ಹಾವೇರಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಬಿಸಿಲಿನ ತೀವ್ರತೆ, ಹೆಚ್ಚುತ್ತಿದೆ ನೀರಿನ ಸಮಸ್ಯೆ

| N/A | Published : Mar 21 2025, 12:32 AM IST / Updated: Mar 21 2025, 01:20 PM IST

ಹಾವೇರಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಬಿಸಿಲಿನ ತೀವ್ರತೆ, ಹೆಚ್ಚುತ್ತಿದೆ ನೀರಿನ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ನಗರಕ್ಕೆ ನೀರು ಪೂರೈಸುವ ಜಲಮೂಲಗಳು ಇವೆ. ಆದರೆ, ನಿರ್ವಹಣೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಈ ಸಲವೂ ವಿಫಲರಾಗುತ್ತಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ: ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ. ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಈಗಲೇ ನೀರಿನ ಸಮಸ್ಯೆ ಎದುರಾಗಿದ್ದು, ಮುಂದಿನ ಎರಡು ತಿಂಗಳ ಕಾಲ ಕುಡಿವ ನೀರಿಗೆ ತುಟಾಗ್ರತೆ ಎದುರಾಗುವ ಆತಂಕ ಎದುರಾಗಿದೆ.

ಹಾವೇರಿ ನಗರಕ್ಕೆ ನೀರು ಪೂರೈಸುವ ಜಲಮೂಲಗಳು ಇವೆ. ಆದರೆ, ನಿರ್ವಹಣೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಈ ಸಲವೂ ವಿಫಲರಾಗುತ್ತಿದ್ದಾರೆ. ಕಂಚಾರಗಟ್ಟಿ ಪಂಪ್‌ವೆಲ್‌ ಬಳಿ ತುಂಗಭದ್ರಾ ನದಿಯಲ್ಲಿ ಸದ್ಯಕ್ಕೆ ನೀರಿದೆ. ಆದರೆ, ಪೈಪ್‌ಲೈನ್‌ ದುರಸ್ತಿ, ವಿದ್ಯುತ್‌ ಸಮಸ್ಯೆ, ಶುದ್ಧೀಕರಣ ಘಟಕದಲ್ಲಿ ಸಮಸ್ಯೆ, ಅಲ್ಲಲ್ಲಿ ಪೈಪ್‌ ಒಡೆದು ನೀರು ಪೋಲಾಗುವುದು ಸಾಕಷ್ಟಿದೆ. ಸಮೀಪದ ಹೆಗ್ಗೇರಿ ಕೆರೆಯಲ್ಲೂ ನೀರಿನ ಸಂಗ್ರಹ ಸಾಕಷ್ಟಿದೆ. ಆದರೂ ನೀರು ಪೂರೈಕೆಯಲ್ಲಿ ನಗರಸಭೆ ವಿಫಲವಾಗುತ್ತಿದೆ. ಇದರಿಂದ 10- 15 ದಿನಗಳಾದರೂ ನಗರದ ಹಲವು ವಾರ್ಡುಗಳಿಗೆ ನೀರು ಸಿಗುತ್ತಿಲ್ಲ.

ಕಳೆದ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಬಿದ್ದಿರುವ ಪರಿಣಾಮ ಜಿಲ್ಲೆಯ ಬಹುತೇಕ ಕೆರೆ- ಕಟ್ಟೆಗಳು ತುಂಬಿದ್ದರಿಂದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ಬಂಕಾಪುರ ಪಟ್ಟಣ ಹೊರತುಪಡಿಸಿ ಜಿಲ್ಲೆಯಲ್ಲಿ ಈವರೆಗೂ ಅಷ್ಟಾಗಿ ನೀರಿನ ಅಭಾವ ಎದುರಾಗಿಲ್ಲ.ಕಳೆದ ವರ್ಷ ಬೇಸಿಗೆಯಲ್ಲಿ ಜಿಲ್ಲಾ ಕೇಂದ್ರ ಹಾವೇರಿ, ಸವಣೂರು, ಬಂಕಾಪುರ ಪಟ್ಟಣ ಹೊರತುಪಡಿಸಿ ಉಳಿದ ತಾಲೂಕು ಹಾಗೂ ಪಟ್ಟಣದಲ್ಲಿ ಅಷ್ಟಾಗಿ ನೀರಿನ ಸಮಸ್ಯೆ ಎದುರಾಗಿರಲಿಲ್ಲ. 

ಮುಂಗಾರಿನಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ, ವರದಾ ನದಿಗಳ ಮೂಲಕ ಆಯಾ ಭಾಗದ ಕೆರೆಕಟ್ಟೆಗಳಿಗೆ ನೀರು ತುಂಬಿಸಲಾಗಿದೆ. ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಹರಿದಿರುವ ವರದಾ, ಧರ್ಮಾ, ಕುಮದ್ವತಿ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಸದ್ಯ ತುಂಗಭದ್ರಾ ನದಿಗೆ ಭದ್ರಾ ಜಲಾಶಯದಿಂದ ನೀರು ಹರಿಸಿದ್ದರಿಂದ ನದಿಯಲ್ಲಿ ಸಮರ್ಪಕ ನೀರಿದ್ದು, ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಗುತ್ತಲ, ಹಿರೇಕೆರೂರು, ರಟ್ಟೀಹಳ್ಳಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಕಳೆದ ಮುಂಗಾರಿನಲ್ಲಿ ತುಂಗಭದ್ರಾ ನದಿಯಿಂದ ಹಾವೇರಿ ಹೊರವಲಯದಲ್ಲಿರುವ ಸುಮಾರು 623 ಎಕರೆ ವಿಸ್ತೀರ್ಣದ ಹೆಗ್ಗೇರಿ ಕೆರೆ ಸಂಪೂರ್ಣ ತುಂಬಿಸಲಾಗಿದ್ದು, ಸದ್ಯ ಹಾವೇರಿ ನಗರಕ್ಕೆ ಇದರಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಹಾವೇರಿ ನಗರ 31 ವಾರ್ಡ್ ಒಳಗೊಂಡಿದ್ದು, ನಿತ್ಯ 60 ಲಕ್ಷ ಲೀಟರ್ ನೀರು ಅಗತ್ಯವಿದೆ. ಹೆಗ್ಗೇರಿ ಕೆರೆ ತುಂಬಿದ್ದರೂ ನಗರಸಭೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ನಗರದಲ್ಲಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ನಗರದಲ್ಲಿ ಸದ್ಯ 10- 15 ದಿನಗಳಿಗೆ ಒಮ್ಮೆ ನೀರು ಪೂರೈಸಲಾಗುತ್ತಿದೆ. ಹೆಗ್ಗೇರಿ ಕೆರೆ ತುಂಬಿದ್ದರೂ ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಸದ್ಯ ಬಂಕಾಪುರ ಪಟ್ಟಣದಲ್ಲಿ 12- 15 ದಿನಕ್ಕೆ, ಸವಣೂರು 10 ದಿನಕ್ಕೆ, ಹಾನಗಲ್ಲ 4- 5 ದಿನಕ್ಕೆ, ಶಿಗ್ಗಾಂವಿ 5 ದಿನಕ್ಕೆ, ಬ್ಯಾಡಗಿ ಪಟ್ಟಣದಲ್ಲಿ 2 ದಿನಕ್ಕೆ, ಹಿರೇಕೆರೂರಿನಲ್ಲಿ 2- 3 ದಿನಕ್ಕೆ ಹಾಗೂ ರಾಣಿಬೆನ್ನೂರ ನಗರದಲ್ಲಿ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ.

 ಜಿಲ್ಲೆಯಲ್ಲಿ ಹಾವೇರಿ, ರಾಣಿಬೆನ್ನೂರ, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲೂಕುಗಳಿಗೆ ತುಂಗಭದ್ರಾ ನದಿ ಮೂಲಕ ಹಾಗೂ ಸವಣೂರು, ಶಿಗ್ಗಾಂವಿ, ಬಂಕಾಪುರಕ್ಕೆ ವರದಾ ನದಿ ಮೂಲಕ ಹಾಗೂ ಹಾನಗಲ್ಲ ಪಟ್ಟಣಕ್ಕೆ ಧರ್ಮಾ ನದಿ ಮೂಲಕ ನೀರು ಪೂರೈಸಲಾಗುತ್ತಿದ್ದು, ಮಳೆಗಾಲದ ವೇಳೆ ತುಂಗಭದ್ರಾ, ವರದಾ ಹಾಗೂ ಧರ್ಮಾ ನದಿ ಮೂಲಕ ಆಯಾ ಭಾಗದ ಕೆರೆಗಳಿಗೆ ನೀರು ಹರಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಹಾವೇರಿ ಹೊರವಲಯದ ಹೆಗ್ಗೇರಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಲಾಗಿದ್ದು, ಬೇಸಿಗೆ ಪೂರ್ಣಗೊಳ್ಳುವವರೆಗೂ ನೀರಿನ ಅಭಾವವಾಗದು ಎನ್ನುತ್ತಾರೆ ಅಧಿಕಾರಿಗಳು.

ಸಮಸ್ಯಾತ್ಮಕ 171 ಗ್ರಾಮಗಳು: 

ಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಬಹುದಾದ 171 ಗ್ರಾಮಗಳನ್ನು ಗುರುತಿಸಲಾಗಿದೆ. ಸವಣೂರು ತಾಲೂಕಿನಲ್ಲಿ ಅಂತಹ 2 ಗ್ರಾಮಗಳಿದ್ದರೆ, ಬ್ಯಾಡಗಿ ತಾಲೂಕಿನಲ್ಲಿ ಅತಿ ಹೆಚ್ಚು 34 ಗ್ರಾಮಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹಾವೇರಿ ತಾಲೂಕಿನ 15, ಹಾನಗಲ್ಲ ತಾಲೂಕಿನ 12, ಹಿರೇಕೆರೂರು ತಾಲೂಕಿನ 16, ರಟ್ಟೀಹಳ್ಳಿ ತಾಲೂಕಿನಲ್ಲಿ 10, ರಾಣಿಬೆನ್ನೂರು ತಾಲೂಕಿನಲ್ಲಿ 4 ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 22 ಗ್ರಾಮಗಳನ್ನು ಗುರುತಿಸಲಾಗಿದೆ.

ಗ್ರಾಮಗಳ ಪಟ್ಟಿ ಸಿದ್ಧ: 

ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಮುಂಬರುವ ಏಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಒಂದು ವೇಳೆ ನೀರಿನ ಸಮಸ್ಯೆ ಉಂಟಾದಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ದುರಸ್ತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಕೊಳವೆಬಾವಿಗಳನ್ನು ರಿಪೇರಿ ಮಾಡಿಸಿ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.