ಬಿಗ್ ಬಾಸ್ ಯಾರೆಂದು ತೋರಿಸಿದ ಜಿಲ್ಲಾಡಳಿತ

| Published : Oct 08 2025, 02:03 AM IST

ಸಾರಾಂಶ

ಜಲಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಣೆ ಆರೋಪದ ಮೇಲೆ, ಜನಪ್ರಿಯ ಬಿಗ್‌ಬಾಸ್‌ ರಿಯಾಲಿಟಿ ಶೋ ನಡೆಯುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಮಂಗಳವಾರ ಸಂಜೆ ಬೀಗ ಜಡಿದಿದೆ.

ಬಿಡದಿಯ ಜಾಲಿವುಡ್‌ ಸ್ಟುಡಿಯೋದಿಂದ ಮಾಲಿನ್ಯ । ಬಿಗ್‌ ಬಾಸ್‌ ಶೋ ಬಂದ್

---

ಅನುಮತಿ ಇಲ್ಲದೇ ರೆಸಾರ್ಟ್‌ ನಡೆಸಿದ ಆರೋಪ । ಸ್ಟುಡಿಯೋಗೆ ಬೀಗ । ಅರ್ಧಕ್ಕೆ ಶೂಟಿಂಗ್‌ ಸ್ಥಗಿತಸ್ಥಳದಲ್ಲಿ ಭಾರೀ ಹೈಡ್ರಾಮಾ । ಎಲ್ಲಾ ಸ್ಪರ್ಧಿಗಳು ಎರಡೇ ವಾರಕ್ಕೆ ಎಲಿಮಿನೇಟ್‌ । ಹೋಟೆಲ್‌ಗೆ ಶಿಫ್ಟ್‌

---

2ನೇ ಬಾರಿ ಅರ್ಧಕ್ಕೆ ಸ್ಥಗಿತ

2021ರಲ್ಲಿ ಕೋವಿಡ್ ಎರಡನೇ ಅಲೆಯ ಭೀಕರತೆ ಹಾಗೂ ಲಾಕ್ ಡೌನ್ ಹೇರಿಕೆಯಿಂದಾಗಿ ಬಿಗ್ ಬಾಸ್ ಶೋ ಸೀಸನ್-8ನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಸ್ಟುಡಿಯೋ ಬಂದ್‌ ಆದ ಕಾರಣ ಎರಡನೇ ಬಾರಿಗೆ ಶೋ ಸ್ಥಗಿತಗೊಂಡಿದೆ.

==

ಸ್ಟುಡಿಯೋಗೆ ಬೀಗ ಏಕೆ?

ಸ್ಟುಡಿಯೋದಿಂದ ಕೊಳಚೆ ನೀರನ್ನು ಸಂಸ್ಕರಿಸದೆ ಮೋರಿಗೆ ಹರಿದು ಬಿಡಲಾಗಿತ್ತು. ಈ ಬಗ್ಗೆ ಎರಡು ಬಾರಿ ನೋಟಿಸ್‌ ನೀಡಿದರೂ ಸಂಸ್ಥೆ ನಿಯಮ ಪಾಲಿಸಿರಲಿಲ್ಲ. ಜೊತೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದೆ ಅನಧಿಕೃತವಾಗಿ ನಡೆಸಲಾಗುತ್ತಿತ್ತು.

==

ಕನ್ನಡಪ್ರಭ ವಾರ್ತೆ ರಾಮನಗರ

ಜಲಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಣೆ ಆರೋಪದ ಮೇಲೆ, ಜನಪ್ರಿಯ ಬಿಗ್‌ಬಾಸ್‌ ರಿಯಾಲಿಟಿ ಶೋ ನಡೆಯುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಮಂಗಳವಾರ ಸಂಜೆ ಬೀಗ ಜಡಿದಿದೆ. ಇದರಿಂದಾಗಿ ನಾಟಕೀಯ ಸನ್ನಿವೇಶಗಳ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿದ್ದ ನಟ ಸುದೀಪ್‌ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಶೋಗೆ ತಾತ್ಕಾಲಿಕ ತೆರೆಬಿದ್ದಿದೆ.

ಮಂಗಳವಾರ ಬೆಳಗ್ಗೆಯಿಂದಲೂ ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾದ ಹಲವು ಘಟನೆಗಳ ಬಳಿಕ ರಾತ್ರಿ ವೇಳೆಗೆ ಬಿಗ್‌ ಬಾಸ್‌ ಮನೆಗೆ ಬೀಗ ಹಾಕಲಾಗಿದ್ದು, ಶೂಟಿಂಗ್ ಅರ್ಧಕ್ಕೆ ಸ್ಥಗಿತಗೊಂಡಿದೆ. ಶೋದಲ್ಲಿ ಪಾಲ್ಗೊಂಡಿರುವ ಎಲ್ಲಾ 17 ಸ್ಪರ್ಧಿಗಳನ್ನು ಸಮೀಪದ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಈ ಮಧ್ಯೆ, ಜಿಲ್ಲಾಡಳಿತದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಬಿಗ್‌ಬಾಸ್‌ ಮೂಲಗಳು ತಿಳಿಸಿವೆ.

ಬೀಗ ಏಕೆ?:

ಸ್ಟುಡಿಯೋದಿಂದ ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿದು ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿತ್ತು. 2024ರಲ್ಲಿಯೂ ಮಂಡಳಿಯ ರಾಮನಗರ ಪ್ರಾದೇಶಿಕ ಕಚೇರಿಯಿಂದ 2 ಬಾರಿ ನೋಟಿಸ್ ನೀಡಲಾಗಿತ್ತು. ಆದರೂ, ಸಂಸ್ಥೆ ನಿಯಮ ಪಾಲನೆ ಮಾಡಿರಲಿಲ್ಲ. ಇದು ಜಲಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್ ಅನ್ನು ಬಂದ್ ಮಾಡಿಸಿ, ಜಪ್ತಿ ಮಾಡಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ರಾಮನಗರ ತಾಲೂಕು ತಹಸೀಲ್ದಾರ್ ತೇಜಸ್ವಿನಿ ಅವರು ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದ್ದಾರೆ.

ಈ ಮಧ್ಯೆ, ಜಾಲಿವುಡ್ ಸ್ಟುಡಿಯೋಸ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದೆ ಅನಧಿಕೃತವಾಗಿ ನಡೆಯುತ್ತಿರುವುದು ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿತ್ತು. ಹೀಗಾಗಿ, ಈ ಹಿಂದೆಯೇ ಇದಕ್ಕೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಎಚ್ಚರಿಕೆ ನೀಡಿತ್ತು. ಅಲ್ಲದೆ, ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆ ಪಡೆಯುವಂತೆ ನೋಟಿಸ್‌ ನೀಡಲಾಗಿತ್ತು.

ಶೋ ಸ್ಥಗಿತ:

ಸ್ಟುಡಿಯೋದ ‘ಎ’, ‘ಬಿ’ ಮತ್ತು ‘ಸಿ’ ಗೇಟುಗಳಿಗೆ ಹೊರಗಡೆಯಿಂದ ಬೀಗ ಹಾಕುತ್ತಿದ್ದಂತೆ ಎಲ್ಲಾ 17 ಸ್ಪರ್ಧಿಗಳನ್ನು ಜಾಲಿವುಡ್‌ನ ಥಿಯೇಟರ್‌ಗೆ ಶಿಫ್ಟ್‌ ಮಾಡಿ, ಅಲ್ಲಿ ಕೂರಿಸಲಾಯಿತು. ತಕ್ಷಣವೇ ಶೂಟಿಂಗ್‌ ಸ್ಥಗಿತಗೊಳಿಸಲಾಯಿತು. ರೆಸಾರ್ಟ್‌ಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದ ಕಾರಣ, ಒಳಗೆ ಪೂರ್ಣ ಕತ್ತಲು ಕವಿದಿತ್ತು. ಹೀಗಾಗಿ ಪೊಲೀಸರು ಟಾರ್ಟ್‌ ಬೆಳಕಿನಲ್ಲೇ ಸ್ಟುಡಿಯೋ ಒಳಗೆ ತೆರಳಿದಾಗ ಅಲ್ಲಿ ಅಭ್ಯರ್ಥಿಗಳನ್ನು ಥಿಯೇಟರ್‌ನಲ್ಲಿ ಕೂರಿಸಿದ್ದು ಕಂಡುಬಂತು.

ಬಳಿಕ ‘ಡಿ’ ಗೇಟ್ ನಿಂದ ಸ್ಪರ್ಧಿಗಳನ್ನು ಇನ್ನೋವಾ ಕಾರುಗಳಲ್ಲಿ ಸಮೀಪದ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಯಿತು.

=

ಕನ್ನಡಪರ ಸಂಘಟನೆಗಳ ಪ್ರತಿಭಟನೆ:

ಇದಕ್ಕೂ ಮೊದಲು, ಅನಧಿಕೃತವಾಗಿ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ನ್ನು ಬಂದ್ ಮಾಡುವಂತೆ ಆಗ್ರಹಿಸಿ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು ಸ್ಟುಡಿಯೋಸ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಬಳಿಕ, ಸ್ಟುಡಿಯೋಸ್ ಗೆ ಬೀಗ ಜಡಿಯುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

==

----

ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು. ಹೊರಗೆ ಶೂಟಿಂಗ್ ಗಾಗಿ ಇಲಾಖೆಯಿಂದ ಎನ್ ಒಸಿ ಪಡೆಯಬೇಕು. ಆದರೆ, ಒಳಾಂಗಣ ಶೋ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಅದಕ್ಕಾಗಿ ಪರವಾನಿಗೆ ಪಡೆದಿಲ್ಲ. ಏನಾದರೂ ಅವಘಡ ಸಂಭವಿಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ.

- ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬೆಂ.ದಕ್ಷಿಣ ಜಿಲ್ಲೆ.