ಸಾರಾಂಶ
ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಕಲ್ಪತರು ನಾಡು ತಿಪಟೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ತಿಪಟೂರು
ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಕಲ್ಪತರು ನಾಡು ತಿಪಟೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿ, ತಿಪಟೂರು ಗ್ರಾಮದ ದೇವತೆ ಶ್ರೀ ಕೆಂಪಮ್ಮದೇವಿ, ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ರಾಮ ಮಂದಿರ ಸೇರಿದಂತೆ ದೇವಸ್ಥಾನಗಳನ್ನು ವಿವಿಧ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ, ಅರ್ಚನೆ, ಅಭಿಷೇಕ ಮಾಡಲಾಯಿತು. ಭಕ್ತರು ಆಗಮಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು. ಶ್ರದ್ಧಾ ಭಕ್ತಿಯಿಂದ ಲಕ್ಷ್ಮಿ ಪೂಜೆ : ಗ್ರಾಮೀಣ ಹಾಗೂ ನಗರದಲ್ಲಿಯೂ ವರಮಹಾಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಯಿತು. ವಿವಿಧ ಹೂಗಳು, ಬಾಳೆಕಂದು, ಮಾವಿನ ಎಲೆಗಳಿಂದ ಮನೆಗಳನ್ನು ಶೃಂಗರಿಸಲಾಗಿತ್ತು. ಸಕಲ ಸಂಪತ್ತು ಕರುಣಿಸುವ ಲಕ್ಷ್ಮಿಯನ್ನು ಮನೆಗಳಲ್ಲಿ ಮಂಟಪ ಮಾಡಿ ಪ್ರತಿಷ್ಠಾಪಿಸಲಾಗಿತ್ತು. ವಿವಿಧ ರೀತಿಯ ಹೂವುಗಳು, ಆಭರಣಗಳಿಂದ ಮಹಾಲಕ್ಷ್ಮಿ ಕಳಸ ಹಾಗೂ ಫೋಟೋಗಳನ್ನು ಕಣ್ಮನ ಸೆಳೆಯುವಂತೆ ಭಕ್ತಿಯಿಂದ ಅಲಂಕಾರ ಮಾಡಿ ವಿವಿಧ ರೀತಿಯ ಹಣ್ಣುಗಳು, ಸಿಹಿ ತಿನಿಸುಗಳನ್ನಿಟ್ಟು ವಿಭಿನ್ನವಾಗಿ ವರಮಹಾಲಕ್ಷ್ಮಿಯನ್ನು ಪೂಜಿಸಲಾಗಿತ್ತು. ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಬಳೆ ನೀಡಿ ಸತ್ಕರಿಸಿ ಮಡಿಲು ತುಂಬುತ್ತಿದ್ದ ದೃಶ್ಯಗಳ ಸಾಮಾನ್ಯವಾಗಿತ್ತು. ಹಬ್ಬದ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಅವರವರ ಶಕ್ತ್ಯಾನುಸಾರ ತಾಲೂಕಿನಲ್ಲಿ ಭಕ್ತಿ, ವೈಭವದಿಂದ ಆಚರಿಸುತ್ತಿದ್ದರು. ಕಚೇರಿಗಳಲ್ಲಿ ಮಹಿಳೆಯರ ಹಾಜರಾತಿ ತುಂಬಾ ಕಡಿಮೆ ಇತ್ತು. ಮಹಿಳೆಯರು ಹಬ್ಬವನ್ನು ಸಂತೋಷ-ಸಂಭ್ರಮದಿಂದ ಖುಷಿಖುಷಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡುವ ಮೂಲಕ ವರಮಹಾಲಕ್ಷ್ಮಿಯ ಕೃಪೆಗೆ ಭಾಜನರಾದರು.