ಸಾರಾಂಶ
ಬೋವಿ ಸಮಾಜದವರು ಶ್ರಮಿಕರು. ದುಡಿಮೆ ನಂಬಿಕೊಂಡು ಪ್ರಾಮಾಣಿಕತೆಯಿಂದ ಎಲ್ಲ ವರ್ಗದ ಜತೆ ಬೆರೆತು ಬದುಕು ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಬೋವಿ ಸಮಾಜದವರು ಶ್ರಮಿಕರು. ದುಡಿಮೆ ನಂಬಿಕೊಂಡು ಪ್ರಾಮಾಣಿಕತೆಯಿಂದ ಎಲ್ಲ ವರ್ಗದ ಜತೆ ಬೆರೆತು ಬದುಕು ನಡೆಸುತ್ತಿದ್ದಾರೆ ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಮುಧೋಳ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಾಣಗೊಂಡ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಲೋಕಾರ್ಪಣೆ, ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ಸಮಾಜ ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಬ್ಬ ಪಾಲಕರು ತಂತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ತಾನಾಗಿಯೇ ಅಭಿವೃದ್ಧಿಗೊಳ್ಳುತ್ತದೆ ಎಂದರು.
ದೇವಾಲಯಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ಮುಧೋಳ ಗ್ರಾಮದ ಭಕ್ತರು ಸದಾ ಶ್ರದ್ಧೆ, ಭಕ್ತಿ ಭಾವ ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕು ರೂಪಿಸಿಕೊಂಡಿದ್ದಾರೆ. ಬೋವಿ ಸಮಾಜ ತನ್ನದೇ ಆದ ಇತಿಹಾಸ ಭವ್ಯ ಪರಂಪರೆಯನ್ನು ಹೊಂದಿದೆ. ಶಿವಯೋಗಿ ಸಿದ್ದರಾಮೇಶ್ವರರು ೧೨ನೇ ಶತಮಾನದಲ್ಲಿ ವಚನ ಕ್ರಾಂತಿ ಮೂಲಕ ಸಮಾಜದಲ್ಲಿ ಮೌಢ್ಯತೆ ನಿವಾರಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ. ಸಮಾಜ ಸುಧಾರಕ ಶಿವಯೋಗಿ ಸಿದ್ಧರಾಮೇಶ್ವರ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಹೇಳಿದರು.ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ, ಕುದರಿಮೋತಿ ಮೈಸೂರುಮಠದ ವಿಜಯ ಮಹಾಂತ ಸ್ವಾಮೀಜಿ ಹಾಗೂ ರೋಣದ ಗುರುಪಾದ ದೇವರು ಮಾತನಾಡಿದರು.
ಕುಂಭ ಕಳಸ ಮೆರವಣಿಗೆ:ಗ್ರಾಮದ ಡಾ .ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ನೂತನ ದೇವಸ್ಥಾನದವರೆಗೆ ಕುಂಭ ಕಳಸ ಮೇಳದೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು.
ಈ ಸಂದರ್ಭ ಬೋವಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ದುರಗಪ್ಪ ಕರಮುಡಿ, ಮುಖಂಡರಾದ ಬಸವರಾಜ ಬೋವಿ, ನಾಗಪ್ಪ ವಡ್ಡರ, ರೇವಣೆಪ್ಪ ವಜ್ರಬಂಡಿ, ಬಸವರಾಜ ಬೋವಿ, ಹನುಮಂತಪ್ಪ ಕೋಳಿಹಾಳ, ಗಣೇಶ, ಹುಲಗಪ್ಪ ಬಂಡಿವಡ್ಡರ, ಅಂಬಣ್ಣ ವಡ್ಡರ, ಭೀಮೇಶ ಬಂಡಿವಡ್ಡರ ಮತ್ತಿತರರು ಇದ್ದರು.