ಮಳೆಗೆ ಕುಸಿದ ಮನೆ: ಸಮಯಪ್ರಜ್ಞೆಯಿಂದ ಪಾರಾದ ಕುಟುಂಬ!

| Published : Jul 19 2024, 12:45 AM IST

ಮಳೆಗೆ ಕುಸಿದ ಮನೆ: ಸಮಯಪ್ರಜ್ಞೆಯಿಂದ ಪಾರಾದ ಕುಟುಂಬ!
Share this Article
  • FB
  • TW
  • Linkdin
  • Email

ಸಾರಾಂಶ

ಶಾರದಾ ಪೂಜಾರಿ ಎಂಬವರ ಈ ಮನೆ, ಸುಮಾರು 30 ವರ್ಷಗಳಷ್ಟು ಹಳೆಯದಾಗಿದ್ದು, ಮನೆಯಲ್ಲಿ 10 ಮಂದಿ ವಾಸವಿದ್ದರು. ಮನೆಯ ಒಂದು ಪಾರ್ಶ್ವ ಕುಸಿದು ಬೀಳುವ ಕೆಲವೇ ನಿಮಿಷಗಳ ಮೊದಲು ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕಡೆಕಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯೊಂದು ಕುಸಿದು ಬಿದ್ದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದ್ದು, ಈ ಸಂದರ್ಭದಲ್ಲಿ ಮನೆಯಲ್ಲಿದ್ದವರು ಹೊರಕ್ಕೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಶಾರದಾ ಪೂಜಾರಿ ಎಂಬವರ ಈ ಮನೆ, ಸುಮಾರು 30 ವರ್ಷಗಳಷ್ಟು ಹಳೆಯದಾಗಿದ್ದು, ಮನೆಯಲ್ಲಿ 10 ಮಂದಿ ವಾಸವಿದ್ದರು. ಮನೆಯ ಒಂದು ಪಾರ್ಶ್ವ ಕುಸಿದು ಬೀಳುವ ಕೆಲವೇ ನಿಮಿಷಗಳ ಮೊದಲು ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಲ್ವರು ಮಕ್ಕಳು ಮನೆಯ ಕೊಠಡಿಯೊಳಗಿದ್ದು, ಮಣ್ಣಿನಿಂದ ನಿರ್ಮಿಸಲಾದ ಮನೆಯ ಗೋಡೆಗಳು ಬಿರುಕುಬಿಟ್ಟು ಕುಸಿಯುವ ಲಕ್ಷಣ ಗೋಚರಿಸಿದ ಕೂಡಲೇ ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಇದಾಗಿ ಒಂದೆರಡು ನಿಮಿಷಗಳಲ್ಲಿಯೇ ಕೋಣೆ ಸಂಪೂರ್ಣ ಕುಸಿದುಬಿದ್ದಿದೆ. ಆದರೆ ಮಕ್ಕಳ ಪುಸ್ತಕ, ಬಟ್ಟೆಗಳು ಮತ್ತು ಇತರ ದಾಖಲೆಗಳು ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಮನೆಯಲ್ಲಿ ವಾಸವಿದ್ದ ಕುಟುಂಬ ಇದೀಗ ಉಡುಪಿಯ ಕಡೆಕಾರ್‌ನಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದೆ.

ಸಿಸಿಟಿವಿ ದೃಶ್ಯ ವೈರಲ್:

ಮನೆ ಕುಸಿದು ಬೀಳುತ್ತಿರುವ ದೃಶ್ಯವು ಮುಂಭಾಗದ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುರಿಯುತ್ತಿರುವ ಮಳೆಯ ನಡುವೆ ಸಂಪೂರ್ಣವಾಗಿ ನೆಲಸಮವಾಗುತ್ತಿರುವ ಮನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.