ದೇವರ ದಾಸಿಮಯ್ಯನವರ ಆದರ್ಶ ಜೀವನ ನಮಗೆ ದಾರಿದೀಪ: ಕುಲಕರ್ಣಿ

| Published : Apr 16 2024, 01:08 AM IST

ಸಾರಾಂಶ

ಕಾಯಕ ನಿಷ್ಠೆಯಲ್ಲಿ ತೊಡಗಿಸಿಕೊಂಡು ಸಮಾನತೆಯಿಂದ ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ಶರಣ ದೇವರ ದಾಸಿಮಯ್ಯನವರು ಮಾನವರಿಗೆ ಮಾನವ ಮುಚ್ಚುವ ಬಟ್ಟೆ ನೇಯ್ದು, ಭಗವಂತನ ನಿಜವಾದ ಕಾಯಕಯೋಗಿ ಎನಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಶಹಾಪುರ

ಕಾಯಕ ನಿಷ್ಠೆಯಲ್ಲಿ ತೊಡಗಿಸಿಕೊಂಡು ಸಮಾನತೆಯಿಂದ ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ಶರಣ ದೇವರ ದಾಸಿಮಯ್ಯನವರು ಮಾನವರಿಗೆ ಮಾನವ ಮುಚ್ಚುವ ಬಟ್ಟೆ ನೇಯ್ದು, ಭಗವಂತನ ನಿಜವಾದ ಕಾಯಕಯೋಗಿ ಎನಿಸಿಕೊಂಡಿದ್ದರು. ಶರಣಕುಲಕ್ಕೆ ತಿಲಕ ಪ್ರಾಯರಾಗಿದ್ದ ಶರಣದ ವಚನಗಳ ಸಾರ ತಿಳಿದುಕೊಂಡರೆ ಬಾಳು ಬಂಗಾರವಾಗುತ್ತದೆ ಎಂದು ಗ್ರೇಡ್-2 ತಹಸೀಲ್ದಾರ್ ಸೇತು ಮಾಧವ ಕುಲಕರ್ಣಿ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ದೇವರ ದಾಸಿಮಯ್ಯನವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ದೇವರ ದಾಸಿಮಯ್ಯನವರು ತನ್ನ ಜೀವಿತದ ಕೊನೆಗಳಿಗೆವರೆಗೂ ಕಾಯಕವನ್ನು ಎಂದೂ ತೊರೆಯಲಿಲ್ಲ. ಕಾಯಕ ನಿಷ್ಠೆ ಎನ್ನುವುದು ಪ್ರತಿಯೊಬ್ಬ ಸಾಧಕನಿಗೂ ಅತಿ ಮುಖ್ಯ ಎನ್ನುವುದನ್ನು ಬಸವಣ್ಣನಿಗೂ ಮೊದಲೇ ಪ್ರಯೋಗದಲ್ಲಿ ಮಾರ್ಗದಲ್ಲಿ ತೋರಿಸಿಕೊಟ್ಟವರು ದೇವರ ದಾಸಿಮಯ್ಯನವರು ಎಂದರು.

ನಿವೃತ್ತ ಲೋಕಾಯುಕ್ತ ಎಸ್.ಪಿ. ಹಾಗೂ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಸಿ.ಎನ್. ಭಂಡಾರೆ ಮಾತನಾಡಿ, ದಾಸಿಮಯ್ಯನ ವಚನಗಳು ದಾಂಪತ್ಯ ಜೀವನ, ಕಾಯಕ ನಿಷ್ಠೆ, ಶಿವತತ್ವ ಲಿಂಗಸಮಾನತೆ, ಭಕ್ತಿ ತತ್ವಗಳಿಂದ ಕೂಡಿವೆ. ಆತ್ಮತತ್ವವನ್ನು ಕುರಿತು ದಾಸಿಮಯ್ಯನ ಮಾತುಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದರು.

ದಾಸಿಮಯ್ಯನವರ ಅನುಯಾಯಿಗಳಾದ ನೇಕಾರರ ಬದುಕು ಅತ್ಯಂತ ಕಷ್ಟಮಯದಿಂದ ಕೂಡಿದೆ. ಸರಕಾರ ಸಮುದಾಯದ ಶೈಕ್ಷಣಿಕ ಸವಲತ್ತು ಹೆಚ್ಚಿಸಬೇಕು. ನೇಕಾರರು ಹೆಚ್ಚಿಗೆ ಇರುವ ಕಡೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಮುದಾಯಕ್ಕೊಂದು ನಿವೇಶನ ನೀಡಬೇಕು ಎಂದರು.

ಕಂದಾಯ ಇಲಾಖೆಯ ನೌಕರರು ಹಾಗೂ ಸಂಘದ ತಾಲೂಕಾಧ್ಯಕ್ಷ ಕೊಟ್ರಪ್ಪ ಚಿಲ್ಲಾಳ, ಉಪಾಧ್ಯಕ್ಷ ಗುರುಸಿದ್ಧಪ್ಪ ಚಿನಗುಡಿ, ತಿಪ್ಪಣ್ಣ ಗಾಗಿ, ದೇವೇಂದ್ರಪ್ಪಗೌಡ, ಸಿದ್ದಣ್ಣ ಗಂಜಿ, ವಿಜಯ ಗುಳೇದ ಸೇರಿದಂತೆ ಇತರರಿದ್ದರು.