ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಸಿಎಂ ಸಿಹಿ- ಒಳ ಮೀಸಲಿನಿಂದಾಗಿ ಪ್ರಕ್ರಿಯೆ ವಿಳಂಬ । ಹಂತ ಹಂತವಾಗಿ ಖಾಲಿ ಹುದ್ದೆ ಭರ್ತಿ- ರಾಜ್ಯದಲ್ಲಿ ಎರಡೂವರೆ ವರ್ಷದಲ್ಲಿ 40000 ಹುದ್ದೆ ಭರ್ತಿ । ಯುವಕರಿಗೆ ಅಭಯಹೋರಾಟದ ಕಿಚ್ಚು
- ಖಾಲಿ ಹುದ್ದೆಗಳ ಭರ್ತಿಗಾಗಿ ಮಂಗಳವಾರ ಧಾರವಾಡದಲ್ಲಿ ಉದ್ಯೋಗ ಆಕಾಂಕ್ಷಿಗಳ ಬೃಹತ್ ಪ್ರತಿಭಟನೆ- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2.6 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ
- ನೇಮಕಾತಿಗೆ ಅಧಿಸೂಚನೆ ಹೊರಡಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟದ ಪಟ್ಟು ಹಿಡಿದಿದ್ದ ಆಕಾಂಕ್ಷಿಗಳು- ಜಿಲ್ಲಾಡಳಿತ ಮನವಿಗೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟಿದ್ದ ಸಾವಿರಾರು ಪ್ರತಿಭಟನಾಕಾರರು
==
ಕನ್ನಡಪ್ರಭ ವಾರ್ತೆ ಕಾರ್ಕಳ:
ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಭರವಸೆ. ಇದೀಗ ಸರ್ಕಾರದಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂಬರುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯ ಸರ್ಕಾರದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಭರವಸೆ. ಒಳ ಮೀಸಲಾತಿ ಕಾರಣದಿಂದ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಮುಂಬರುವ ಬಜೆಟ್‌ನಲ್ಲಿ ಈ ಕುರಿತ ಘೋಷಣೆ ಮಾಡಲಾಗುವುದು. ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಖಾಲಿ ಹುದ್ದೆಗಳಿದ್ದು, ಹಂತ-ಹಂತವಾಗಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಯುವಕರಿಗೆ ನಾವು ಉದ್ಯೋಗ ಕೊಟ್ಟೇ ಕೊಡ್ತೀವಿ ಎಂದು ಭರವಸೆ ನೀಡಿದರು.
ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಬಿಜೆಪಿ ಬಿಟ್ಟು ಪ್ರತಿಭಟನೆ ಮಾಡಿದ್ದು ಯಾಕೆ?. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ನಡೆಯದ ಕಾರಣ ನಾವು ಅಧಿಕಾರಕ್ಕೆ ಬರುವಾಗಲೇ 2.64 ಲಕ್ಷ ಉದ್ಯೋಗಗಳು ಖಾಲಿಯಿದ್ದವು. ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಎಂದಿದ್ರು. ಕಳೆದ 10 ವರ್ಷಗಳ ಅವಧಿಯಲ್ಲಿ ಅವರು ಎಷ್ಟು ಉದ್ಯೋಗವನ್ನು ಸೃಷ್ಟಿ ಮಾಡಿದರು? ಎಂದು ಪ್ರಶ್ನಿಸಿದರು.==