ನಗರಸಭೆ ಸಾಮಾನ್ಯ ಸಭೆಯಲ್ಲಿ ಲೇಔಟ್‌ ಸದ್ದು

| Published : Sep 04 2024, 01:55 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಹೊಸ ಲೇಔಟ್ ನಿರ್ಮಾಣ ಮಾಡುವಲ್ಲಿ ನಗರಸಭೆ ನಿಯಮಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದ್ದು, ಕಳಪೆ ಕಾಮಗಾರಿ ಹಾಗೂ ಸುಳ್ಳು ಮಾಹಿತಿ ನೀಡಿ ಲೇಔಟ್‌ಗಳನ್ನು ನಿರ್ಮಿಸುತ್ತಿರುವವರ ವಿರುದ್ಧ ನಗರಸಭೆಯ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆದಿದ್ದು, ಈ ಬಗ್ಗೆ ಪರಿಶೀಲನಗೆ ಅಧ್ಯಕ್ಷರನ್ನೊಳಗೊಂಡ ಸದಸ್ಯರ ಸಮಿತಿ ರಚಿಸಲು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹೊಸ ಲೇಔಟ್ ನಿರ್ಮಾಣ ಮಾಡುವಲ್ಲಿ ನಗರಸಭೆ ನಿಯಮಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದ್ದು, ಕಳಪೆ ಕಾಮಗಾರಿ ಹಾಗೂ ಸುಳ್ಳು ಮಾಹಿತಿ ನೀಡಿ ಲೇಔಟ್‌ಗಳನ್ನು ನಿರ್ಮಿಸುತ್ತಿರುವವರ ವಿರುದ್ಧ ನಗರಸಭೆಯ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆದಿದ್ದು, ಈ ಬಗ್ಗೆ ಪರಿಶೀಲನಗೆ ಅಧ್ಯಕ್ಷರನ್ನೊಳಗೊಂಡ ಸದಸ್ಯರ ಸಮಿತಿ ರಚಿಸಲು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ನಗರಸಭೆಯಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕುತೂಹಲಕಾರಿ ಪ್ರಸಂಗಗಳು ಬೆಳಕಿಗೆ ಬಂದಿವೆ. ರಸ್ತೆ, ಚರಂಡಿಗಳಿಲ್ಲದೇ ನಿವೇಶನ ಉತಾರ ಹಂಚಿಕೆ ಅನುಮತಿ ನೀಡುತ್ತಿರುವುದೇಕೆ? ಎಂದು ಸದಸ್ಯ ಚಿದಾನಂದ ಹೊರಟ್ಟಿ ಪ್ರಶ್ನಿಸಿದರು. ಕಳೆದ ಐದು ವರ್ಷಗಳಲ್ಲಿ ೫೫ಕ್ಕೂ ಅಧಿಕ ಲೇಔಟ್‌ಗಳು ರಬಕವಿ-ಬನಹಟ್ಟಿ ನಗರದಾದ್ಯಂತ ಇವೆ. ಆದರೆ, ರಬಕವಿಯಲ್ಲಿ ಒಂದು ಉದ್ಯಾನವನ ನಿರ್ವಹಣೆ ಮಾಡಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯೆಂದು ಸದಸ್ಯ ಸಂಜಯ ತೆಗ್ಗಿ ಬೇಸರ ವ್ಯಕ್ತಪಡಿಸಿದರು.ಇದಕ್ಕೆಲ್ಲ ಮೂಗುದಾರ ಹಾಕುವಲ್ಲಿ ನಗರಸಭೆ ಕಟ್ಟೆಚ್ಚರ ವಹಿಸಿ ಮುಂದಿನ ಲೇಔಟ್‌ಗಳ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಮತ್ತು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸವಿವರ ವರದಿಯೊಡನೆ ಸದಸ್ಯರ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಂಡಿತು. ಕೆಲ ಲೇಔಟ್‌ಗಳ ಮಾಲಿಕರು ನಗರಸಭೆ ಆಸ್ತಿ ನಾಶ ಮಾಡಿರುವುದು ಕಂಡು ಬಂದಿದ್ದು, ಚರಂಡಿ, ರಸ್ತೆ ಹಾಳಾಗುವಲ್ಲಿ ನೇರ ಹೊಣೆಗಾರರಾಗಿದ್ದಾರೆ. ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ದೂರು ದಾಖಲಿಸಬೇಕೆಂದು ಸದಸ್ಯ ಶ್ರೀಶೈಲ ಬೀಳಗಿ ಆಗ್ರಹಿಸಿದರು.

ತೆರಿಗೆ ವಿನಾಯ್ತಿ ವಿಸ್ತರಣೆ: ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಭರಿಸಲು ಸೆ.೧೯ ರವರೆಗೆ ಶೇ.೫ ರಷ್ಟು ತೆರಿಗೆ ವಿನಾಯ್ತಿ ಕಲ್ಪಿಸಲಾಗಿದ್ದು, ಸದಸ್ಯರೂ ಸಾರ್ವಜನಿಕರಿಂದ ಆಸ್ತಿ ತೆರಿಗೆ ತುಂಬುವಲ್ಲಿ ಸಹಕರಿಸಬೇಕೆಂದು ಪೌರಾಯುಕ್ತ ಜಗದೀಶ ಈಟಿ ಮನವಿ ಮಾಡಿದರು.ಕಡಿವಾಣ: ನಗರಾದ್ಯಂತ ಕತ್ತೆ, ನಾಯಿ, ಹಂದಿ, ದನಗಳ ಕಾಟದ ಬಗ್ಗೆ ಸಭೆಯಲ್ಲಿ ಮಹತ್ತರ ನಿರ್ಧಾರ ತೆಗೆದುಕೊಂಡ ಶಾಸಕ ಸಿದ್ದು ಸವದಿ, ತಕ್ಷಣವೇ ಬೀದಿಗಳಲ್ಲಿರುವ ಪ್ರಾಣಿಗಳನ್ನು ನಗರಸಭೆ ವ್ಯಾಪ್ತಿಗೆ ಪಡೆದು ಹರಾಜು ಹಾಕುವಂತೆ ಸೂಚಿಸಿದರು. ಅಲ್ಲದೇ, ಸಭೆಯು ಇದಕ್ಕೆ ಸಹಮತ ತೋರಿದ್ದರಿಂದ ಅವಳಿ ನಗರದ ಜನತೆಗೆ ಬಿಡಾಡಿ ದನ, ಕತ್ತೆಗಳ ಕಿರಿಕಿರಿಯಿಂದ ನಿರಾಳ ಮಾಡುವ ಮುನ್ಸೂಚನೆ ನೀಡಿದರು.ವೃತ್ತ ನಾಮಕರಣ: ಬನಹಟ್ಟಿಯ ಸೋಮವಾರ ಪೇಟೆಯಲ್ಲಿನ ರಸ್ತೆಗೆ ಸಂಗೊಳ್ಳಿ ರಾಯಣ್ಣ ವೃತ್ತ ನಾಮಕರಣಕ್ಕೆ ಸಭೆ ಅಂಗೀಕರಿಸಿತು. ಪ್ರಸಕ್ತ ವರ್ಷ ವಿವಿಧ ಘಟಕಗಳಲ್ಲಿನ ಕಾರ್ಮಿಕರ ವೇತನ ಸುಮಾರು ₹ ೧ ಕೋಟಿ ಟೆಂಡರ್ ಕರೆಯಲು ಸಭೆ ನಿರ್ಧರಿಸಿದ್ದು, ೧೫ ಕಾರ್ಮಿಕರನ್ನು ಹೆಚ್ಚುವರಿಯಾಗಿ ಪಡೆಯಲು ಸಭೆ ಉದ್ದೇಶಿಸಿದೆ. ಅಲ್ಲದೇ, ಅವಳಿ ನಗರದಲ್ಲಿನ ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯುವ ಮೂಲಕ ಹೊಸ ನಿರ್ವಹಣೆದಾರರಿಗೆ ಗುತ್ತಿಗೆ ನೀಡಲು ನಿರ್ಣಯಿಸಲಾಗಿದೆ.

ಇದೇ ವೇಳೆ ನೂತನವಾಗಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ವಿದ್ಯಾ ದಭಾಡಿ, ದೀಪಾ ಗಾಡಿವಡ್ಡರನ್ನು ಸನ್ಮಾನಿಸಲಾಯಿತು.ಬಾಕ್ಸ್‌

ಇ-ಆಸ್ತಿಯ ಗೊಂದಲರಾಜ್ಯದಲ್ಲಿ ಪ್ರಥಮ ಬಾರಿ ಚಿತ್ರದುರ್ಗ, ರಾಯಚೂರ, ಚಾಮರಾಜನಗರ ಹಾಗು ಬಾಗಲಕೋಟೆ ಜಿಲ್ಲೆಗಳಲ್ಲಿ ಇ-ಆಸ್ತಿ ಯೋಜನೆ ಏರ್ಪಡಿಸಿದೆ. ಇದರಲ್ಲಿ ಈಗಾಗಲೇ ಆಸ್ತಿಗಳನ್ನು ಖರೀದಿಸಿದ ಮಾಲಿಕರು ಮತ್ತು ಪುರಾತನ ಆಸ್ತಿಗಳನ್ನು ಹೊಂದಿರುವ ಮಾಲೀಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ತಕ್ಷಣ ರಾಜ್ಯ ಸರ್ಕಾರಕ್ಕೆ ಆಗುವ ಸಂಭಾವ್ಯ ತೊಂದರೆಗಳ ಬಗ್ಗೆ ವಿವರಣೆ ಪಡೆದು ಸರಿಪಡಿಸಬೇಕು. ಅಲ್ಲಿಯವರೆಗೆ ಈಗಿನ ವ್ಯವಸ್ಥೆಯನ್ನೇ ಮುಂದುವರೆಸಬೇಕೆಂದು ನಿರ್ಧರಿಸಿದರು. ಈಗಾಗಲೇ ಅವಳಿ ನಗರದಾದ್ಯಂತ ೨೦ ಸಾವಿರಕ್ಕೂ ಅಧಿಕ ಆಸ್ತಿ ದಾಖಲೆಗಳಿವೆ. ಕೆಲ ಪ್ರದೇಶಗಳಲ್ಲಿರುವ ಮನೆ, ನಿವೇಶನಗಳು ಕೆಜೆಪಿಯಾಗದಿರುವ ಕಾರಣ ಇ-ಆಸ್ತಿ ಉತಾರ ದೊರಕುವುದು ಅಸಾಧ್ಯ. ಇವರಿಗೆ ಸಾಲ, ಖರೀದಿ, ಮಾರಾಟ ಸೇರಿದಂತೆ ಇತರೆ ವ್ಯವಹಾರಗಳಿಗೆ ತೀವ್ರ ಸಮಸ್ಯೆಯಾಗಿದ್ದು, ನೋಂದಣಿ ಕಚೇರಿಯಲ್ಲಿಯೂ ಯಾವುದೇ ದಾಖಲಾತಿ ಇ-ಆಸ್ತಿಯಿಂದ ದೊರೆಯುವದಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಯೋಜನೆ ಸರಳೀಕರಣ ಮಾಡುವಂತೆ ಸದಸ್ಯರು ಒತ್ತಾಯಿಸಿದರು.