ಜನರ ಸಮಸ್ಯೆ ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಜಾಸೇವಾ ಇಲಾಖೆಯನ್ನು ರಾಜ್ಯಾದ್ಯಂತ ಆರಂಭಿಸಿದ್ದು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಕಲಘಟಗಿ:ಜನರ ಸಮಸ್ಯೆ ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಜಾಸೇವಾ ಇಲಾಖೆಯನ್ನು ರಾಜ್ಯಾದ್ಯಂತ ಆರಂಭಿಸಿದ್ದು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಸಾಕಷ್ಟು ಸಮಸ್ಯೆಗಳನ್ನು ಪ್ರಜಾಸೇವಾ ಆಂದೋಲನದಲ್ಲಿ ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುತ್ತದೆ. ಯಾವುದೇ ಸಮಸ್ಯೆಯನ್ನು ನಿಗದಿತ ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಜನರು ಸರ್ಕಾರದ ಇಲಾಖೆಗಳಿಗೆ ಅಲೆದಾಡಬಾರದು. ಸರ್ಕಾರದ ಸೇವೆಯನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು‌. ಆ ನಿಟ್ಟಿನಲ್ಲಿ ಪ್ರಜಾ ಆಂದೋಲನ ಸಭೆಗಳನ್ನು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗುವುದು‌. ಕಾನೂನು ಬಾಹಿರ ಯಾವುದೇ ಕೆಲಸವನ್ನು ಮಾಡುವುದಕ್ಕೆ ಬರುವುದಿಲ್ಲ. ಕಾನೂನಿನಡಿಯಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಹೇಳಿದರು.

71 ಅರ್ಜಿಗಳ ಸಲ್ಲಿಕೆ:

ಸಭೆಯಲ್ಲಿ ಸಾರ್ವಜನಿಕರಿಂದ 71 ಅಹವಾಲು ಸ್ವೀಕಾರವಾದವು. ಕೆಲವು ಸ್ಥಳದಲ್ಲಿ ಪರಿಹಾರವಾದರೆ ಇನ್ನು ಕೆಲವು ಅಹವಾಲುಗಳನ್ನು ಮುಂದಿನ ಹಂತದಲ್ಲಿ ಪರಿಹಾರವಾಗಲಿವೆ. ಇದೇ ವೇಳೆ ಮನೆಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಡಿಎಚ್‌ಒ ಡಾ. ಪರಶುರಾಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.