ವಿಚ್ಛೇದನ ಪಡೆಯುತ್ತಿದ್ದ ದಂಪತಿ ಒಂದಾಗಿಸಿದ ಜಡ್ಜ್‌

| Published : Jul 14 2024, 01:33 AM IST

ವಿಚ್ಛೇದನ ಪಡೆಯುತ್ತಿದ್ದ ದಂಪತಿ ಒಂದಾಗಿಸಿದ ಜಡ್ಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷುಲ್ಲಕ ಕಾರಣಗಳಿಂದ 13 ವರ್ಷಗಳ ದಾಂಪತ್ಯ ಜೀವನ ಮುರಿದುಕೊಳ್ಳಲು ಮುಂದಾಗಿದ್ದ ದಂಪತಿಯನ್ನು ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಒಂದುಗೂಡಿಸಿದ್ದಾರೆ. ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಭೂಕುಮಾರ್ ಮತ್ತು ಆಶಾರಾಣಿ ದಂಪತಿ ಸಾಮರಸ್ಯದ ಬದುಕಿಗೆ ಮತ್ತೆ ಹೆಜ್ಜೆ ಹಾಕಿದರು.

-13 ವರ್ಷದ ದಾಂಪತ್ಯ ಮುರಿಯಲು ಮುಂದಾಗಿದ್ದ ಸತಿ, ಪತಿ

-ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಿಂದ ಕಲಹ ಇತ್ಯರ್ಥಕನ್ನಡಪ್ರಭ ವಾರ್ತೆ ರಾಮನಗರ

ಕ್ಷುಲ್ಲಕ ಕಾರಣಗಳಿಂದ 13 ವರ್ಷಗಳ ದಾಂಪತ್ಯ ಜೀವನ ಮುರಿದುಕೊಳ್ಳಲು ಮುಂದಾಗಿದ್ದ ದಂಪತಿಯನ್ನು ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಒಂದುಗೂಡಿಸಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು, ವಕೀಲರು, ಕುಟುಂಬ ಸದಸ್ಯರ ಸಲಹೆ, ಮಾರ್ಗದರ್ಶನದಿಂದ ಭೂಕುಮಾರ್ ಮತ್ತು ಆಶಾರಾಣಿ ದಂಪತಿ ಸಾಮರಸ್ಯದ ಬದುಕಿಗೆ ಮತ್ತೆ ಹೆಜ್ಜೆ ಹಾಕಿದರು.

ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಒಂದು ಗಂಡು ಮಗು ಇದೆ. ಇದನ್ನು ತಿಳಿದ ನ್ಯಾಯಾಧೀಶರು ಲೋಕ ಅದಾಲತ್‌ನಲ್ಲಿ ದಂಪತಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿ ಸಾಮರಸ್ಯದ ವೈವಾಹಿಕ ಬದುಕನ್ನು ಸಂತಸದಿಂದ ಮುನ್ನಡೆಸಲು ಪ್ರೇರೇಪಿಸಿದರು. ತಪ್ಪು ತಿದ್ದುಕೊಂಡ ದಂಪತಿ ಕೊನೆಗೂ ಒಂದಾಗಲು ನಿರ್ಧರಿಸಿದರು. ನ್ಯಾಯಾಧೀಶರು, ವಕೀಲರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ಕೂಡಿ ಬಾಳಲು ನಿರ್ಧರಿಸಿದರು.

ಈ ವೇಳೆ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ವಿ.ರೇಣುಕಾ, ಕ್ಷುಲ್ಲಕ ಕಾರಣಗಳಿಂದ ವೈವಾಹಿಕ ಜೀವನ ಮುರಿದುಕೊಳ್ಳುವ ಆತುರವನ್ನು ಯಾರೂ ಮಾಡಬಾರದು. ಪರಸ್ಪರ ಹೊಂದಾಣಿಕೆ ಮೂಲಕ ಬದುಕು ಮುನ್ನಡೆಸಬೇಕು. ಆತುರದ ನಿರ್ಧಾರದಿಂದ ಏನೂ ಅರಿಯದ ಮಕ್ಕಳ ಭವಿಷ್ಯ ಅತಂತ್ರವಾಗಲಿದೆ ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಟಿ.ಮಹೇಶ್ ದಂಪತಿಯನ್ನು ಸಂಧಾನದ ಮೂಲಕ ಮತ್ತೆ ಒಂದುಗೂಡಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್., ದಂಪತಿ ಮತ್ತೆ ಒಂದುಗೂಡಲು ಪ್ರೇರೇಪಿಸಿದ ವಕೀಲರಾದ ಎಂ.ಎ.ಮಣಿ, ವರಲಕ್ಷ್ಮೀ, ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ವಕೀಲರಾದ ಎಲ್.ವಿ.ಪೂರ್ಣಿಮ ಇತರರಿದ್ದರು.