ಬಹುನಿರೀಕ್ಷಿತ ಗಣೇಶಪಾಲ ಸೇತುವೆ ಕಾಮಗಾರಿ ಆರಂಭ

| Published : Nov 29 2023, 01:15 AM IST

ಸಾರಾಂಶ

ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಮತ್ತು ವಿಧಾನಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ₹ ೯.೯೫ ಕೋಟಿ ಅನುದಾನ ಬಿಡುಗಡೆ ಮಾಡಿತ್ತು.

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ:

ಬಹು ವರ್ಷಗಳ ಬೇಡಿಕೆಯಾಗಿರುವ ಶಿರಸಿ-ಯಲ್ಲಾಪುರ ತಾಲೂಕಿನ ಮೆಣಸಿ, ವಾನಳ್ಳಿ, ಜಡ್ಡಿಗದ್ದೆ ಭಾಗ ಸಂಪರ್ಕಿಸುವ ಗಣೇಶ ಫಾಲ್ಸ್ ಸೇತುವೆ ಕಾಮಗಾರಿ ಅಂತೂ ಆರಂಭವಾಗಿದ್ದು, ಆ ಭಾಗದ ಜನರ ಕನಸು ನನಸಾಗುವ ಕಾಲ ಬಂದೊದಗಿದೆ.ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಪಂ ಮತ್ತು ಶಿರಸಿ ತಾಲೂಕಿನ ಕೊಡ್ನಗದ್ದೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಬೃಹತ್ ಉದ್ದದ ಸೇತುವೆ ಕಾಮಗಾರಿಯು ಎರಡೂ ತಾಲೂಕಿನ ಸಾರ್ವಜನಿಕರ ಹಲವು ದಶಕದ ಬೇಡಿಕೆಯಾಗಿತ್ತು. ಈಗ ಕಾಮಗಾರಿ ಆರಂಭಿಸಿರುವುದರಿಂದ ಅಲ್ಲಿನ ಜನರಲ್ಲಿ ಸೇತುವೆ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ಜನರಿಗೆ ಬರತೊಡಗಿದೆ.ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಮತ್ತು ವಿಧಾನಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ₹ ೯.೯೫ ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಸುಮಾರು ೧೮೪ ಮೀಟರ್ ಉದ್ದದ ೮ ಮೀಟರ್‌ ಅಗಲದ ಬೃಹತ್ ಸೇತುವೆ ಇದಾಗಲಿದೆ. ೨೦೨೨ ಡಿಸೆಂಬರ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿಗೆ ವಿಘ್ನ ಎದುರಾಗಿತ್ತು. ೧೧ ತಿಂಗಳ ನಂತರ ಸೇತುವೆ ನಿರ್ಮಾಣ ಪ್ರಾರಂಭವಾಗಿರುವುದಕ್ಕೆ ಆ ಭಾಗದ ಜನರಲ್ಲಿ ಸಂತಸ ಮೂಡಿದೆ.

ಈ ವರೆಗೆ ಈ ಪ್ರದೇಶದ ಜನ ಯಲ್ಲಾಪುರದ ಅಡಕೆ ಮಾರುಕಟ್ಟೆಗಾಗಿ ಸೋಂದಾ, ತುಡುಗುಣಿ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದರು. ಸೇತುವೆ ನಿರ್ಮಾಣವಾದ ಬಳಿಕ ಹಿತ್ಲಳ್ಳಿ, ಉಮ್ಮಚಗಿ, ಮಂಚಿಕೇರಿ ಗ್ರಾಪಂ ವ್ಯಾಪ್ತಿಯ ನೂರಾರು ಹಳ್ಳಿಗಳ ಜನರು ಶಿರಸಿಗೆ ಆಗಮಿಸಲು ಮತ್ತು ಕೊಡ್ನಗದ್ದೆ, ವಾನಳ್ಳಿ, ಜಡ್ಡಿಗದ್ದೆ, ಹುಲೇಕಲ್ ಭಾಗದ ನೂರಾರು ಗ್ರಾಮಸ್ಥರಿಗೆ ಯಲ್ಲಾಪುರ ಸಂಪರ್ಕಿಸಲು ಬಹಳ ಸಮೀಪವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.ಕೊಡ್ನಗದ್ದೆ ಗ್ರಾಪಂ ವ್ಯಾಪ್ತಿಯ ಅಡಕೆ ಬೆಳೆಗಾರರು ರಾಶಿ ಅಡಕೆಗೆ (ಕೆಂಪಡಿಕೆ) ಯಲ್ಲಾಪುರ ಮಾರುಕಟ್ಟೆಯನ್ನೇ ಅವಲಂಭಿಸಿದ್ದಾರೆ. ಗಣೇಶ ಫಾಲ್ ಸೇತುವೆ ನಿರ್ಮಾಣವಾದರೆ ಯಲ್ಲಾಪುರ ತಲುಪಲು ೨೦ ಕಿಮೀ ಉಳಿತಾಯವಾಗಲಿದೆ ಎನ್ನುತ್ತಾರೆ ಕೋಡ್ನಗದ್ದೆ ಗ್ರಾಪಂ ಸದಸ್ಯ ಪ್ರವೀಣ ಹೆಗಡೆ.

ಒಟ್ಟಾರೆಯಾಗಿ ಈ ಸೇತುವೆಯಿಂದ ಆ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುವ ಜತೆಗೆ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಹೊಳೆ ಗಣಪತಿ ದರ್ಶನಕ್ಕೆ ಮತ್ತು ಶಿವಗಂಗಾ ಫಾಲ್ಸ್ ವೀಕ್ಷಿಸಲು ಹೆಚ್ಚಿನ ಸಹಕಾರಿಯಾಗಿದೆ.