ಸಾರಾಂಶ
ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲತೋಟಗಾರಿಕೆ ಕ್ಷೇತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಾನಗಲ್ಲ ತಾಲೂಕಿಗೆ ಮಾದರಿಯಾಗಬೇಕಾದ ತೋಟಗಾರಿಕೆ ಇಲಾಖೆಯ ನರ್ಸರಿ ಹಾಗೂ ಇಲ್ಲಿನ ಮಾವು, ಚಿಕ್ಕು, ತೆಂಗಿನ ಬೆಳೆ, ತೋಟ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆಯಲ್ಲದೆ, ನಿರ್ವಹಣಾ ದೋಷದಿಂದ ಇಲಾಖೆಯ ಉದ್ದೇಶವೇ ವಿಫಲವಾಗಿದೆ.ಹಾನಗಲ್ಲ ಪಟ್ಟಣಕ್ಕೆ ಹೊಂದಿಕೊಂಡೇ ಇರುವ ೧೭ ಎಕರೆ ಕ್ಷೇತ್ರದಲ್ಲಿ ೭೫ ತೆಂಗು, ೭೨ ಚಿಕ್ಕು, ೧೧೧ ಮಾವಿನ ಗಿಡಗಳಿವೆ ಎಂಬ ಲೆಕ್ಕದ ವರದಿ ಇದೆ. ಆದರೆ ಇದರಿಂದ ಬರುವ ಆದಾಯದ ಮಾತು ಬೇರೆ. ಇದರ ನಿರ್ವಹಣೆಯೇ ಇಲ್ಲ. ಗಿಡಗಳೂ ಕೂಡ ನಿರೀಕ್ಷಿತ ಫಲ ನೀಡುವುದಿಲ್ಲ. ಸೋತು ಸೊರಗಿ ಹೋಗಿವೆ. ಇಲ್ಲಿ ೩ ಕೊಳವೆಬಾವಿ ಇದ್ದರೂ ಒಂದು ಮಾತ್ರ ಚಾಲು ಇದೆ. ಒಂದು ಕೊಳವೆ ಬಾವಿ ನೀರು ಕೂಡ ಎಲ್ಲೆಂದರಲ್ಲಿ ಹರಿದು ಹೋಗುತ್ತದೆ. ಒಂದು ಕಡೆ ೨೦ ಸಾವಿರದಷ್ಟು ಅಡಿಕೆ ಸಸಿ ಮಾಡಿದ್ದಾರೆ. ಅವುಗಳನ್ನು ಕೊಳ್ಳುವವರೂ ಇಲ್ಲದ ಸ್ಥಿತಿ ಇದೆ. ಸಸ್ಯಾಭಿವೃದ್ಧಿಗಾಗಿಯೇ ಇರುವ ಈ ಸಸ್ಯ ಕೇಂದ್ರಕ್ಕೆ ಬಂದ ಯಾರೂ ಇದು ಸಸ್ಯ ಕೇಂದ್ರ ಎನ್ನಲು ಸಾಧ್ಯವೇ ಇಲ್ಲ. ಕಳೆದ ವರ್ಷ ಈ ೧೭ ಎಕರೆಯಲ್ಲಿ ೧.೭೫ ಲಕ್ಷ ರು. ಖರ್ಚು ಮಾಡಿ ೫ ಲಕ್ಷ ಆದಾಯ ತೋರಿಸಿದ್ದಾರೆ. ಒಂದೊಂದು ಫಸಲು ಹತ್ತಾರು ಲಕ್ಷ ರು. ಫಲ ಕೊಡುವ ಶಕ್ತಿ ಇದೆ. ಆದರೆ ನಿರ್ವಹಣೆ ಇಲ್ಲ. ಖಾಸಗಿಯವರಲ್ಲಿ ೧೫ ರು.ಗೆ ಸಿಗುವ ಅಡಕೆ ಸಸಿಗಳಿಗೆ ಇಲ್ಲಿ ೨೫ ರು. ಬೆಲೆ. ೨೦ ಸಾವಿರ ಅಡಕೆ ಸಸಿಯಲ್ಲಿ ೨ ಸಾವಿರ ಮಾತ್ರ ಈವರೆಗೆ ಮಾರಾಟವಾಗಿದೆ. ಸಸಿ ನಿರ್ಮಾಣದ ಹಸಿರು ಮನೆ ನಿರ್ವಹಣೆಯೂ ಸಮರ್ಪಕವಿಲ್ಲ.ಇಲ್ಲಿರುವ ಮಾವು, ಚಿಕ್ಕು, ತೆಂಗಿನ ಗಿಡಗಳು ೫೦ ವರ್ಷದ ಆಚೆ ನೆಟ್ಟ ಗಿಡಗಳು, ತೆಂಗಿನ ಗಿಡಗಳು ಒಣಗಿ ಚಂಡಿ ಮುರಿದಿವೆ. ಸಕಾಲಿಕವಾಗಿ ಇಲ್ಲಿನ ಗಿಡಗಳಿಗೆ ಯಾವುದೇ ಉಪಚಾರ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಗಿಡಗಳೂ ಶಕ್ತಿ ಹೀನವಾಗಿವೆ. ಹರಡಿಕೊಂಡ ಮಾವು, ಚಿಕ್ಕು ಗಿಡಗಳು ಲಕ್ಷ ಲಕ್ಷ ಆದಾಯ ಕೊಡುವ ಶಕ್ತಿ ಹೊಂದಿವೆಯಾದರೂ ಇವುಗಳ ನಿರ್ವಹಣೆ ದೋಷ ಎಂಬುದು ಎಂತಹವರಿಗೂ ಥಟ್ಟನೆ ಹೊಳೆಯುತ್ತದೆ. ಇಲ್ಲಿನ ನೂರಾರು ಪೇರಲ ಮರಗಳನ್ನು ಕಡಿಯಲಾಗಿದೆ. ಮತ್ತೆ ಬೆಳೆಸುವ ಯಾವುದೇ ಯೋಚನೆ ಇಲಾಖೆಗೆ ಇದ್ದಂತಿಲ್ಲ. ಇಲ್ಲಿನ ಬಾಳೆ ತೋಟ ಕಂಗೊಳಿಸುತ್ತಿತ್ತು ಎಂಬ ಮಾಹಿತಿ ಇದೆ. ದಶಕಗಳಾಚೆ ಇದು ತೋಟಗಾರರಿಗೆ ಮಾರ್ಗದರ್ಶಿಯಾಗುವಂತಹ ಹತ್ತು ಹಲವು ತೋಟಗಾರಿಕೆ ಬೆಳೆಗಳ ತಾಣವಾಗಿತ್ತು. ಈಗ ಪಾಳು ಬಿದ್ದು ಪ್ರದರ್ಶನ ನೀಡುತ್ತಿದೆ. ಇಲ್ಲಿ ತೋಟಕ್ಕಿಂತ ಬಯಲೋ ಬಯಲು.ಒಬ್ಬ ತೋಟಗಾರಿಕೆ ಸಹಾಯಕ ಹಾಗೂ ಒಬ್ಬ ಗಾರ್ಡನರ ಬಿಟ್ಟರೆ ಅಲ್ಲಿ ಇನ್ನಾರು ಇರುವುದಿಲ್ಲ. ೧೭ ಎಕರೆ ಪ್ರದೇಶದ ತೋಟ ನೋಡಿಕೊಳ್ಳಲು ಒಬ್ಬ ಗಾರ್ಡನರ್ ಸಾಕೆ ಎಂಬ ಪ್ರಶ್ನೆ ಇಲ್ಲಿದೆ. ವರ್ಷಕ್ಕೊಮ್ಮೆ ಸಾಧ್ಯವಿರುವಲ್ಲಿ ಟ್ರ್ಯಾಕ್ಟರ್ ಉಳುಮೆ ಮಾಡುವುದನ್ನು ಬಿಟ್ಟರೆ ಬೇರೇನು ಉಳುಮೆ ಕೆಲಸವಾಗಲಿ, ಗಿಡಗಳಿಗೆ ಗೊಬ್ಬರ ಹಾಕುವ ಕೆಲಸವಾಗಲಿ ಆಗಿಲ್ಲ ಎಂಬುದು ಎಂತವರಿಗೂ ಅರ್ಥವಾಗುತ್ತದೆ. ಸುತ್ತಲೂ ಹಾಕಿದ ತಂತಿ ಬೇಲಿ ಈಗ ಉಳಿದಿಲ್ಲ. ಉಳಿಸಿಕೊಳ್ಳುವ ಪ್ರಯತ್ನವೂ ಆಗಿಲ್ಲ. ಪಾಳು ಬಿದ್ದ ಮನೆ: ತೋಟಗಾರಿಕೆಗೆ ಸಂಬಂಧಿಸಿದ ದಾಸ್ತಾನು, ಸಾಮಗ್ರಿಗಳ ರಕ್ಷಣೆಗಾಗಿ ನಿರ್ಮಿಸಿದ ದೊಡ್ಡದೊಂದು ಮನೆ ಈಗ ಪಾಳು ಮನೆಯಾಗಿದೆ. ಕಟ್ಟಡ ಶಿಥಿಲಗೊಂಡು ಹಂಚು ಒಡೆದು ಹೋಗಿವೆ. ಇದರ ನಿರ್ವಹಣೆಯೂ ಇಲ್ಲ. ಇಲ್ಲಿ ಯಾವುದೇ ತೋಟಗಾರಿಕೆಗೆ ಸಂಬಂಧಿಸಿದ ವಸ್ತುಗಳು ಕೂಡ ಕಾಣುತ್ತಿಲ್ಲ. ಬಿಸಿಲು ಮಳೆಗೆ ತೆರೆದುಕೊಂಡಿದೆ.ಕೋಟೆ ಮಂದಿರ : ಇದು ವಿರಾಟರಾಜನ ಕೋಟೆಯ ಸ್ಥಳ ಎನ್ನಲಾಗುತ್ತಿದೆ. ಈ ತೋಟದ ಸುತ್ತಲೂ ರಾಜರ ಕಾಲದಲ್ಲಿದ್ದ ಟ್ರೇಂಚ್ ಇದೆ. ಈ ಸ್ಥಳದಲ್ಲಿ ಚಾಲುಕ್ಯರ ಕಾಲದ್ದು ಎನ್ನಲಾದ ಶ್ರೀವೀರಭದ್ರೇಶ್ವರ ಕಲ್ಲಿನ ದೇವಸ್ಥಾನವಿದೆ. ಇದು ಕೂಡ ನಿರ್ಲಕ್ಷ್ಯಕ್ಕೊಳಗಾಗಿದೆ. ಇದು ಮುಜರಾಯಿ ಇಲಾಖೆಗೆ ಒಳಟ್ಟಿದೆ.ಇದನ್ನೆಲ್ಲ ನೋಡಿಕೊಳ್ಳಲು ವಾಚ್‌ಮನ್ ಇಲ್ಲ. ಇಲ್ಲಿಗೆ ಬರುವವರು ಹೋಗುವವರ ಬಗ್ಗೆ ಯಾವುದೇ ನಿರ್ಬಂಧವಿಲ್ಲ. ಇಲ್ಲಿರುವ ಗಿಡಗಳ ಅನಾಥ ಸ್ಥಿತಿಗೆ ತೆರೆ ಹಾಡಿ ತೋಟಗಾರಿಕೆ ಮಾರ್ಗದರ್ಶಿಯಾಗುವಂತೆ ಇದರ ನಿರ್ವಹಣೆ ಸಾಧ್ಯವೇ ಎಂಬ ಪ್ರಶ್ನೆ ಮಾತ್ರ ಎಲ್ಲರಿಗೂ ಕೇಳುವಂತಿದೆ. ತಾಲೂಕಿಗೆ ಮಾದರಿಯಾಗಬೇಕಾದ ಸರಕಾರಿ ನರ್ಸರಿ ಮಾತ್ರ ನಿರಾಸೆಯ ಕ್ಷೇತ್ರವಾಗಿದೆ. ಮಂಗಗಳ ವಾಸಸ್ಥಾನವಾಗಿರುವ ಈ ಸಸ್ಯ ತೋಟ ಮೊದಲಿನ ಸಸ್ಯ ಸಂಭ್ರಮದ ಕ್ಷೇತ್ರವಾಗಲು ಸಾಧ್ಯವೇ ಎಂಬ ಪ್ರಶ್ನೆ ಇಲ್ಲಿದೆ.ಸರಕಾರದ ತೋಟವೇ ಹೀಗಾದರೆ ರೈತರ ತೋಟಗಳಿಗೆ ಈ ಇಲಾಖೆಯವರು ಏನು ಮಾರ್ಗದರ್ಶನ ಮಾಡಬಲ್ಲರು. ಕೋಟ್ಯಂತರ ರು. ಬೆಲೆ ಬಾಳುವ ಈ ೧೭ ಎಕರೆ ಪ್ರದೇಶ ಪಾಳು ಭೂಮಿಯಾದರೆ ಹೇಗೆ? ಅಧಿಕಾರಿಗಳ ನಿರಾಸಕ್ತಿಯೇ ಇದಕ್ಕೆಲ್ಲ ಕಾರಣ. ಈಗಲಾದರೂ ಈ ತೋಟವನ್ನು ಅಭಿವೃದ್ಧಿಪಡಿಸಿ ತಾಲೂಕಿಗೆ ಮಾದರಿ ಮಾಡಲಿ ಭಾರತೀಯ ಕೃಷಿ ಕಾರ್ಮಿಕ ಸಂಘ ನಗರ ಘಟಕ ಅಧ್ಯಕ್ಷ ಮಹಲಿಂಗಪ್ಪ ಬಿದರಮಳಿ ಹೇಳಿದರು. ತೋಟ ನಿರ್ವಹಣೆಗೆ ಅನುದಾನದ ಕೊರತೆ ಇದೆ. ಇಲ್ಲಿ ಅಡಕೆ ಬೆಳೆಯಬೇಕು ಎಂಬ ಚಿಂತನೆ ಇದೆ. ಹತ್ತಾರು ಕಾರ್ಮಿಕರು ಇದಕ್ಕೆಲ್ಲ ಬೇಕಾಗುತ್ತದೆ. ಹತ್ತಾರು ವರ್ಷಗಳ ಆಚೆ ಇಲ್ಲಿ ಹತ್ತಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ ಆ ವ್ಯವಸ್ಥೆ ಇಲ್ಲ. ಅಡಕೆ ಸಸಿಗಳನ್ನು ಬಿಟ್ಟರೆ ಬೇರಾವ ಸಸಿಗಳನ್ನೂ ಇಲ್ಲಿ ಬೆಳೆಯುತ್ತಿಲ್ಲ ತೋಟಗಾರಿಕೆ ಸಹಾಯಕ ಎಸ್.ಎಸ್.ಅಂಗಡಿ ಹೇಳಿದರು.