ಸಾರಾಂಶ
ಕಾರವಾರ: ರಾಜಕೀಯದ ಹೊರತಾಗಿ ಪಕ್ಷಾತೀತವಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ, ಸಮಾಜಮುಖಿ ಕಾರ್ಯಗಳ ಜತೆಗೆ ವಿವಿಧ ಸಮಾಜದೊಂದಿಗೆ ವಿಶೇಷ ಸಹಕಾರ ಮನೋಭಾವ ಹೊಂದಿದ್ದ ರಾಜು ತಾಂಡೇಲ್ ಅವರ ನಿಧನ ಅತ್ಯಂತ ದುಃಖಕರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮತ್ತು ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.
ನಗರದ ಹೋಟೆಲ್‌ವೊಂದರ ಸಭಾಭವನದಲ್ಲಿ ಸಮಸ್ತ ಮೀನುಗಾರ ಸಮುದಾಯ, ರಾಜು ತಾಂಡೇಲ್ ಹಿತೈಷಿಗಳು, ಸ್ನೇಹಿತರು ಮತ್ತು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಿದ್ದ ಅಮರ ಮೀನುಗಾರ ರಾಜು ತಾಂಡೇಲರಿಗೆ ನುಡಿನಮನ - ಅಭಿಮಾನ ತೋರಣ ಸಭೆಯಲ್ಲಿ ಮಾತನಾಡಿದರು.ರಾಜು ತಾಂಡೇಲ್ ಅವರು ಸಮಾಜದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿದವರು. ಹಿಂದಿನಿಂದಲೂ ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದೆ. ಹಿರಿಯರಾಗಿದ್ದರಿಂದ ಗೌರವ ನೀಡುತ್ತಿದ್ದೆ. ಅವರ ಹೆಸರನ್ನು ಅಜರಾಮರವಾಗಿಸಬೇಕು. ಅವರ ಹೋರಾಟ ಮತ್ತು ಜೀವನ ಇತರರಿಗೆ ಮಾದರಿ ಎಂದರು.ಹಿರಿಯ ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, 30 ವರ್ಷಗಳಿಂದ ರಾಜು ತಾಂಡೇಲ್ ನನ್ನ ಒಡನಾಟದಲ್ಲಿ ಇದ್ದ ಸಹೋದರ. ನನ್ನ ಹಿರಿಯ ಮಗನಂತೆ. ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸುವವರೆಗೆ ನಿಲ್ಲುತ್ತಿರಲಿಲ್ಲ. ಆರೋಗ್ಯ, ವೈಯಕ್ತಿಕ ಬದುಕನ್ನೂ ಮರೆತು ಇನ್ನೊಬ್ಬರ ಸಹಾಯಕ್ಕೆ ಮುಂದಾಗುತ್ತಿದ್ದರು ಎಂದರು.ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಚೈತ್ರಾ ಕೊಠಾರಕರ, ದಿ. ರಾಜು ತಾಂಡೇಲ್ ನಮ್ಮ ಕುಟುಂಬದಲ್ಲಿ ಒಬ್ಬರಂತೆ ಇದ್ದರು. ಸದಾ ಸಹಾಯಕ್ಕೆ ಮುಂದಾಗುತ್ತಿದ್ದರು ಎಂದರು.ನಿವೃತ್ತ ಶಿಕ್ಷಕ ಪಿ ಎಸ್ ರಾಣೆ, ಅವರ ಹೋರಾಟದ ಕುರಿತು ವಿವರಿಸಿದರು. ನಗರಸಭಾ ಮಾಜಿ ಸದಸ್ಯ ದೇವಿದಾಸ ನಾಯ್ಕ, ರಾಜು ತಾಂಡೇಲರ ನಿಧನದಿಂದ ಸಮಾಜಕ್ಕೆ ಮತ್ತು ಜಿಲ್ಲೆಗೆ ನಷ್ಟವಾಗಿದೆ ಎಂದರು.ಅರವಿಂದ ಕುಡ್ತಾಳಕರ, ರಾಜು ತಾಂಡೇಲರು ಹೇಗೆ ಬಡವರಿಗೆ ನೆರವಾದರು ಎಂದು ತಿಳಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ನಾಗೇಶ ಕುರ್ಡೆಕರ, ಬಿಜೆಪಿ ಮಂಡಲ ಗ್ರಾಮೀಣ ಅಧ್ಯಕ್ಷ ಸುಭಾಸ್ ಗುನಗಿ, ಬಿಲ್ಟ್ ನಿವೃತ್ತ ಮ್ಯಾನೇಜರ್ ಎಂ. ಗೋವಿಂದ ಮಾತನಾಡಿದರು. ಕಾರ್ಯಕ್ರಮದ ಆಶಯದಂತೆ ರಾಜು ತಾಂಡೇಲ್ ಅವರ ಹೆಸರು ಅಜಾರಮರವಾಗುವಂತೆ ಶ್ರೀಗಂಧದ ಸಸಿಯನ್ನು ಅತಿಥಿಗಳಿಂದ ಹಸ್ತಾಂತರ ಮಾಡಿಕೊಂಡು ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅದನ್ನು ಪೊಲೀಸ್ ಇಲಾಖೆಯ ಆವರಣದಲ್ಲಿ ನೆಡಲು ವ್ಯವಸ್ಥೆ ಮಾಡಲಾಯಿತು.ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಮಾಜಿ ನಗರಸಭಾ ಸದಸ್ಯೆ ದಿವ್ಯಾ ದೇವಿವಾಸ ನಾಯ್ಕ, ನಗರಸಭಾ ಸದಸ್ಯ ಹನುಮಂತ ತಳವಾರ ಮತ್ತಿತರರು ಇದ್ದರು.ಉಪನ್ಯಾಸಕ ಮಾರುತಿ ಹರಿಕಂತ್ರ ಪ್ರಾಸ್ತಾವಿಕ ಮಾತನಾಡಿದರು. ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್, ಅಧ್ಯಕ್ಷ ರೋಷನ್ ಹರಿಕಂತ್ರ, ಕಸಾಪ ತಾಲೂಕು ಅಧ್ಯಕ್ಷ ರಾಮ ನಾಯ್ಕ, ಸಂಘದ ಪ್ರಮುಖರಾದ ರೋಷನ್ ತಾಂಡೇಲ್ ಮತ್ತು ವಿವಿಧ ಸಮುದಾಯದ ಹಲವರು ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿದರು.