ತಾಲೂಕಿಗೊಬ್ಬಶಾಸಕ ಇರುವಂತೆ ಕಾನೂನು ತಿದ್ದುಪಡಿಯಾಗಲಿ: ಎಸ್‌.ಜಿ. ನಂಜಯ್ಯನಮಠ

| Published : Jul 10 2025, 12:49 AM IST / Updated: Jul 10 2025, 12:50 AM IST

ತಾಲೂಕಿಗೊಬ್ಬಶಾಸಕ ಇರುವಂತೆ ಕಾನೂನು ತಿದ್ದುಪಡಿಯಾಗಲಿ: ಎಸ್‌.ಜಿ. ನಂಜಯ್ಯನಮಠ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ತಾಲೂಕಿಗೆ ಒಬ್ಬ ಶಾಸಕರಂತೆ ಕಾನೂನು ತಿದ್ದುಪಡಿಯಾಗಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಒಂದು ತಾಲೂಕಿಗೆ ಒಬ್ಬ ಶಾಸಕರಂತೆ ಕಾನೂನು ತಿದ್ದುಪಡಿಯಾಗಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2028ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಾಗುವ ವದಂತಿಗಳಿದ್ದು, ಕ್ಷೇತ್ರಗಳು, ಶಾಸಕರ, ಸಂಸದರ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಒಬ್ಬೊಬ್ಬ ಶಾಸಕರಿಗೆ 3 ತಾಲೂಕುಗಳ ಗ್ರಾಮಗಳು ಬರುತ್ತವೆ. ಇದರಿಂದ ಆಡಳಿತ ನಡೆಸುವುದು ಕಷ್ಟವಾಗಿದೆ. ಮೂರು ಕೆಡಿಪಿ, ಮೂರು ತಾಲೂಕುಗಳ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಆಡಳಿತ ನಡೆಸುವುದು ಸಮರ್ಪಕವಾಗುತ್ತಿಲ್ಲ. ರಾಜ್ಯದಲ್ಲಿ 236 ತಾಲೂಕುಗಳಿದ್ದು, ಅದರಲ್ಲಿ 224 ಕ್ಷೇತ್ರಗಳಿವೆ ಈ ಬಾರಿ ಜನಸಂಖ್ಯೆ ಹೆಚ್ಚಾಗುವುದರಿಂದ 224 ಕ್ಷೇತ್ರಗಳ ಬದಲಾಗಿ 236 ಮತಕ್ಷೇತ್ರಕ್ಕೆ ವಿಸ್ತರಿಸಿ ತಾಲೂಕಿಗೊಬ್ಬ ಶಾಸಕರನ್ನು ಮಾಡುವ ಅವಶ್ಯಕತೆಯಿದೆ. ಇದರಿಂದ ಶಾಸಕರು ಹಾಗೂ ಸಂಸದರು ಸುಸೂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ಒಂದು ಜಿಲ್ಲೆಗೆ ಒಬ್ಬ ಸಂಸದರು ಇರಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ ಬೀಳಗಿ ಮತಕ್ಷೇತ್ರಕ್ಕೆ ಬದಾಮಿ ತಾಲೂಕಿನ 41 ಗ್ರಾಮಗಳು, ಬಾಗಲಕೋಟೆ ಮತಕ್ಷೇತ್ರಕ್ಕೆ ಹುನಗುಂದ ತಾಲೂಕಿನ 13 ಗ್ರಾಮಗಳು ಬರುತ್ತವೆ. ಕ್ಷೇತ್ರಗಳ ಪುನರ್ವಿಂಗಡಣೆ ಕಾಲಕ್ಕೆ ಒಂದು ವಿಧಾಸಭಾ ಕ್ಷೇತ್ರಕ್ಕೆ ಒಂದು ತಾಲೂಕಿಗೆ ಒಬ್ಬ ಶಾಸಕರಂತೆ ಇರಬೇಕೆಂದು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ನಂತರ ಮುಖ್ಯಮಂತ್ರಿಗಳು, ಸಚಿವರು, ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ್ ಹದ್ಲಿ, ಚಂದ್ರಶೇಖರ ರಾಠೋಡ, ಶ್ರೀನಿವಾಸ ಬಳ್ಳಾರಿ, ನಗರಸಭೆ ಸದಸ್ಯೆ ಮಂಜುಳಾ ಭೂಸಾರೆ ಇದ್ದರು.

ಒಮ್ಮತವಿದ್ದರೆ ಅಧ್ಯಕ್ಷನಾಗಿ ಮುಂದುವರಿಯುವೆ:

ಕಾರ್ಯಕರ್ತರು ಅಪೇಕ್ಷೆಪಟ್ಟರೆ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜು.15ರಂದು ನಡೆಯಲಿದ್ದು, ಜಿಲ್ಲೆಯ ಸಚಿವರು, ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಸಂಸದರು, ಮಾಜಿ ಶಾಸಕರು, ಮುಂಚೂಣಿ ಘಟಕದ ಅಧ್ಯಕ್ಷರು, ಎಲ್ಲಾ ಕಾರ್ಯಕರ್ತರು ಒಮ್ಮತದಿಂದ ಹೇಳಿದರೆ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ, ಬೇರೆಯವರಿಗೆ ಅವಕಾಶ ಕೊಟ್ಟರೆ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತೇನೆ ಎಂದು ಎಸ್.ಜಿ. ನಂಜಯ್ಯ ನಮಠ ಹೇಳಿದರು.