ಸಾರಾಂಶ
ಮೌಢ್ಯತೆ ಹಾಗೂ ಬಾಯಿ ಚಪಲದ ಹಬ್ಬದ ಆಚರಣೆಗಳಿಗೆ ಬ್ರೇಕ್ ಹಾಕಿ, ಅವುಗಳಿಂದ ಹೊರಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಕುರುಬ ಸಮಾಜ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಹಾವೇರಿ: ಮೌಢ್ಯತೆ ಹಾಗೂ ಬಾಯಿ ಚಪಲದ ಹಬ್ಬದ ಆಚರಣೆಗಳಿಗೆ ಬ್ರೇಕ್ ಹಾಕಿ, ಅವುಗಳಿಂದ ಹೊರಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಕುರುಬ ಸಮಾಜ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಹಾವೇರಿ ತಾಲೂಕು ಕನಕ ನೌಕರರ ಸಂಘ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕನಕ ನೌಕರರ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಯುವ ಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ಮುಳುಗಿ ಮಿಂದೆದ್ದಿದೆ. ಪುಸ್ತಕ ಜ್ಞಾನ ಕುಂಠಿತವಾಗುತ್ತಿದೆ. ಪುಸ್ತಕ ಓದಬೇಕಾದರೆ ಮಸ್ತಕ ಚೆನ್ನಾಗಿರಬೇಕು. ಮಸ್ತಕ ಚೆನ್ನಾಗಿದ್ದರೆ ಮಾತ್ರ ಪುಸ್ತಕ ಅರಿತು ಬರೆಯಬಹುದು. ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ನಾವು ಕಲಿತ ವಿದ್ಯೆ ನಮ್ಮನ್ನ ರಕ್ಷಣೆ ಮಾಡುತ್ತದೆ. ಹೊರ ದೇಶಕ್ಕೆ ಹೋದಾಗ ನಮ್ಮ ವಿದ್ಯೆ ನಮ್ಮನ್ನು ಕಾಪಾಡುತ್ತದೆ. ವಿದ್ಯೆಯನ್ನು ಗ್ರಹಿಸುವ ಶಕ್ತಿಯೂ ಚೆನ್ನಾಗಿರಬೇಕು ಎಂದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು, ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ತಾಲೂಕು ಸಂಘದ ಅಧ್ಯಕ್ಷ ಎಸ್.ಎನ್. ಕಂಬಳಿ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ವಿಜಯಕುಮಾರ ಮುದಕಣ್ಣನವರ, ನಿಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಕೆ., ಶರಣಮ್ಮ ಕೆ., ಮಲ್ಲೇಶ ಕರಿಗಾರ, ರೇಣುಕಾ ಎಸ್., ಡಾ. ರಾಘವೇಂದ್ರ ಜಿಗಳಿಕೊಪ್ಪ, ಕರಿಯಲ್ಲಪ್ಪ ಡಿ.ಕೆ., ರಾಮಕೃಷ್ಣ ಕೆ., ಮುನಿರಾಜು, ಅಶೋಕ ನಡಕಟ್ಟಿನ, ಶಂಭುಲಿಂಗ ಬಡ್ಡಿ, ಎಸ್. ಯಶೋದಾ, ಪ್ರಕಾಶ ಮಾಕೋಡ, ಸಿದ್ದಮ್ಮ ಕರಿಗಾರ, ನಾಗರಾಜ ಆನ್ವೇರಿ, ಬೀರೇಶ ಸಣ್ಣಪುಟ್ಟಕ್ಕನವರ, ಮಹೇಶ ಸವಣೂರು, ಚಂದ್ರಶೇಖರ ಗಂಟಿಸಿದ್ದಪ್ಪನವರ, ನೀಲಮ್ಮ ಮೇಟಿ, ಶಿವಾನಂದ ಮಾಳಿ, ಹನುಮಂತಗೌಡ ಗಾಜಿಗೌಡ್ರ ಪಾಲ್ಗೊಂಡಿದ್ದರು. ಶಿವಾನಂದ ಕಾಕೋಳ ಸ್ವಾಗತಿಸಿದರು. ಗುದ್ಲೇಶ ದೀಪಾವಳಿ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ರಾಜು ಬಜ್ಜಿ ಕಾರ್ಯಕ್ರಮ ನಿರೂಪಿಸಿದರು.ಕುರುಬ ಸಮಾಜ ಕೃಷಿ, ಬಡತನ, ಉಪ ಕಸುಬುಗಳಿಗೆ ಮಹತ್ವ ಕೊಡುತ್ತದೆ. ಆದರೆ ಮಕ್ಕಳ ಶಿಕ್ಷಣ ಕಡೆ ಗಮನಕೊಡುವುದು ತೀರಾ ಕಡಿಮೆ. ಸಮಾಜದವರು ಹೆಚ್ಚು ಜಾಗರೂಕರಾಗಬೇಕಿದೆ. ಉತ್ತಮ ಅಕ್ಷರ ಜ್ಞಾನ ಪಡೆದುಕೊಳ್ಳುವ ಕೆಲಸವಾಗಬೇಕಿದೆ. ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ಹಾವೇರಿಯಲ್ಲಿ ಕೂಡ ಕನಕಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೆ ಶಾಸಕ ರುದ್ರಪ್ಪ ಲಮಾಣಿ, ನಾವು ಸೇರಿ ಸಿಎಂ ಜತೆಗೆ ಚರ್ಚಿಸಿ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಸಮಾಜದ ಶ್ರೀಗಳು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಕೆಲವೇ ದಿನಗಳಲ್ಲಿ ನೂರಾರು ಕೋಟಿ ಆಸ್ತಿಯನ್ನು ಸಮಾಜಕ್ಕೆ ಮಾಡಿದ್ದಾರೆ. ಸಮಾಜದವರು ಮಠದ ಜತೆಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಸಮಾಜದ ವಿದ್ಯಾರ್ಥಿಗಳು ಹೆಚ್ಚು ವಿದ್ಯಾವಂತರಾಗಬೇಕು. ಸಮಾಜದ ಬಗ್ಗೆ ಹೆಮ್ಮೆ ಇರಬೇಕು. ಅನ್ಯರ ಮಾತಿಗೆ ಕಿವಿಗೊಡಬಾರದು. ಶ್ರೀಗಳನ್ನು ಗೌರವದಿಂದ ಕಾಣಬೇಕು ಮತ್ತು ತಲೆಬಾಗಿ ನಡೆಯಬೇಕು ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜೀಗೌಡ್ರ ಹೇಳಿದರು.ಬಡತನದಿಂದ ಮುಕ್ತಿ ಸಿಗುವುದು ಪುಸ್ತಕ ಮತ್ತು ಜ್ಞಾನದಿಂದ ಮಾತ್ರ ಸಾಧ್ಯ. ವ್ಯಕ್ತಿತ್ವ ಜತೆ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಗೊಳಿಸಬೇಕು. ಪುಸ್ತಕ ಓದದೇ ಇರುವವರು ಕಂಪನಿಗಳು ಹಾಗೂ ಸರ್ಕಾರದ ಗುಲಾಮರಾಗುತ್ತಾರೆ. ಯಾವುದೇ ವಿವಿಗೂ ಹೋದರೂ ಅಲ್ಲಿನ ಸೌಲಭ್ಯ ಬಳಸಿಕೊಳ್ಳಬೇಕು. ಈಗಿರುವ ಟೆಕ್ನಾಲಜಿ ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಬೆಂಗಳೂರಿನ ಇನ್ಸೆಂಟ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ವಿನಯಕುಮಾರ ಜಿ.ಬಿ. ಹೇಳಿದರು.