಉತ್ತಮ ಸ್ಥಿತಿಯಲ್ಲಿದ್ದರೂ ಅವುಗಳನ್ನು ಇನ್ನಷ್ಟು ರೂಪಾಂತರಗೊಳಿಸಿ ಅದರ ಅಂದ-ಆದಾಯ ಹೆಚ್ಚಿಸುವುದಕ್ಕೆ ಸರ್ಕಾರಗಳಿಂದ ಪ್ರಯತ್ನಗಳೇ ನಡೆಯುತ್ತಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.ಪ್ರವಾಸಿ ತಾಣಗಳು, ಸರ್ಕಾರಿ ಹೋಟೆಲ್, ಅತಿಥಿಗೃಹಗಳು ಹಾಗೂ ಜನಸಂದಣಿ ಹೆಚ್ಚಾಗಿರುವ ಜಾಗಗಳಲ್ಲಿ ಆಕರ್ಷಣೀಯವಾಗಿ ಹಾಪ್‌ಕಾಮ್ಸ್‌ಗಳನ್ನು ತೆರೆದರೆ ಸಹಕಾರಿ ರಂಗದಲ್ಲಿರುವ ಸಂಸ್ಥೆ ಮತ್ತಷ್ಟು ಬೆಳವಣಿಗೆ ಕಾಣುತ್ತದೆ. ಅಲ್ಲದೆ, ಹೊರರಾಜ್ಯ, ವಿದೇಶಗಳಿಂದ ಬರುವವರಿಗೂ ನಮ್ಮ ಹಣ್ಣು-ತರಕಾರಿ ಉತ್ಪನ್ನಗಳ ಗುಣಮಟ್ಟ, ರುಚಿಯನ್ನು ಪರಿಚಯಿಸಿದಂತಾಗುತ್ತದೆ. ದ್ರಾಕ್ಷಿ ರಸ, ಕರ್ಬೂಜ, ಕಬ್ಬಿನ ಜ್ಯೂಸ್ ಸೇರಿ ನಾನಾ ವಿಧವಾದ ಹಣ್ಣಿನ ರಸಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಿಸುವುದಕ್ಕೆ ಅವಕಾಶಗಳಿದ್ದರೂ ಅದಕ್ಕೆ ಪೂರಕವಾದ ಪ್ರಯತ್ನಗಳು ಮಾತ್ರ ನಡೆಯುತ್ತಲೇ ಇಲ್ಲ.ಯಾವ ಮಾಹಿತಿಯೂ ಇಲ್ಲ: ನಗರದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಬಳಿ ಇರುವ ಅಂಗಡಿಯೂ ಸೇರಿ ಒಂದೆರಡು ಹಾಪ್‌ಕಾಮ್ಸ್‌ಗಳನ್ನು ಹೊರತುಪಡಿಸಿದರೆ ಉಳಿದ ಅಂಗಡಿಗಳು ಕಣ್ಣಿಗೆ ಕಾಣುವುದೇ ಇಲ್ಲ. ಜಿಲ್ಲಾ ಹಾಪ್‌ಕಾಮ್ಸ್‌ನ ಒಡೆತನದಲ್ಲಿರುವ ಮಳಿಗೆಗಳಲ್ಲಿ ೫ ರಿಂದ ೬ ಮಂದಿ ಖಾಯಂ ನೌಕರರು, ೧೬ ಮಂದಿ ದಿನಗೂಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಪ್‌ಕಾಮ್ಸ್‌ಗಳಲ್ಲಿ ಏನೇನು ಉತ್ಪನ್ನಗಳನ್ನು ಮಾರುತ್ತಾರೆಂಬ ಮಾಹಿತಿ ಗ್ರಾಹಕರಿಗೆ ಸಿಗುವುದೇ ಇಲ್ಲ. ಅವುಗಳ ಎದುರು ದರಪಟ್ಟಿಯನ್ನೂ ನಮೂದಿಸುವುದಿಲ್ಲ. ಹಾಪ್‌ಕಾಮ್ಸ್‌ಗಳಲ್ಲಿ ಸಾಕಷ್ಟು ಉತ್ಕೃಷ್ಟ ಉತ್ಪನ್ನಗಳಿದ್ದರೂ ಅವುಗಳನ್ನು ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ತಲುಪಿಸುವುದಕ್ಕೆ ಸಾಧ್ಯವಾಗದಂತಾಗಿದೆ.ಆಕರ್ಷಣೆ ಮಾಡಲು ನೌಕರರ ನಿರಾಸಕ್ತಿ:

ಬೆಂಗಳೂರಿನಿಂದ ಗುಣಮಟ್ಟದ ಹಣ್ಣುಗಳನ್ನು ಹಾಪ್‌ಕಾಮ್ಸ್‌ಗಳಿಗೆ ತರಿಸಲಾಗುತ್ತಿದೆ. ಬಾಳೆ, ಪಪ್ಪಾಯ, ಸಪೋಟ, ಕಲ್ಲಂಗಡಿ ಸೇರಿದಂತೆ ಕೆಲವು ಹಣ್ಣುಗಳನ್ನು ಸೀಮಿತ ಪ್ರಮಾಣದಲ್ಲಿ ರೈತರಿಂದಲೂ ಖರೀದಿಸಿ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ದ್ರಾಕ್ಷಿರಸ, ಕಬ್ಬಿನ ಜ್ಯೂಸ್ ಹೀಗೆ ನಾನಾ ವಿಧವಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರೂ ಅವುಗಳು ಗ್ರಾಹಕರ ಕಣ್ಣಿಗೆ ಕಾಣುವಂತೆ, ಅವರನ್ನು ಸೆಳೆಯುವ ರೀತಿಯಲ್ಲಿ ಅಂದವಾಗಿ ಜೋಡಿಸುವಲ್ಲಿ ಹಾಪ್‌ಕಾಮ್ಸ್ ನೌಕರರ ನಿರಾಸಕ್ತಿ ಎದ್ದು ಕಾಣುತ್ತಿದೆ. ಹೀಗಾಗಿ ಹಾಪ್‌ಕಾಮ್ಸ್‌ಗಳು ಆಕರ್ಷಣೆ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ.

ಹಾಪ್‌ಕಾಮ್ಸ್‌ ಅಭಿವೃದ್ಧಿಗೆ 2 ಲಕ್ಷ ರು. ನೆರವು: ರಾಜ್ಯಸರ್ಕಾರ ಕರ್ನಾಟಕ ಹಾರ್ಟಿಕಲ್ಚರಲ್ ಫೆಡರೇಷನ್ ಮೂಲಕ ಪ್ರತಿ ವರ್ಷ ೨ ಲಕ್ಷ ರು. ಕೊಡುವುದನ್ನು ಹೊರತುಪಡಿಸಿದರೆ ಇನ್ನಾವುದೇ ಅನುದಾನವನ್ನು ನೀಡುವುದಿಲ್ಲ. ಈ ಹಣದಲ್ಲೇ ಮಳಿಗೆಗಳ ಸ್ಥಾಪನೆ, ನವೀಕರಣ, ಯಂತ್ರೋಪಕರಣಗಳ ಖರೀದಿ ಎಲ್ಲವೂ ನಡೆಯಬೇಕಿದೆ. ನೌಕರರ ವೇತನ ಸೇರಿದಂತೆ ಉಳಿದೆಲ್ಲ ಖರ್ಚನ್ನು ವ್ಯಾಪಾರದಿಂದಲೇ ನಿಭಾಯಿಸಬೇಕಿದೆ. ಇದರ ನಡುವೆಯೂ ಹೊಸದಾಗಿ ಹಲವಾರು ಪ್ರಯೋಗಗಳನ್ನು ನಡೆಸಿದ್ದೇವೆ. ಅವು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹೊಸ ಆದಾಯ ಮೂಲ ಸೃಷ್ಟಿಸಿಕೊಂಡು ಕಳೆದ ೮-೯ ತಿಂಗಳಲ್ಲಿ ೧೫ ಲಕ್ಷ ರು. ಸಾಲ ತೀರಿಸಿದ್ದೇವೆ. ಜಿಲ್ಲಾ ಹಾಪ್‌ಕಾಮ್ಸ್ ಹೆಸರಿನಲ್ಲಿ ತೂಬಿನಕೆರೆ ಬಳಿ ೧ ಎಕರೆ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ೩೦ ಗುಂಟೆ ಜಮೀನಿದೆ. ತೂಬಿನಕೆರೆ, ಕೊಪ್ಪ, ಹಲಗೂರು, ಕೆಆರ್‌ಎಸ್, ಮದ್ದೂರುಗಳಲ್ಲಿ ಹಲವು ಮಳಿಗೆಗಳನ್ನು ಬಾಡಿಗೆಗೆ ನೀಡಿರುವುದಾಗಿ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪ್ರದೀಪ್‌ಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದರು.ಯಾರೂ ಮುಂದೆ ಬರುತ್ತಿಲ್ಲ: ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ಹಣ್ಣುಗಳು, ಹಣ್ಣುಗಳು, ಕಬ್ಬಿನ ಜ್ಯೂಸ್ ಮಾರಾಟ ಮಾಡಲು ದಿನಗೂಲಿ ನೌಕರರ ಅಗತ್ಯವಿದೆ. ಮಾಸಿಕ ೧೨ ಸಾವಿರ ರು. ಕೊಡುವುದಾಗಿ ಪ್ರಚುರಪಡಿಸಿದರೂ ಯಾರೂ ಸಹ ಆಸಕ್ತಿ ತೋರುತ್ತಿಲ್ಲ. ಪ್ರಸ್ತುತ ದಿನಗೂಲಿ ಆಧಾರದ ಮೇಲೆ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಯಾರೊಬ್ಬರೂ ಮುಂದಾಗದಿರುವುದು ಪ್ರಗತಿಯನ್ನು ಕುಂಠಿತಗೊಳಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ದ್ರಾಕ್ಷಿ ರಸ, ಖರ್ಬೂಜ, ಕಬ್ಬಿನ ಜ್ಯೂಸ್‌ಗಳು ಸೇರಿದಂತೆ ಗ್ರಾಹಕರನ್ನು ಸೆಳೆಯುವುದಕ್ಕೆ ಬೇಕಾದ ಹಲವಾರು ಉತ್ಪನ್ನಗಳನ್ನು ಮಳಿಗೆಗಳಲ್ಲಿ ಇಡಲಾಗುತ್ತಿದ್ದರೂ ಅವುಗಳತ್ತ ಗ್ರಾಹಕರು ತಿರುಗಿನೋಡುವಂತೆ ಮಾಡುವಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ನೌಕರರು, ಅಧಿಕಾರಿಗಳು ವೈಫಲ್ಯ ಸಾಧಿಸುತ್ತಿದ್ದಾರೆ.‘ಹಾಪ್‌ಕಾಮ್ಸ್‌ಗಳಲ್ಲಿ ಗುಣಮಟ್ಟದ ಹಣ್ಣುಗಳು, ಜ್ಯೂಸ್ ಸೇರಿ ಉತ್ಕೃಷ್ಟ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರನ್ನು ಬೆಂಬಲಿಸಬೇಕಾದರೆ ಜನರು ಹಾಪ್‌ಕಾಮ್ಸ್‌ಗಳಲ್ಲೇ ಹಣ್ಣುಗಳನ್ನು ಖರೀದಿಸುವ ಅಗತ್ಯವಿದೆ. ಹಣ್ಣು-ತರಕಾರಿ ಕೊಳ್ಳಲು ಬರುವ ಗ್ರಾಹಕರಿಗೆ ಜಿಲ್ಲಾ ಹಾಪ್‌ಕಾಮ್ಸ್‌ನಿಂದ ಹೊಸದಾಗಿ ಬಟ್ಟೆ ಬ್ಯಾಗುಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಹಲವು ಮಳಿಗೆಗಳ ಆಕರ್ಷಣೆ ಹೆಚ್ಚಿಸಲಾಗಿದೆ. ಎರಡು ತಾಲೂಕುಗಳಲ್ಲಿ ಹೊಸದಾಗಿ ಮಳಿಗೆಗಳನ್ನು ತೆರೆಯುತ್ತಿದ್ದೇವೆ. ಜನರ ಸಹಕಾರವೂ ನಮಗೆ ಮುಖ್ಯ.’- ಸಿ.ಎಂ.ಪ್ರದೀಪ್‌ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಹಾಪ್‌ಕಾಮ್ಸ್‘ಹಾಪ್‌ಕಾಮ್ಸ್‌ಗಳನ್ನು ಅಭಿವೃದ್ಧಿಪಡಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದೇವೆ. ನೌಕರರು ಗ್ರಾಹಕರನ್ನು ಆಕರ್ಷಿಸುವ ರೀತಿಯಲ್ಲಿ ಮಳಿಗೆಗಳನ್ನು ಶುಚಿಯಾಗಿಟ್ಟುಕೊಂಡು ಹಣ್ಣುಗಳು-ಉತ್ಪನ್ನಗಳನ್ನು ಅಲಂಕಾರಿಕವಾಗಿ ಜೋಡಿಸಿಡಬೇಕು. ಮಳಿಗೆಗಳ ಆದಾಯ ಹೆಚ್ಚಾಗುವುದಕ್ಕೆ ಶ್ರಮವಹಿಸಿದಾಗ ಬೆಳವಣಿಗೆ ಕಾಣಲು ಸಾಧ್ಯ.’-ಡಿ.ಕೃಷ್ಣೇಗೌಡ, ಅಧ್ಯಕ್ಷರು, ಜಿಲ್ಲಾ ಹಾಪ್‌ಕಾಮ್ಸ್