ಕನ್ನಡಪ್ರಭ ವಾರ್ತೆ ಹಾಸನ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು ಮತದಾರರ ಪಟ್ಟಿಗೆ ಅರ್ಹ ಮತದಾರರ ಸೇರ್ಪಡೆ ಹಾಗೂ ಅನರ್ಹ ಮತದಾರರನ್ನು ಕೈಬಿಡವುದು ಮುಖ್ಯ ಉದ್ದೇಶವಾಗಿದೆ ಎಂದರು. ಈ ಹಿಂದೆ ಮತಗಟ್ಟೆ ಅಧಿಕಾರಿಗಳಾಗಿದ್ದ ಶಿಕ್ಷಕರು ನಿವೃತ್ತಿ, ವರ್ಗಾವಣೆ ಹಾಗೂ ಇನ್ನಿತರ ಕಾರಣಗಳಿಂದ ಮತಗಟ್ಟೆಗಳಿಗೆ ಹೊಸದಾಗಿ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ೨೭೭೫ ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ೬೪ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಹಾಗೂ ಬಿಎಲ್‌ಒ ಮತ್ತು ಬಿಎಲ್‌ಎ ವಿಶೇಷ ಸಮಗ್ರ ಪ್ರಕ್ರಿಯೆಯಲ್ಲಿ ಅವರ ಪಾತ್ರ ಬಹು ಮುಖ್ಯವಾಗಿದ್ದು ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.೨೦೦೨ ಮತಪಟ್ಟಿಗೆ ೨೦೨೫ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಲಾಗಿದೆ. ಜೂನ್ ೩೦ ರಿಂದ ಜುಲೈ ೨೯ ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಈಗಾಗಲೇ ಮುದ್ರಿತವಾಗಿರುವ ಎನ್ಯೂಮರೇಷನ ನಮೂನೆಯನ್ನು ನೀಡುತ್ತಾರೆ. ಅದನ್ನು ಭರ್ತಿ ಮಾಡಿ ತಮ್ಮ ಪ್ರಸ್ತುತ ಭಾವಚಿತ್ರವನ್ನು ಅಂಟಿಸಿ ಕಡ್ಡಾಯವಾಗಿ ಸಹಿ ಮಾಡಿ ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು. ಒಂದು ಪ್ರತಿಯನ್ನು ತಮ್ಮ ಬಳಿಯೇ ಇರಿಸಿಕೊಳ್ಳಬೇಕು ಎಂದು ತಿಳಿಸಿದರು.ಕರುಡು ಮತದಾರರ ಪಟ್ಟಿಯನ್ನು ೫-೮-೨೦೨೬ ರಂದು ಪ್ರಕಟಿಸಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ೫-೮-೨೦೨೬ ರಿಂದ ೪-೯-೨೦೨೬ರ ವರೆಗೆ, ಹಕ್ಕು ಮತ್ತು ಆಕ್ಷೇಪಣೆಗಳ ತಿರುವಳಿ ೫-೮-೨೦೨೬ ರಿಂದ ೩-೧೦-೨೦೨೬ರವರೆಗೆ, ಅಂತಿಮ ಮತದಾರರ ಪಟ್ಟಿಯನ್ನು ೭-೧೦-೨೦೨೬ ರಂದು ಪ್ರಕಟಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ಮತದಾರರ ಯಾವುದಾದರೂ ಅಕ್ಷೇಪಣೆಗಳನ್ನು ಸಲ್ಲಿಸಲು ಎರಡು ತಿಂಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ. ಜೊತೆಗೆ ಅಂತಿಮವಾಗಿ ಆಕ್ಷೇಪಣೆಗಳ ಸ್ವಿಕೃತವಾದಲ್ಲಿ ಸ್ವತಃ ಅಭ್ಯರ್ಥಿಗಳೇ ಬಂದು ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕಣಾ ಪ್ರಕ್ರಿಯೆಯಲ್ಲಿ ಸಕ್ರಿಯಾ ಭಾಗವಹಿಸುವಿಕೆ ಮತ್ತು ಪಾರದರ್ಶಕತೆಯನ್ನು ಖಚಿತ ಪಡಿಸಿಕೊಳ್ಳಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಬೂತ್‌ಗಳಿಗೆ ಏಜೆಂಟ್ ಗಳನ್ನು ನೇಮಕ ಮಾಡಲು ವಿನಂತಿಸಲಾಗಿದೆ ಎಂದು ತಿಳಿಸಿದರು.ಈ ವೇಳೆಯಲ್ಲಿ ತಹಸೀಲ್ದಾರ್ ಗೀತಾ ಉಪಸ್ಥಿತರಿದ್ದರು.