ಸಾರಾಂಶ
ಕೆಎಸ್ ಆರ್ ಟಿಸಿ ಬಸ್ಸಿಗೆ ಬೈಕ್ ನ ಹ್ಯಾಂಡಲ್ ತಗುಲಿದ್ದು, ಪರಿಣಾಮ ಬೈಕ್ ಸ್ಕೀಡ್ ಆಗಿ ಬಿದ್ದಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಲಾರಿಯೂ ಬೈಕ್ ನಲ್ಲಿದ್ದ ಸವಾರನ ಮೇಲೆ ಹರಿದ ಪರಿಣಾಮ ಜೇಮ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಪ್ರೇಮಿಗಳಿಬ್ಬರೂ ಟ್ರಿಪ್ ಮುಗಿಸಿ ಬೈಕಿನಲ್ಲಿ ವಾಪಾಸ್ಸಾಗುತ್ತಿದ್ದಾಗ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು - ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ೪೮ರ ಟಿ.ಬೇಗೂರು ಗ್ರಾಮದ ಬಳಿ ನಡೆದಿದೆ.ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ವಾಸವಿದ್ದ ಕೊಪ್ಪಳ ಮೂಲದ ಜೇಮ್ಸ್ (23) ಮೃತಪಟ್ಟ ಯುವಕನಾಗಿದ್ದು, ಚೈತ್ರಾ (23) ಗಂಭೀರವಾಗಿ ಗಾಯಗೊಂಡಿರುವ ಯುವತಿಯಾಗಿದ್ದಾಳೆ. ಇವರಿಬ್ಬರೂ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಘಟನಾ ವಿವರ: ಮೃತಪಟ್ಟ ಜೇಮ್ಸ್ ಹಾಗೂ ಗಾಯಗೊಂಡಿರುವ ಚೈತ್ರಾ ಇಬ್ಬರೂ ಪ್ರೇಮಿಗಳಾಗಿದ್ದು, ಮೇ 26ರಂದು ರಜಾ ದಿನದಂದು ತಮ್ಮ ಬೈಕ್ ನಲ್ಲಿ ತುಮಕೂರಿನ ಮಂದಾರಗಿರಿ ಬೆಟ್ಟಕ್ಕೆ ಪ್ರವಾಸಕ್ಕೆ ಹೋಗಿದ್ದು, ಮಧ್ಯಾಹ್ನ ತುಮಕೂರಿನಿಂದ ವಾಪಸ್ ಬೆಂಗಳೂರಿಗೆ ಬರುವಾಗ ಟಿ.ಬೇಗೂರು ಸಮೀಪ ಕೆಎಸ್ ಆರ್ ಟಿಸಿ ಬಸ್ಸಿಗೆ ಬೈಕ್ ನ ಹ್ಯಾಂಡಲ್ ತಗುಲಿದ್ದು, ಪರಿಣಾಮ ಬೈಕ್ ಸ್ಕೀಡ್ ಆಗಿ ಬಿದ್ದಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಲಾರಿಯೂ ಬೈಕ್ ನಲ್ಲಿದ್ದ ಸವಾರನ ಮೇಲೆ ಹರಿದ ಪರಿಣಾಮ ಜೇಮ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ಚೈತ್ರಾ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಯುವತಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ನಡೆಯುತ್ತಿದ್ದಂತೆ ಲಾರಿ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ.ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.