ಮಹಾತ್ಮಾ ಗಾಂಧೀಜಿ ತೆರಿಗೆ ತುಂಬಿ ಎಂದು ಹೇಳುವವರೆಗೂ ತೆರಿಗೆ ತುಂಬಬಾರದು ಎಂದು ರಾಮದಾಸ ಗೌಡರಿಂದ ವಚನ ಪಡೆದಿದ್ದರು. ಅದರಂತೆ ಊರ ಗೌಡರಾಗಿದ್ದರಿಂದ ಇವರು ತೆರಿಗೆ ತುಂಬದಿದ್ದಾಗ ಇಡೀ ಉಳುವರೆ ಊರಿನ ಜನ ತೆರಿಗೆ ತುಂಬದೇ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು.

ದಿನಕರ ದೇಸಾಯಿ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ಯೋಧ ರಾಮದಾಸ ಗೌಡರ ಸ್ಮರಣೆ

ಕನ್ನಡಪ್ರಭ ವಾರ್ತೆ ಅಂಕೋಲಾ

ಮಹಾತ್ಮಾ ಗಾಂಧೀಜಿ ತೆರಿಗೆ ತುಂಬಿ ಎಂದು ಹೇಳುವವರೆಗೂ ತೆರಿಗೆ ತುಂಬಬಾರದು ಎಂದು ರಾಮದಾಸ ಗೌಡರಿಂದ ವಚನ ಪಡೆದಿದ್ದರು. ಅದರಂತೆ ಊರ ಗೌಡರಾಗಿದ್ದರಿಂದ ಇವರು ತೆರಿಗೆ ತುಂಬದಿದ್ದಾಗ ಇಡೀ ಉಳುವರೆ ಊರಿನ ಜನ ತೆರಿಗೆ ತುಂಬದೇ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು ಎಂದು ಸಂಶೋಧಕ ಶ್ಯಾಮಸುಂದರ ಗೌಡ ಹೇಳಿದರು.

ತಾಲೂಕಿನ ಉಳುವರೆಯಲ್ಲಿ ದಿನಕರ ದೇಸಾಯಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯ ಹೋರಾಟಗಾರ ರಾಮದಾಸ ಗೌಡರ ಕುರಿತ ಚಿಂತನಾ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಳುವರೆ ಕೇವಲ ಒಂದು ಹಳ್ಳಿಯ ಹೆಸರಲ್ಲ. ಅದು ಒಂದು ರೈತನ ಸ್ವಾಭಿಮಾನದ ನೆಲೆ. ಹಸಿವಿನ ಎದುರು ತಲೆಬಾಗದ ನಿಷ್ಠೆಯ ನೆಲೆ. ಸರಕಾರ ದಬ್ಬಾಳಿಕೆಯ ಎದುರು ಧೈರ್ಯದಿಂದ ನಿಂತ ಜನಸಂಘಟನೆಯ ನೆಲ. 1932ರ ಕಬ್ಬಿನ ತೋಟ ಸತ್ಯಾಗ್ರಹ ಮತ್ತು 1942ರ ಜಂಗಲ್ ಸತ್ಯಾಗ್ರಹ ಈ ಹಳ್ಳಿ ಸಾಕ್ಷಿಯಾಗಿದೆ. ಅಪ್ಪಟ ದೇಶಭಕ್ತ ರಾಮದಾಸ ಗೌಡರ ನೆನಪನ್ನು ಈ ಮೂಲಕ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕರಬಂಧಿ ಕಬ್ಬಿನ ಗದ್ದೆ ಧ್ವಂಸ ತಾರಿ ಜಂಗಲ್ ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟಗಾರರ ಸಂಸ್ಕರಣ ಸಮಿತಿ ಅಧ್ಯಕ್ಷ ಗೌರೀಶ ನಾಯಕ ಮಾತನಾಡಿ, ರಾಮದಾಸ ಗೌಡರನ್ನು ಅತಿ ಹತ್ತಿರದಿಂದ ಗಮನಿಸಿದವನು ನಾನು. ಅವರ ಗಟ್ಟುಮುಟ್ಟಾದ ದೇಹ, ಉದ್ದನೆಯ ಗಡ್ಡ, ತಲೆಯ ಮೇಲಿನ ಜುಟ್ಟು, ಸ್ವಾತಂತ್ರ್ಯ ಹೋರಾಟ ಮಾಡಿ ಗೆದ್ದ ಕಿಚ್ಚು ಅವರನ್ನು ನೋಡಿದಾಗ ಒಮ್ಮೆಲೆ ಕಂಡುಬರುತ್ತಿತ್ತು. ಸಾಕಷ್ಟು ಹೋರಾಟಗಳನ್ನು ಈ ನೆಲದಲ್ಲಿ ನಡೆದಿದ್ದು, ಹಲವರು ಪಾಲ್ಗೊಂಡಿದ್ದಾರೆ. ಅದರಲ್ಲಿ ಬರುವ ಮುಂಚೂಣಿಯ ಹೆಸರು ರಾಮದಾಸ ಗೌಡರದ್ದು ಎಂದರು.

ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಮಕೃಷ್ಣ ಗುಂದಿ ಮಾತನಾಡಿ, ನಮ್ಮ ಸಂಘಟನೆಯಿಂದ ಮನೆಯಂಗಳದಲ್ಲಿ ಕಾರ್ಯಕ್ರಮದಿಂದ ವಿನೂತನ ಕಾರ್ಯ ಕೈಗೊಂಡಿದ್ದೇವೆ. ನಮ್ಮ ಹಿರಿಯರು ಮಾಡಿದ ಕಾರ್ಯ ಇಂದಿನ ಯುವಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ರಾಮದಾಸ ಗೌಡರ ಕುರಿತು ಸಮಗ್ರ ಕೃತಿಯೊಂದು ಸಿದ್ಧಪಡಿಸುವಂತಾಗಬೇಕು ಎಂದರು.

ಪ್ರತಿಷ್ಠಾನದ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ನಮ್ಮ ಸಂಘ ನಿರಂತರವಾಗಿ ವೈಶಿಷ್ಟ್ಯಮಯ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ. ಹಾಗೇ ಜನಮಾನಸದಿಂದ ದೂರವಾಗಿರುವ ರಾಮದಾಸ ಗೌಡರ ಕುರಿತಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭ ರಾಮದಾಸ ಗೌಡರ ಮೊಮ್ಮಗ ರಾಮದಾಸ ಗೌಡ, ಸಂಧ್ಯಾ ನಾಯ್ಕ, ರಾಮಾ ನಾಯಕ, ಮಂಜುನಾಥ ಗಾಂವಕರ, ಲಲಿತಾ ನಾಯ್ಕ, ನಾಗೇಂದ್ರ ನಾಯ್ಕ ತೊರ್ಕೆ, ಅನಂತ ನಾಯ್ಕ, ಅರುಣ ಆಗೇರ, ಸಂಧ್ಯಾ ಆಗೇರ, ವಿದ್ಯಾ ನಾಯ್ಕ, ರಮೇಶ ನಾಯಕ ಉಪಸ್ಥಿತರಿದ್ದರು. ವೀಣಾ ಹೆಗಡೆ ಪ್ರಾರ್ಥಿಸಿದರು. ಮೋಹನ ಹಬ್ಬು ದಿನಕರ ದೇಸಾಯಿಯವರ ಹಾಡನ್ನು ಪ್ರಸ್ತುತಪಡಿಸಿದರು. ಮಹಾಂತೇಶ ರೇವಡಿ ನಿರೂಪಿಸಿದರು. ಜಯಶೀಲ ಆಗೇರ ವಂದಿಸಿದರು.