ಕೂಡಲ ಸಂಗಮ ಶ್ರೀ ಕೆಳಗಿಳಿಸುವ ವಿಚಾರ ನೋವು ತಂದಿದೆ: ವಚನಾನಂದ ಶ್ರೀ

| Published : Jul 21 2025, 12:00 AM IST

ಸಾರಾಂಶ

ಕೂಡಲ ಸಂಗಮ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವಂಥ ಘಟನೆಯಿಂದಾಗಿ ಸಹಜವಾಗಿಯೇ ನಮ್ಮ ಮನಸ್ಸಿಗೆ ತೀವ್ರ ನೋವಾಗಿದೆ. ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಏನಾದರೂ ಆದಾಗ ನೋವಾಗುವಂತೆ ನಮಗೂ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುವ ಭರವಸೆ ನಮಗೆ. ಇಂತಹ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನುಡಿದಿದ್ದಾರೆ.

- ಶಾಸಕ ವಿಜಯಾನಂದ ಕಾಶೆಪ್ಪನವರ್ ಸಹ ಒಳ್ಳೆಯವರೆ, ಎಲ್ಲವೂ ಒಳ್ಳೆಯದಾಗುತ್ತದೆ

- ಕೇಂದ್ರ ಸರ್ಕಾರ ಜಾತಿ ಜನಗಣತಿ ಸ್ವಾಗತಾರ್ಹ, ಒಳಪಂಗಡದಿಂದ ಬೇರೆಯಾಗಬೇಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕೂಡಲ ಸಂಗಮ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವಂಥ ಘಟನೆಯಿಂದಾಗಿ ಸಹಜವಾಗಿಯೇ ನಮ್ಮ ಮನಸ್ಸಿಗೆ ತೀವ್ರ ನೋವಾಗಿದೆ. ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಏನಾದರೂ ಆದಾಗ ನೋವಾಗುವಂತೆ ನಮಗೂ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುವ ಭರವಸೆ ನಮಗೆ. ಇಂತಹ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನುಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿಯಾಗಿಯೇ ಇಂತಹ ವಿಚಾರಗಳನ್ನು ಮಾತನಾಡುವುದು. ಅದನ್ನು ಖಾಸಗಿಯಾಗಿಯೇ ಮಾತನಾಡುತ್ತೇವೆ. ಶಾಸಕ ವಿಜಯಾನಂದ ಕಾಶೆಪ್ಪನವರ್ ಸಹ ಒಳ್ಳೆಯವರೆ. ಕೂಡಲ ಸಂಗಮದ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವಂತಹದ್ದು ಏನೂ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರ ಜಾತಿ ಜನಗಣತಿ ನಿರ್ಧಾರ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ. ರಾಜಕೀಯ, ಸಾಮಾಜಿಕವಾಗಿ ವೀರಶೈವ ಲಿಂಗಾಯತರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಯಾರೂ ಒಳಪಂಗಡದಿಂದ ಬೇರೆ ಬೇರೆಯಾಗಬೇಡಿ. ವೀರಶೈವ ಲಿಂಗಾಯತ ಸಮಾಜ ಮೀಸಲಾತಿಯಿಂದ ವಂಚಿತವಾಗಿದೆ. ಜನಸಂಖ್ಯೆಯಲ್ಲಿ ನಾವು ಹೆಚ್ಚಾಗಿದ್ದಾಗ ಮಾತ್ರ ನಮಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಅವರು ತಿಳಿಸಿದರು.

ವೀರಶೈವ ಲಿಂಗಾಯತರು ಒಂದಾಗಿದ್ದರೆ ರಾಜಕೀಯ, ಉದ್ಯೋಗ, ಸಾಮಾಜಿಕ ಹೀಗೆ ಯಾವುದೇ ಕ್ಷೇತ್ರದಲ್ಲಾದರೂ ಅವಕಾಶಗಳು ಸಿಕ್ಕೇ ಸಿಗುತ್ತವೆ. ನಮ್ಮ ಆಚರಣೆಗಳು ಏನೇ ಇದ್ದರೂ ಅವುಗಳನ್ನು ಮನೆಯಲ್ಲಿ ಆಚರಿಸೋಣ. ನಾವೆಲ್ಲಾ ಪೀಠಗಳು, ಮಠಗಳಿಂದ ಹೊರಗೆ ಬಂದಾಗ ಎಲ್ಲರೂ ವೀರಶೈವ ಲಿಂಗಾಯತರಾಗಿ ಒಂದಾಗೋಣ. ವೀರಶೈವ ಲಿಂಗಾಯತದ ಎಲ್ಲ ಒಳ ಪಂಗಡದವರು ಒಂದಾದರೆ ಮಾತ್ರ ಸಾಮಾಜಿಕ, ರಾಜಕೀಯ ಭವಿಷ್ಯವಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

- - -

(ಬಾಕ್ಸ್‌)

* ಗುರು-ವಿರಕ್ತರು ಒಂದಾಗುವ ವಿಚಾರ ಒಳ್ಳೆಯದು

ದಾವಣಗೆರೆ: ದಾವಣಗೆರೆಯಲ್ಲಿ ಜು.21ರಿಂದ 2 ದಿನಗಳ ಕಾಲ ಪಂಚ ಪೀಠಾಧೀಶರು, ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯುತ್ತಿದೆ. ಭವಿಷ್ಯದಲ್ಲಿ ಗುರು ಪರಂಪರೆ- ವಿರಕ್ತ ಪರಂಪರೆ ಸ್ವಾಮಿಗಳನ್ನು ಒಗ್ಗೂಡಿಸಿ ಸಭೆ ಮಾಡುವ ವಿಚಾರ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನುಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹಿರಿಯರಾದ ಶಂಕರ ಬಿದರಿಯಂತಹ ವಿದ್ಯಾವಂತರು ಸಮಾಜದಲ್ಲಿದ್ದಾರೆ. ಇಂತಹ ಹಿರಿಯರ ವಿಚಾರ, ಚಿಂತನೆಗಳನ್ನು ಯಾರೂ ಬೇಡ ಎನ್ನುವುದಕ್ಕೆ ಸಾಧ್ಯ? ಎಲ್ಲರೂ ಒಂದಾಗಿ, ಒಟ್ಟಾಗಿ, ಒಗ್ಗಟ್ಟಿನಿಂದ ಹೋಗೋಣ ಎಂದರು.

- - -

(ವಚನಾನಂದ ಶ್ರೀ)