ಡೋಣಿ ಪಾತ್ರದ ರೈತರ ಭೂಮಿ ಸವಳು-ಜವಳಾಗುತ್ತಿದೆ

| Published : Dec 09 2024, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ಜಿಲ್ಲೆಯು ಫಲವತ್ತಾದ ಭೂಮಿಗೆ ಹೆಸರುವಾಸಿಯಾಗಿದೆ. ಈ ಜಿಲ್ಲೆ ಈಗ ಸಮಗ್ರ ನೀರಾವರಿಗೆ ಒಳಪಟ್ಟಿದ್ದು, ಡೋಣಿ ಪಾತ್ರದ ರೈತರ ಜಮೀನು ಸವಳು-ಜವಳಾಗುತ್ತಿದೆ ಎಂದು ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆಯು ಫಲವತ್ತಾದ ಭೂಮಿಗೆ ಹೆಸರುವಾಸಿಯಾಗಿದೆ. ಈ ಜಿಲ್ಲೆ ಈಗ ಸಮಗ್ರ ನೀರಾವರಿಗೆ ಒಳಪಟ್ಟಿದ್ದು, ಡೋಣಿ ಪಾತ್ರದ ರೈತರ ಜಮೀನು ಸವಳು-ಜವಳಾಗುತ್ತಿದೆ ಎಂದು ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಕಳವಳ ವ್ಯಕ್ತಪಡಿಸಿದರು.

ನಗರದ ಹೊರವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ವಿಶ್ವ ಮಣ್ಣು ದಿನಾಚಾರಣೆ ಅಂಗವಾಗಿ ಆಯೋಜಿಸಲಾಗಿದ್ದ ಮಣ್ಣು ಉಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಯ ರೈತರು ಫಲವತ್ತಾದ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿಯನ್ನು ಸಂರಕ್ಷಿಸುವತ್ತ ಚಿಂತನೆ ಮಾಡಬೇಕಾಗಿದೆ. ಈ ಕುರಿತು ವಿಜ್ಞಾನಿಗಳು ಇಲಾಖಾ ಅಧಿಕಾರಿಗಳು ಸೂಕ್ತ ಮಣ್ಣು ಮತ್ತು ನೀರು ಸಂರಕ್ಷಣೆ ಕ್ರಮಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.ಮಣ್ಣು ಉಳಿಸಿ ಅಂದೋಲನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿ, ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣು ಜೀವ ಸಂಕುಲಕ್ಕೆ ಉಚಿತವಾಗಿ ಸಿಕ್ಕಿರುವ ಬೆಲೆ ಕಟ್ಟಲಾಗದ ಸಂಪತ್ತು. ಮಾನವನ ಅತ್ಯವಶ್ಯಕಗಳಾದ ಆಹಾರ, ಬಟ್ಟೆ ಮತ್ತು ವಸತಿಗಳನ್ನು ಉತ್ಪಾದಿಸಲು ಮಣ್ಣೇ ಮೂಲಾಧಾರ. ಕಾರಣ ಮಣ್ಣು ಜೀವನದ ಕಣ್ಣು, ಪ್ರಕೃತಿಯ ಜೀವಾಳ ಇದನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎ.ಭೀಮಪ್ಪ ಮಾತನಾಡಿ, ಪ್ರತಿವರ್ಷ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾತ್ತಿದ್ದು, ವಿದ್ಯಾರ್ಥಿಗಳಲ್ಲಿ ಮಣ್ಣು ಪರೀಕ್ಷೆ, ಮಣ್ಣಿನ ಸಂರಕ್ಷಣೆ, ಬೆಳೆ ಸಂಯೋಜಿತ ರಸಗೊಬ್ಬರಗಳ ಬಳಕೆ, ರಸಗೊಬ್ಬರ ಜೊತೆಯಲ್ಲಿ ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ಪೌಷ್ಠಿಕಾಂಶ ಭದ್ರತೆಯ ಕುರಿತು ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.ಅತಿಥಿ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಮಣ್ಣಿನ ಸಂರಕ್ಷಣೆ ಹಾಗೂ ಸಮರ್ಪಕ ನಿರ್ವಹಣೆ ಅತ್ಯವಶ್ಯ ಹಾಗೂ ಅನಿವಾರ್ಯ. ಆದ್ದರಿಂದ ಇವುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿ, ಅದರ ಉತ್ಪಾದನಾ ಸಾಮರ್ಥ್ಯವನ್ನು ಅತ್ಯುನ್ನತ ಮಟ್ಟದಲ್ಲಿ ಕಾಪಾಡಿ, ಮುಂದಿನ ಪೀಳಿಗೆಗೆ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಣ್ಣಿನ ಗುಣಮಟ್ಟ ಮತ್ತು ಆರೋಗ್ಯ ಕೃಷಿ ಮತ್ತು ಪರಿಸರ ಸಂರಕ್ಷಣೆಯ ಮೂಲಾಧಾರವಾಗಿದೆ. ಆದ್ದರಿಂದ ಮಣ್ಣನ್ನು ಫಲವತ್ತಾಗಿಡಲು ಹಾಗೂ ಅದರ ಉತ್ಪಾದಕತೆಯನ್ನು ಕಾಪಾಡಲು ಮಣ್ಣಿನ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ನಿರ್ವಹಣೆ ಅತ್ಯಗತ್ಯವಾಗಿದೆ. ಮಣ್ಣಿನ ಗುಣಲಕ್ಷಣಗಳಾದ ರಸಸಾರ, ಲವಣಾಂಶ, ಸಾವಯವ ಇಂಗಾಲ, ಪೋಷಕಾಂಶಗಳ ಲಭ್ಯತೆ ಹಾಗೂ ಸೂಕ್ಷ್ಮಜೀವಿಗಳ ಮೇಲೆ ನಿರ್ಧಾರವಾಗಿರುತ್ತದೆ. ಮಣ್ಣಿನ ಗುಣಧರ್ಮಗಳನ್ನು ಅರಿತು ಬೆಳೆಗಳನ್ನು ಆಯ್ಕೆ ಮಾಡಬೇಕು. ಸಮಗ್ರ ಬೇಸಾಯ ಕ್ರಮಗಳಾದ ಕನಿಷ್ಠ ಬೇಸಾಯ, ಬೆಳೆ ಪರಿವರ್ತನೆ, ಬೆಳೆಗಳ ಹೊದಿಕೆ, ಹಸಿರೆಲೆ ಗೊಬ್ಬರ ಬಳಕೆ ಹಾಗೂ ಸೂಕ್ತವಾದ ಉಳಿಮೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ಎನ್.ಡಿ.ಸುನಿತಾ, ಡಾ.ಎಸ್.ಹೆಚ್.ಗುತ್ತರಗಿ, ಡಾ.ಮಹಾಂತೇಶ ತೆಗ್ಗಿ, ಡಾ.ಸಿದ್ದರಾಮ ಪಾಟೀಲ, ಡಾ.ಕಿರಣಕುಮಾರ, ಡಾ.ಸುದೀಪಕುಮಾರ, ಕೆ.ಎನ್.ನದಾಫ್ ಸೇರಿದಂತೆ ಕೃಷಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.