ರಸ್ತೆ ದುರಸ್ತಿಗೆ ಆಗ್ರಹಿಸಿ ಕರೆ ನೀಡಿದ್ದ ಕವಲೂರು ಬಂದ್ ಯಶಸ್ವಿ

| Published : Oct 02 2024, 01:14 AM IST

ರಸ್ತೆ ದುರಸ್ತಿಗೆ ಆಗ್ರಹಿಸಿ ಕರೆ ನೀಡಿದ್ದ ಕವಲೂರು ಬಂದ್ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ದುರಸ್ತಿಗೆ ಆಗ್ರಹಿಸಿ ಕರೆ ನೀಡಿದ್ದ ಕವಲೂರು ಗ್ರಾಮ ಬಂದ್ ಮಂಗಳವಾರ ಯಶಸ್ವಿಯಾಗಿದೆ.

- ರಸ್ತೆ ದುರಸ್ತಿಗೆ 2 ತಿಂಗಳ ಗಡುವು

- ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕವಲೂರು ಬಂದ್

- ಸಾವಿರಕ್ಕೂ ಅಧಿಕ ಮಹಿಳೆಯರು ಹೋರಾಟದಲ್ಲಿ ಭಾಗಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ರಸ್ತೆ ದುರಸ್ತಿಗೆ ಆಗ್ರಹಿಸಿ ಕರೆ ನೀಡಿದ್ದ ಕವಲೂರು ಗ್ರಾಮ ಬಂದ್ ಮಂಗಳವಾರ ಯಶಸ್ವಿಯಾಗಿದ್ದು, ಗ್ರಾಮದಲ್ಲಿನ ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲ ರಸ್ತೆಗಳನ್ನು ಬಂದ್ ಮಾಡಿ, ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಸ್ತೆ ದುರಸ್ತಿಗೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಗ್ರಾಮದ ರಸ್ತೆಯನ್ನು ದುರಸ್ತಿ ಮಾಡುವುದಕ್ಕೆ ಸರ್ಕಾರಕ್ಕೆ ಮನಸ್ಸಿಲ್ಲ ಎನ್ನುವುದಾದರೇ ಅದನ್ನು ಹೇಳಿಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಗಳು ಗುಂಡಿಗಳಾಗಿವೆ. ಅಲ್ಲಿ ಸಂಚಾರ ಮಾಡುವುದು ಸಾಧ್ಯವೇ ಇಲ್ಲ ಎನ್ನುವಂತೆ ಆಗಿದೆ. ಇಷ್ಟಾದರೂ ಕಳೆದ 15 ವರ್ಷಗಳಿಂದ ರಸ್ತೆಯನ್ನು ದುರಸ್ತಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದರು.

ಮಹಿಳೆಯರು ಹೋರಾಟ:

ಕಲ್ಪವೃಕ್ಷ ಸಂಜೀವಿನಿ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಗ್ರಾಮದ ಅಷ್ಟು ಮಹಿಳಾ ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಂಡಿದ್ದವು.

ಸುಮಾರು ಸಾವಿರಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

2 ತಿಂಗಳ ಗಡುವು:

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ ವಿಠ್ಠಲ ಚೌಗಲೆ ಭೇಟಿ ನೀಡಿ, ಮನವಿ ಸ್ವೀಕಾರ ಮಾಡಿದರು.

ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುತ್ತೇನೆ. ಈಗಾಗಲೇ ರಸ್ತೆ ದುರಸ್ತಿಗಾಗಿ ನಾನಾ ರಸ್ತೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಹಂತದಲ್ಲಿ ಕವಲೂರು ಗ್ರಾಮದ ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು.

ಇದೆಲ್ಲವನ್ನು ಆಲಿಸಿದ ಪ್ರತಿಭಟನಾಕಾರರು 2 ತಿಂಗಳೊಳಗಾಗಿ ರಸ್ತೆಗಳನ್ನು ದುರಸ್ತಿ ಮಾಡಬೇಕು. ಇಲ್ಲದಿದ್ದರೇ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕಲ್ಪವೃಕ್ಷ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ಸಿಂದೋಗಿ, ಶೋಭಾ ಬಿಳಗಿ, ರೇಣುಕಾ ಜೋಗಿನ್, ರತ್ನಾ ವುದಗನೂರು ಪ್ರದೀಪಗೌಡ ಕವಲೂರು, ಶರಣಪ್ಪ ಜಡಿ, ಮಲ್ಲಣ್ಣ ಸಿಳ್ಳಿನ್ ಮೊದಲಾದವರು ಇದ್ದರು.