ಸಂತರು ಮಹಾತ್ಮರು ಲೋಕದ ಡೊಂಕುಗಳನ್ನು ತಿದ್ದಲು ಜನ್ಮ ತಾಳಿಬರುತ್ತಾರೆ. ಅವರ ಪಾದಸ್ಪರ್ಶದಿಂದ ಈ ಭೂಮಂಡಲ ಪಾವನವಾಗುತ್ತದೆ. ಅಂತಹ ಮಹಾನ್‌ ತಪಸ್ವಿಗಳಲ್ಲಿ ಗರಗದ ಶ್ರೀಮಡಿವಾಳೇಶ್ವರರು ಒಬ್ಬರು ಎಂದು ಹಿಪ್ಪರಗಿ ಆರೂಢ ಬಸವ ಆಶ್ರಮದ ಸಿದ್ಧಾರೂಢ ಶರಣರು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಂತರು ಮಹಾತ್ಮರು ಲೋಕದ ಡೊಂಕುಗಳನ್ನು ತಿದ್ದಲು ಜನ್ಮ ತಾಳಿಬರುತ್ತಾರೆ. ಅವರ ಪಾದಸ್ಪರ್ಶದಿಂದ ಈ ಭೂಮಂಡಲ ಪಾವನವಾಗುತ್ತದೆ. ಅಂತಹ ಮಹಾನ್‌ ತಪಸ್ವಿಗಳಲ್ಲಿ ಗರಗದ ಶ್ರೀಮಡಿವಾಳೇಶ್ವರರು ಒಬ್ಬರು ಎಂದು ಹಿಪ್ಪರಗಿ ಆರೂಢ ಬಸವ ಆಶ್ರಮದ ಸಿದ್ಧಾರೂಢ ಶರಣರು ಹೇಳಿದರು.

ಶ್ರೀರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಶನಿವಾರ ಬ್ರಹ್ಮಾನಂದ ಶಿವಯೋಗಿಗಳ 160ನೇ ಮತ್ತು ಆಶ್ರಮದ ಹಿಂದಿನ ಶ್ರೀಗಳಾದ ಸಿದ್ದೇಶ್ವರ ಸ್ವಾಮೀಜಿಯವರ ೮೨ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಗರಗದ ಮಡಿವಾಳೇಶ್ವರರ ಜೀವನ ಚರಿತ್ರೆ ಕುರಿತ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗರಗದ ಮಡಿವಾಳೇಶ್ವರ ಶಿವಯೋಗಿಗಳು ವಿರಕ್ತ ಪರಂಪರೆಯವರು, ತಮ್ಮ ಸಮಕಾಲೀನರಾದ ಸಿದ್ಧಾರೂಢರು, ನಾಗಲಿಂಗ ಸ್ವಾಮಿಗಳು, ಹಾಲಕೆರೆ ಸ್ವಾಮಿಗಳು, ಶಿಶುನಾಳ ಶರೀಫರ ಜೊತೆಗೆ ಅಧ್ಯಾತ್ಮದ ಬಗ್ಗೆ ಚಿಂತನ ಮಂಥನ ಮಾಡುತ್ತಿದ್ದರು ಎಂಬುವುದನ್ನು ಇತಿಹಾಸದಿಂದ ನೋಡಿ ತಿಳಿಯುತ್ತೇವೆ ಎಂದು ಹೇಳಿದರು.

ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಮಾತನಾಡಿ, ಜೀವನಕ್ಕೆ ಜ್ಞಾನದ ಬೆಳಕು ಅಗತ್ಯ, ದೈನಂದಿನ ಒತ್ತಡದ ಬದುಕಿನಲ್ಲಿ ಅಧ್ಯಾತ್ಮ, ಆಚಾರ-ವಿಚಾರ ಸಂಪ್ರದಾಯಗಳು ಮರೆಮಾಚುತ್ತಿವೆ. ಅದಕ್ಕಾಗಿ ಪ್ರವಚನ ಅಗತ್ಯವಾಗಿದೆ. ಪ್ರವಚನದಿಂದ ನಾವು ಪ್ರಜ್ಞೆ ಜ್ಞಾನ ಮತ್ತು ತಿಳಿವಳಿಕೆ ಪಡೆಯುವುದರೊಂದಿಗ ಜೀವನದ ನೈಜ ಮೌಲ್ಯಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.

ಶಿವನ ಅನುಗ್ರಹದಿಂದ ಜನ್ಮ ತಾಳಿದವರು ಶರಣರು, ಅಂತಹ ಮಹಾನ್ ವ್ಯಕ್ತಿಗಳಲ್ಲಿ ಗರಗದ ಮಡಿವಾಳೇಶ್ವರರು ಒಬ್ಬರು, ಮಡಿವಾಳೇಶ್ವರರು ಸಿದ್ಧಾರೂಢರ ಗರಡಿಯಲ್ಲಿ ಅನುಭವ ಹೊಂದಿದವರು, ಅಂತವರ ಪ್ರವಚನ ಕೇಳುವುದರಿಂದ ನಮ್ಮ ಜೀವನವು ಕೂಡ ಪಾವನವಾಗುತ್ತದೆ ಎಂದು ಹೇಳಿದರು.

ಬೆಳಗಿನ ಜಾವ ಆಶ್ರಮದ ಭಕ್ತರ ಸಮ್ಮುಖದಲ್ಲಿ ಪ್ರಣವ ಧ್ವಜಾರೋಹಣ ಕಾರ್ಯಕ್ರಮವನ್ನು ಗುರುಸಿದ್ದೇಶ್ವರ ಸ್ವಾಮೀಜಿಗಳು ನೆರವೇರಿಸಿದರು.

ಬುದ್ದಪ್ಪ ಕುಂದಗೋಳ, ಗಿರೀಶ ಮುತ್ತೂರ, ರಾಮಣ್ಣ ಕುಲ್ಗೋಡ. ಮಹಾದೇವ ಕವಿಶಟ್ಟಿ, ಮುರುಗೆಪ್ಪ ಮಿರ್ಜಿ, ಶಿವಾನಂದ ದಾಶಾಳ, ಮಾರುತಿ ಗಂಥಡೆ, ವಿರೂಪಾಕ್ಷಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.