ಸೋಮವಾರದ ಬಳಿಕ ಹೋರಾಟದ ತೀವ್ರ ಸ್ವರೂಪ

| Published : Feb 16 2024, 01:48 AM IST

ಸಾರಾಂಶ

ರಾಜ್ಯದ 193 ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಜೂಮ್ ಮೀಟಿಂಗ್ ನಡೆಸಿ ಹೋರಾಟದ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಕ್ರೂಢೀಕರಿಸಿ ಹೋರಾಟ ರೂಪಿಸಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ.

ಬೇಡಿಕೆ ಈಡೇರದಿದ್ದರೆ ಮಂಗಳವಾರದಿಂದ ಹೋರಾಟ ತೀವ್ರ । ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸಲ್ಲ । ರಾಜ್ಯ ವಕೀಲರ ಅಧ್ಯಕ್ಷ ವಿಶಾಲ್ ರಘು

ಕನ್ನಡಪ್ರಭ ವಾರ್ತೆ ರಾಮನಗರ

ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಪಿಎಸ್ಸೈ ತನ್ವೀರ್ ಹುಸೇನ್ ಅಮಾನತಿಗೆ ಒತ್ತಾಯಿಸಿ ಸೋಮವಾರದ ನಂತರ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಎಚ್ಚರಿಕೆ ನೀಡಿದರು.

ನಗರದ ಪೊಲೀಸ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯಾಯ ವಕೀಲರ ಸಂಘಗಳು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವರು. ಆಗಲೂ ಬೇಡಿಕೆ ಈಡೇರದಿದ್ದರೆ ಮಂಗಳವಾರದಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ರಾಜ್ಯದ 193 ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಜೂಮ್ ಮೀಟಿಂಗ್ ನಡೆಸಿ ಹೋರಾಟದ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಕ್ರೂಢೀಕರಿಸಿ ಹೋರಾಟ ರೂಪಿಸಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನ್ಯಾಯಾಧೀಶರು ತಮ್ಮ ಕಾರ್ಯ ನಿರ್ವಹಿಸುವಲ್ಲಿ ನಿಷ್ಕ್ರೀಯರಾಗಿದ್ದಾರೆ. ಜಿಲ್ಲಾ ನ್ಯಾಯಾಧೀಶರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕರೆದು ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವ ಅಧಿಕಾರವಿದೆ. ಇಂತಹ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನ್ಯಾಯಾಧೀಶರನ್ನು ಪಡೆದಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಂಗ ನಿಂದನೆ ಮಾಡಿರುವ ಪೋಸ್ಟ್ ನೋಡಿದ ಮೇಲೂ ಆ ವ್ಯಕ್ತಿಯನ್ನು ಜಿಲ್ಲೆಯಿಂದ ಹೊರಗೆ ಏಕೆ ಹಾಕಲಿಲ್ಲ?. ಆತನನ್ನು ಬಂಧಿಸಿ, ಮಧ್ಯಾಹ್ನ ಜಾಮೀನು ಮಂಜೂರು ಮಾಡುತ್ತಾರೆ ಅಂದರೆ ಏನರ್ಥ? ಎಂದು ಪ್ರಶ್ನಿಸಿದರು.

ತಪ್ಪು ಕೆಲಸ ಮಾಡಿದವರು ಯಾರೇ ಆಗಿರಲಿ, ಅವರ ತಪ್ಪಿಗೆ ಬಹಿಷ್ಕಾರ ಹಾಕುತ್ತೇವೆ ಅಂದರೆ ನಾವು ನ್ಯಾಯದ ಪರವಾಗಿ ಹೋಗುತ್ತಿದ್ದೇವೆ ಅಂತ ಅರ್ಥ. ವಕೀಲರಲ್ಲಿ ಎಲ್ಲ ಜಾತಿ, ಧರ್ಮ ದವರು ವಕೀಲರು ಇದ್ದೇವೆ. ನಮ್ಮಲ್ಲಿ ಜಾತಿ, ಧರ್ಮ ಮಧ್ಯೆ ಬಂದಿಲ್ಲ.

ನಾವು ದುರ್ನಡತೆ ತೋರಿದ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆದರೆ, ಜಾತಿ, ಧರ್ಮ ದ ಹೆಸರಿನಲ್ಲಿ ದುರ್ನಡತೆ ತೋರಿದ ವ್ಯಕ್ತಿ ಪರವಾಗಿ ಕೆಲವರು ಹೋರಾಟ ಮಾಡುತ್ತಾರೆಂಬ ಮಾಹಿತಿ ಬಂದಿದೆ. ಇದೊಂದು ವಿಪರ್ಯಾಸದ ಸಂಗತಿ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಮಾಡುವ ಹುನ್ನಾರ ನಡೆಯುತ್ತಿದೆ. ಮಿಸ್ಟರ್ ಡೀಸಿಯವರೇ ಎಸಿ ರೂಮಿನಿಂದ ಹೊರಗೆ ಬಂದು

ಪರಿಸ್ಥಿತಿ ನೋಡಬೇಕು. ಈಗಾಗಲೇ ಹೋರಾಟ ತೀವ್ರ ಸ್ವರೂಪ ಪಡೆಯಬೇಕಿತ್ತು. ನಾವೇ ತಾಳ್ಮೆ ಯಿಂದ ಇದ್ದೇವೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮಾಕುಕತೆ ನಡೆಸಿದ್ದು, ಒಂದು ದಿನ ಕಾಲಾವಕಾಶ ಕೇಳಿದ್ದರು. ಇನ್ನೂ ಉತ್ತರ ಬಂದಿಲ್ಲ.

ನಾವು ಕಾನೂನು ಕೈಗೆತ್ತಿಕೊಳ್ಳುವುದು ಬೇಡ. ನಾಳೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಇದೆ. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡೋಣ. ಇಲ್ಲದಿದ್ದರೆ ಕಾನೂನು ತೊಡಕಾದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಸೋಮವಾರದ ನಂತರ ಹೋರಾಟ ತೀವ್ರಗೊಳಿಸೋಣ ಎಂದು ವಿಶಾಲ್ ರಘು ತಿಳಿಸಿದರು.

--------------------------------

15ಕೆಆರ್ ಎಂಎನ್ 7.ಜೆಪಿಜಿ

ರಾಮನಗರದ ಪೊಲೀಸ್ ಭವನದ ಆವರಣದಲ್ಲಿ ವಕೀಲರನ್ನು ಉದ್ದೇಶಿಸಿ ವಿಶಾಲ್ ರಘು ಮಾತನಾಡಿದರು.

-----------------------------