ಚಳ್ಳಕೆರೆ ಹೊರವಲಯದ ಹೆದ್ದಾರಿ ಪಕ್ಕದ ಡಾಬಾಗಳು ರಾತ್ರಿ ಇಡೀ ತೆರೆದಿರುವುದು.

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಗುವ ಡಾಬಾಗಳು ದಿನದ 24 ಗಂಟೆಯೂ ತೆರೆದೇ ಇರುತ್ತವೆ. ಈ ಡಾಬಾಗಳಿಗೆ ಯಾವುದೇ ಕಾನೂನಿನ ನೀತಿ ನಿಯಮಗಳು ಅನ್ವಯಿಸಿದಂತೆ ಕಾಣುತ್ತಿಲ್ಲ. ಇಲ್ಲಿ ಊಟದ ಜೊತೆಗೆ ಮದ್ಯವೂ ಸಿಗುವುದರಿಂದ ಕುಡಿದು ವಾಹನ ಚಾಲನೆ ಮಾಡಿಕೊಂಡು ಹೋಗವವರೇ ಹೆಚ್ಚು. ಅಬಕಾರಿ ಇಲಾಖೆ ಜಾಣ ಮೌನಕ್ಕೆ ಜಾರಿರುವುದರ ಅಡ್ಡಿ ಪರಿಣಾಮವಿದು.

ಹೆದ್ದಾರಿಗಳಲ್ಲಿ ರಾತ್ರಿಯಿಡೀ ಡಾಬಾಗಳು ಯಾರ ಭಯವೂ ಇಲ್ಲದಂತೆ ತೆರೆದಿರುತ್ತವೆ. ಇಂತಹ ಡಾಬಾಗಳಲ್ಲಿ ಪಾರ್ಟಿಗಳನ್ನು ಮಾಡಿಕೊಂಡು ಸರಿರಾತ್ರಿಯವರೆಗೂ ಮದ್ಯದ ಅಮಲಿನಲ್ಲಿ ತೂರಾಡುತ್ತಲೇ ಇರುವ ಯುವಕರ ಪಡೆಗಳು ಮಾಡುವ ಅವಾಂತರಗಳು ಭಯಾನಕವಾಗಿರುತ್ತವೆ.

ಹೊರವಲಯದ ಹೆದ್ದಾರಿಯಲಿ ವೀಲಿಂಗ್ ಮಾಡುವುದು, ಜೋರು ಕರ್ಕಶ ಶಬ್ದಗಳ ಹಾವಳಿ ನೋಡುಗರನ್ನು ಬೆಚ್ಚಿಬೀಳಿಸದೇ ಇರುವುದಿಲ್ಲ. ಸರಿ ರಾತ್ರಿಯಲ್ಲಿ ಪ್ರಯಾಣಿಸುವ ವಾಹನ ಪ್ರಯಾಣಿಕರು ಜೀವ ಕೈಯಲ್ಲೆ ಇಟ್ಟುಕೊಂಡು ಭಯದಲ್ಲಿ ಓಡಾಡಬೇಕಾದಂತಹ ಪರಿಸ್ಥಿತಿ ಇಲ್ಲಿನದು.

ಗೊರ್ಲಕಟ್ಟೆ ಕಡೆಗೆ ಹೋಗುವ ಅಂಡರ್ ಪಾಸ್ ಕಡೆಯಿಂದ ಹೈವೇ ಕಡೆಗೆ ಎಂಟ್ರಿಯಾಗುತ್ತಾರೆ. ಸೋಮಗುದ್ದು ಅಂಡರ್ ಪಾಸ್ ಮೇಲಿಂದ ವೀಲಿಂಗ್ ಮಾಡುತ್ತಾ ಮುಂದೆ ಸಿಗುವ ಡಾಬಾಗಳ ಮಂದ ಬೆಳಕಿನಲ್ಲಿ ಮತ್ತದೇ ಪಾರ್ಟಿ ಮಾಡಿ ಮತ್ತೆ ಹೈವೆಗೆ ಬರುವ ಪುಂಡರ ಹಾವಳಿಗೆ ಬ್ರೇಕ್ ಹಾಕದಿದ್ದರೆ ಅನಾಹುತಗಳು ತಪ್ಪಿದ್ದಲ್ಲ ಎಂದೇ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಪೊಲೀಸ್ ಹೆದ್ದಾರಿ ಗಸ್ತು ವಾಹನ ಇರುತ್ತಾದಾದರೂ ಯಾವುದೇ ಡಾಬಾಗಳನ್ನು ಅವಧಿ ಮೀರಿ ನಡೆಸುತ್ತಿದ್ದರೂ ತುಟಿ ಬಿಚ್ಚದೇ ಹಾರ್ನ್ ಹಾಕಿ ಮುಂದಕ್ಕೆ ಸಾಗುತ್ತಾರೆ. ಗಸ್ತು ವಾಹನ ಕಣ್ಣೆದುರು ಇರುವವರೆಗೂ ಲೈಟ್ ಆರಿಸುವ ಡಾಬಾಗಳ ಮಾಲೀಕರು ಗಸ್ತು ವಾಹನ ಮರೆಯಾದ ತಕ್ಷಣ ಲೈಟ್ ಆನ್ ಮಾಡಿ ಯಥಾ ಪ್ರಕಾರ ವ್ಯವಹಾರಕ್ಕೆ ಇಳಿದುಬಿಡುತ್ತವೆ.

ಚಳ್ಳಕೆರೆ ಪೋಲಿಸರು ಮಾತ್ರ ಹೆದ್ದಾರಿ ಗಸ್ತು ವಾಹನ ಇದೆಯಲ್ಲ ನಮ್ಮದೇನು ಕೆಲಸ ಎಂಬಂತೆ ಜಾಣಮೌನಕ್ಕೆ ಜಾರಿರುವುದರಿಂದಲೇ ರಾತ್ರಿ ಡಾಬಾಗಳ ಕರಾಮತ್ತು ಪೋಲಿಸರಿಗೆ ಅರ್ಥವೇ ಆಗುತ್ತಿಲ್ಲ.

ಚಿತ್ರದುರ್ಗದ ಕಡೆಯಿಂದ ಚಳ್ಳಕೆರೆಗೆ ಎಂಟ್ರಿಯಾಗುವ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಅಂಗಡಿ, ಹೋಟೆಲ್ ಗಳ ಹಾವಳಿ ಅಷ್ಟಿಷ್ಟಲ್ಲ. ಅಲ್ಲೇ ಅಂಗಡಿ ಮುಂದೆ ರಸ್ತೆಗೆ ತಾಗಿಕೊಂಡಂತೆ ವಾಹನಗಳ ನಿಲುಗಡೆ ಮಾಡಿಕೊಂಡಿರುವುದನ್ನು ಸಮೀಪದಲ್ಲೇ ಚೆಕ್ ಪೋಸ್ಟ್ ನಲ್ಲಿರುವ ಪೋಲಿಸರು ಕ್ಯಾರೆ ಅನ್ನುವುದಿಲ್ಲ. ಭಾನುವಾರ ರಾತ್ರಿಯಾಯಿತೆಂದರೆ ಆಂಧ್ರದ ಕಡೆಯಿಂದ ಬರುವ ಮೆಣಸಿನಕಾಯಿ ತುಂಬಿದ ಟಾಟಾ ಏಸ್ ವಾಹನಗಳನ್ನು ತಪಾಸಣೆಗೆ ನಿಲ್ಲಿಸುವ ಪೋಲೀಸರು ರಸ್ತೆಗೆ ನಿಲ್ಲಿಸಿಕೊಂಡು ಹೋಗಿ ಬರುವ ವಾಹನಗಳಿಗೆ ಕಿರಿಕಿರಿ ಮಾಡುತ್ತಿರುವುದು ಮಾಮೂಲಿಯಾಗಿದೆ.

ಇನ್ನು ಸರಿರಾತ್ರಿಯಾದರೂ ಡಾಬಾಗಳು ತೆರೆದಿರುತ್ತವೆ ಎಂದರೆ ಆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಏನಾಗುತ್ತದೆ ಎಂಬುದನ್ನು ಮುಂಚಿತವಾಗಿಯೇ ಅರಿತುಕೊಳ್ಳುವುದು ಒಳಿತು. ಈಚೆಗೆ ಮದ್ದೂರು ಹೈವೇನಲ್ಲಿ ಪುಂಡರು ಕುಟುಂಬ ಸಮೇತ ವಾಹನದಲ್ಲಿ ಹೋಗುತ್ತಿದ್ದವರ ಮೇಲೆ ಅದರಲ್ಲೂ 10 ತಿಂಗಳ ಹಸುಗೂಸಿನ ಮೇಲೂ ಹಲ್ಲೆ ನಡೆಸಿದ ಕೃತ್ಯ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ನೊಂದ ವ್ಯಕ್ತಿಯ ನುಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಮಾತುಗಳನ್ನು ಕೇಳಿದರೆ ಎಂತಹವರ ಕಣ್ಣಾಲಿಗಳು ತೇವಗೊಳ್ಳದೇ ಇರಲಾರವು.

ಚಳ್ಳಕೆರೆ ಹೊರವಲಯದ ಹೆದ್ದಾರಿಯಲ್ಲಿಯೂ ಪುಂಡರು ಎಣ್ಣೆ ಪಾರ್ಟಿ ಮಾಡುವುದು ಮಾಮೂಲಿಯಾಗಿದೆ. ಮನೆಗಳ್ಳತನ ಮಾಡುವವರಿಗೆ ಹೇಳಿ ಮಾಡಿಸಿದ ಜಾಗಗಳೇ ಇಂತಹ ಡಾಬಾಗಳು. ಚಳ್ಳಕೆರೆ ನಗರ ಇತ್ತೀಚಿನ ವರ್ಷಗಳಲ್ಲಿ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಪಾವಗಡ ರಸ್ತೆಯಲ್ಲಿ ದೊಡ್ಡೇರಿವರೆಗೂ, ಚಿತ್ರದುರ್ಗ ರಸ್ತೆಯಲ್ಲಿ ಇಮಾಂಪುರದವರೆಗೂ, ಬೆಂಗಳೂರು ರಸ್ತೆಯಲ್ಲಿ ನಿರ್ಮಲ ಲಾಡ್ಜ್ ದಾಟಿ ಸಿದ್ದಾಪುರದವರೆಗೂ, ಬಳ್ಳಾರಿ ರಸ್ತೆಯಲ್ಲಿ ವೆಂಕಟೇಶ್ವರ ನಗರ ದಾಟಿ ಮುಂದೆ ಹೈವೇ ಅಂಡರ್ ಪಾಸ್ ವರೆಗೂ ಬೆಳೆದಿದೆ.

ಅಲ್ಲಲ್ಲಿ ಹೊಸ ಲೇಔಟ್‌ಗಳು ಆಗಿರುವುದರಿಂದ ಒಂಟಿ ಮನೆಗಳೂ ಗೋಚರಿಸುತ್ತವೆ. ಇಂತಹುಗಳ ಮೇಲೆ ಕಳ್ಳರ ಕಣ್ಣುಗಳು ಬೀಳುತ್ತವೆ. ಆಗಾಗ ಸರಗಳ್ಳರ ಹಾವಳಿಯೂ ನಗರದಲ್ಲಿ ಸದ್ದು ಮಾಡಿದ ನಿದರ್ಶನಗಳು ಸಾಕಷ್ಟಿವೆ. ಏನಾದರೂ ಘಟಿಸುವುದಕ್ಕಿಂತ ಮುನ್ನ ಎಚ್ಚರಿಕೆ ಅಗತ್ಯ.