ಸಾರಾಂಶ
ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿಸರ್ಕಾರಕ್ಕೆ ಬಹುಪಾಲು ತೆರಿಗೆ ಮೂಲಕ ಹಣ ತಂದುಕೊಂಡುವ ಅಬಕಾರಿ ಇಲಾಖೆ ಸಿಬ್ಬಂದಿ ಕೊರತೆಯಿಂದ ಸೊರಗಿದೆ. ಮತ್ತೊಂದೆಡೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಜವಾಬ್ದಾರಿ ಕೂಡ ಹೆಚ್ಚಳವಾಗಿದೆ.
ಮಹಾರಾಷ್ಟ್ರ, ಗೋವಾ ರಾಜ್ಯಗಳ ಗಡಿ ಹೊಂದಿರುವ ಬೆಳಗಾವಿ ಸಂಪರ್ಕ ಕೊಂಡಿಯಾಗಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ, ಗೋವಾದಲ್ಲಿ ಮದ್ಯ ದರದಲ್ಲಿ ತೀರಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಗೋವಾದಿಂದ ಆಂಧ್ರ, ತೆಲಂಗಾಣ ರಾಜ್ಯಗಳಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಬೇಕಿದ್ದಲ್ಲಿ ಬೆಳಗಾವಿ ಮೂಲಕವೇ (ಕಾರವಾರ ಮೂಲಕವೂ ಹೋಗಬಹುದು) ಸಂಚರಿಸಬೇಕು. ಆದರೆ, ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಅಬಕಾರಿ ಇಲಾಖೆಗೆ ಅಕ್ರಮ ಮದ್ಯ ಸಾಗಾಟ ಮಟ್ಟಹಾಕುವುದು ಸವಾಲಾಗಿದೆ. ಸಿಬ್ಬಂದಿ ಕೊರತೆ ಬಾಧಿಸುತ್ತಿದೆ. ಹೀಗಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಎರಡ್ಮೂರು ಪಟ್ಟು ಜವಾಬ್ದಾರಿ ಹೆಚ್ಚಿದೆ.67 ಹುದ್ದೆಗಳು ಖಾಲಿ:ಬೆಳಗಾವಿ ಅಬಕಾರಿ ಇಲಾಖೆಗೆ ಸರ್ಕಾರ ವಿವಿಧ ಹಂತದ 153 ಹುದ್ದೆಗಳನ್ನು ಮಂಜೂರು ಮಾಡಿದ್ದು, ಈ ಪೈಕಿ 67 ಹುದ್ದೆಗಳು ಖಾಲಿ ಇದ್ದು, 86 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಬಕಾರಿ ಉಪಾಯುಕ್ತರು, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಅಧೀಕ್ಷಕರು, ಕಚೇರಿ ಅಧೀಕ್ಷಕರು, ಅಬಕಾರಿ ನಿರೀಕ್ಷಕರು, ಶೀಘ್ರ ಲಿಪಿಗಾರರು, ಅಬಕಾರಿ ಮುಖ್ಯಪೇದೆ, ಮಂಜೂರಾದ ಹುದ್ದೆಗಳಿಗೆ ತಕ್ಕಂತೆ ಸಿಬ್ಬಂದಿ ಇದ್ದು, ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಕೆಲವು ಅಧಿಕಾರಿಗಳಿಗೆ ಮುಂಬಡ್ತಿಯಾಗಿದ್ದು, ಚುನಾವಣೆ ನೀತಿ ಸಂಹಿತೆ ಮುಕ್ತಾಯದ ಬಳಿಕ ವರ್ಗವಾಗಲಿದ್ದಾರೆ. ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ?:
ಅಬಕಾರಿ ಉಪ ನಿರೀಕ್ಷಕ -18 ಹುದ್ದೆಗಳು ಮಂಜೂರಾಗಿದ್ದು, ಕೇವಲ 03 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಥಮ ದರ್ಜೆ ಸಹಾಯಕ- 07 ಮಂಜೂರಾಗಿದ್ದು, 05 ಕಾರ್ಯನಿರ್ವಹಿಸುತ್ತಿದ್ದಾರೆ. ದ್ವಿತೀಯ ದರ್ಜೆ ಸಹಾಯಕರು 9 ಮಂಜೂರಾಗಿರುವ ಪೈಕಿ 07, ಬೆರಳಚ್ಚುಗಾರ 2 ಹುದ್ದೆ ಮಂಜೂರಾಗಿದ್ದು, ಎರಡು ಹುದ್ದೆಗಳು ಖಾಲಿ ಇವೆ. ಅಬಕಾರಿ ಪೇದೆ 59 ಮಂಜೂರಾಗಿರುವ ಪೈಕಿ 15 ಜನ, ವಾಹನ ಚಾಲಕ 2 ಹುದ್ದೆ ಪೈಕಿ 1 ಖಾಲಿ, ಗ್ರೂಪ್ ಡಿ-2 ಹುದ್ದೆ ಪೈಕಿ 1 ಹುದ್ದೆ ಖಾಲಿ ಇವೆ. ಪ್ರಮುಖವಾಗಿ ಅಬಕಾರಿ ಉಪ ನಿರೀಕ್ಷಕರು 15 ಹಾಗೂ ಅಬಕಾರಿ ಪೇದೆ 44 ಹುದ್ದೆಗಳು ಖಾಲಿ ಇರುವುದು ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಹೊರೆಯಾಗಿದೆ.ಗೋವಾದಿಂದ ಅಕ್ರಮ ಮದ್ಯ ಸಾಗಾಟ:
ಗೋವಾದಲ್ಲಿ ಮಾತ್ರ ಮಾರಾಟಕ್ಕೆ ಸೀಮಿತವಾಗಿರುವ ಮದ್ಯವನ್ನು ಅಕ್ರಮವಾಗಿ ಹೈದ್ರಾಬಾದ್, ಕೊಲ್ಹಾಪುರ, ಸಾಂಗ್ಲಿ, ತೆಲಂಗಾಣ, ಚೈನ್ನೈ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇನ್ನಿತರೆ ರಾಜ್ಯಗಳಿಗೆ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಬೆಳಗಾವಿ ಮೂಲಕವೇ ಸಾಗಾಟ ಮಾಡುತ್ತಿರುವ ಪ್ರಕರಣಗಳ ಹೆಚ್ಚಾಗಿ ಬೆಳಕಿಗೆ ಬಂದಿವೆ. ಆದರೆ, ಗೋವಾದಿಂದ ಬೇರೆ ರಾಜ್ಯ ಜಿಲ್ಲೆಗಳಿಗೆ ಸಾಗಾಟ ಮಾಡಲು ಬೆಳಗಾವಿ ಮಾರ್ಗವೇ ಅಕ್ರಮ ದಂಧೆ ಕೋರರಿಗೆ ರಹದಾರಿಯಾಗಿದೆ. ಆದರೆ, ಸಿಬ್ಬಂದಿ ಕೊರತೆ ನಡುವೆಯೂ ಬೆಳಗಾವಿ ದಕ್ಷಿಣ ವಲಯದ ಅಬಕಾರಿ ಉಪಆಯುಕ್ತೆ ವನಜಾಕ್ಷಿ ಅವರು, ವಿಧಾನಸಭೆ, ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಲಾರಿಗಟ್ಟಲೇ ಗೋವಾ ಮದ್ಯ ಸಾಗಾಟಗಾರರನ್ನು ಹೆಡೆಮುರಿಕಟ್ಟಿದ್ದಾರೆ. ಖಚಿತ ಮಾಹಿತಿ ಮೇರೆಗೆ ದೊಡ್ಡ ಪ್ರಮಾಣದ ಕುಳಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಇನ್ನೂ ಹೆಚ್ಚಿನ ಸಿಬ್ಬಂದಿ ಇದ್ದಲ್ಲಿ ಅಕ್ರಮ ಮದ್ಯ ಸಾಗಾಟ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ.ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ ಹೊಂದಿರಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯ ಸಾಗಾಟ ಮತ್ತು ಮಾರಾಟ ತಡೆಯಲು ಹರಸಾಹಸ ಪಡಬೇಕಾಗಿದೆ. ಸಿಬ್ಬಂದಿ ಕೊರತೆ ನಡೆಯೂ ಅಬಕಾರಿ ಉಪಆಯುಕ್ತೆ ವನಜಾಕ್ಷಿ ನೇತೃತ್ವದಲ್ಲಿ ಅಧೀನ ಸಿಬ್ಬಂದಿ ಸಾಗಾಟ ಮತ್ತು ಮಾರಾಟ ದಂಧೆಯನ್ನು ಮಟ್ಟಹಾಕುತ್ತಿದ್ದಾರೆ. ಒಂದೇ ತಿಂಗಳಲ್ಲಿ 107 ಪ್ರಕರಣಗಳನ್ನು ದಾಖಲಿಸಿ, 26 ಜನರ ಬಂಧಿಸಿದ್ದಾರೆ. ಒಟ್ಟು ₹ 31,13,318 ಮೌಲ್ಯದ 5720.945 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.------
ಕೋಟ್...ಬೆಳಗಾವಿ ಅಷ್ಟೇ ಅಲ್ಲದೆ ಇಲಾಖೆಯಲ್ಲಿಯೆ ವಿವಿಧ ಹುದ್ದೆಗಳು ಖಾಲಿ ಇವೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
- ವನಜಾಕ್ಷಿ ಅಬಕಾರಿ ಉಪ ಆಯುಕ್ತೆ ದಕ್ಷಿಣ ವಲಯ ಬೆಳಗಾವಿ.