ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಚಿತ್ರದುರ್ಗ ತಾಲೂಕು ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕ್ರಾಶ್‍ಕಾರ್ಟ್ ವಿತರಣೆ ಕಾರ್ಯಕ್ರಮವನ್ನು ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಕೆ.ಶಿವಕುಮಾರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಿರಾಶ್ರಿತರ ಪರಿಹಾರ ಕೇಂದ್ರ, ವೃದ್ಧಾಶ್ರಮಗಳು ಜಾಸ್ತಿಯಾಗುತ್ತಿರುವುದು ಸಮಾಜಕ್ಕೆ ಮಾರಕ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ತಾಲೂಕು ನಿವೃತ್ತ ನೌಕರರ ಸಂಘ, ಮನರಂಜನಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರಾಶ್‍ಕಾರ್ಟ್(ಔಷಧಿ ಟ್ಯಾಲಿ) ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಯಸ್ಸಾದ ತಂದೆ ತಾಯಿಗಳನ್ನು ಮಕ್ಕಳು ಆರೈಕೆ ಮಾಡದೆ ನಿರ್ಲಕ್ಷಿಸುತ್ತಿರುವುದರಿಂದ ನಿರಾಶ್ರಿತರ ಪರಿಹಾರ ಕೇಂದ್ರಗಳು ಹಾಗೂ ವೃದ್ಧಾಶ್ರಮಗಳು ಹುಟ್ಟಿಕೊಳ್ಳುತ್ತಿವೆ. ಮತ್ತೆ ಕೆಲವರು ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡು ನಾನಾ ಕಾರಣಗಳಿಂದ ನಿರಾಶ್ರಿತರಾಗುತ್ತಿದ್ದಾರೆ. ನಿರಾಶ್ರಿತರಿಗೆ ಆಪ್ತ ಸಮಾಲೋಚನೆ ನಡೆಸುವ ಬದಲು ಅವರ ಕುಟುಂಬದಲ್ಲಿರುವವರಿಗೆ ಕೌನ್ಸಿಲಿಂಗ್ ನಡೆಸಿ ಮುಪ್ಪಿನ ಕಾಲದಲ್ಲಿ ಹೆತ್ತರವನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಬುದ್ಧಿ ಹೇಳಬೇಕಿದೆ ಎಂದರು.

ನಿರಾಶ್ರಿತರಿಗೆ ಊಟ ವಸತಿ ಕೊಟ್ಟು ಆಶ್ರಯ ನೀಡುವುದರ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೌಶಲ್ಯಾಧಾರಿತ ತರಬೇತಿ, ಕಾರ್ಯಾಗಾರಗಳನ್ನು ನಡೆಸಿದಾಗ ಸಮಾಜದಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕರು ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ್ ಮಾತನಾಡಿ, ನಿರಾಶ್ರಿತರು ಹಾಗೂ ವೃದ್ಧರು ಹಸಿವಿನಿಂದ ನರಳಬಾರದೆಂದು ಪರಿಹಾರ ಕೇಂದ್ರಗಳನ್ನು ತೆರೆದಿದೆ. ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಲಾಗುತ್ತಿದೆ. ನಿರಾಶ್ರಿತರಿಗಾಗಿಯೇ ಸರ್ಕಾರದಿಂದ ಅನೇಕ ಸೌಲಭ್ಯಗಳಿವೆ. ಎಲ್ಲವನ್ನು ತಲುಪಿಸುವುದರ ಜೊತೆ ಕಾನೂನು ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಚಿತ್ರದುರ್ಗ ತಾಲೂಕು ನಿವೃತ್ತ ನೌಕರರ ಸಂಘ ಹಾಗೂ ನಿವೃತ್ತರ ಮನೋರಂಜನಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಿ.ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಪರಮೇಶ್ವರಪ್ಪ, ಖಜಾಂಚಿ ಎಸ್.ಹಾಲಾನಾಯ್ಕ, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಬಿ.ವಿಜಯಕುಮಾರ್, ಆಪ್ತ ಸಮಾಲೋಚಕರಾದ ಎಂ.ಮಹದೇವಯ್ಯ, ಹೆಚ್.ಗೋವಿಂದಯ್ಯ, ನಿವೃತ್ತ ಸಬ್‍ ಇನ್ಸ್‌ಪೆಕ್ಟರ್ ನಾಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.