ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ರಾಮೀಣ ಪ್ರದೇಶದ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆಯಾಗಿ ಸಹಕಾರ ನೀಡುವುದೇ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಮುಖ್ಯ ಉದ್ದೇಶ ಎಂದು ರೋಟರಿ ಸಂಸ್ಥೆ ತಾಲೂಕು ಅಧ್ಯಕ್ಷ ಹಾಗೂ ರಾಷ್ಟ್ರಪತಿ ವಿಜೇತ ಡಾ.ರಾಘವೇಂದ್ರ ಹೇಳಿದರು.ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ವಿಲಾಸ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋಟರಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿರುವ ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರವನ್ನು ನೇಗಿಲಿಗೆ ಪೂಜೆ ಮಾಡುವ ಚಾಲನೆ ನೀಡಿ ಮಾತನಾಡಿದರು.
ನಗರ ಪ್ರದೇಶದ ಶಿಬಿರಾರ್ಥಿಗಳು ಗ್ರಾಮೀಣ ಪ್ರದೇಶದ ವಾತಾವರಣಕ್ಕೆ ಹೊಂದಿಕೊಂಡು ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಜೊತೆಗೆ ಗ್ರಾಮೀಣ ಪ್ರದೇಶದ ಸಂಪ್ರದಾಯ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಶಿಬಿರದ ಉದ್ದೇಶ ಎಂದರು.ಈ ವೇಳೆ ಕೆ.ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಹರ್ಷಿತಾ, ಸದಸ್ಯರಾದ ರಾಜು, ಮಹೇಶ್ವರಿ, ಅಪ್ಪಾಜಿ, ರೋಟರಿ ಸಂಸ್ಥೆ ಶ್ರೀರಂಗಪಟ್ಟಣದ ಕಾರ್ಯದರ್ಶಿ ನಾಗೇಂದ್ರ, ಶಾರದಾ ವಿಲಾಸ ಕಾನೂನು ಕಾಲೇಜಿನ ಪ್ರಾಂಶುಪಾಲ ಮಹೇಶ್ ಸೇರಿದಂತೆ ಇತರರು ಇದ್ದರು.
ನಿರೀಕ್ಷಿತ ಗುರಿ ಸಾಧನೆಯತ್ತ ಚಿತ್ತ ಹರಿಸಿ: ಮಂಜುನಾಥ್
ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾರ್ಥಿಗಳು ಕಲಿಕಾ ಸಮಯದಲ್ಲಿ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುವ ಜೊತೆಗೆ ಉತ್ತಮ ಚಿಂತನೆ ಮೈಗೂಡಿಸಿಕೊಂಡು ನಿರೀಕ್ಷಿತ ಗುರಿ ಸಾಧನೆ ಮಾಡಿ ಎಂದು ಪ್ರಾಂಶುಪಾಲ ಅಲಂಗೂರು ಮಂಜುನಾಥ್ ತಿಳಿಸಿದರು.ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಪ್ರಭಾವ ಬೀರುತ್ತವೆ ಎಂದರು.ಕನ್ನಡ ಪ್ರಾಧ್ಯಾಪಕ ಎನ್.ಎಸ್.ಶಂಕರೇಗೌಡ ಮಾತನಾಡಿ, ನಿರಂತರ ಪ್ರಯತ್ನಗಳು ಸಾಧನೆಗೆ ಕಾರಣ ಆಗುತ್ತದೆ. ಕಾಲೇಜು ಸಮಯದಲ್ಲಿ ಉಡಾಫೆ ಬಿಟ್ಟು, ಕಲಿಕೆಯತ್ತ ಗಮನ ಹರಿಸಿ ಎಂದರು.
ಈ ವೇಳೆ ಐಕ್ಯೂಎಸಿ ವಿಭಾಗದ ಸಂಚಾಲಕಿ ಸೀಮಾ ಕೌಸರ್, ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಸುಧಾ ಬಿದರಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಮಾಹಿತಿ ತಂತ್ರಜ್ಞಾನ ಸಂಯೋಜಕ ಗುರು ಪ್ರಸಾದ್, ಪ್ರಾಧ್ಯಾಪಕ ಬಿ.ಸಿ.ರವಿ, ತಾರಾ ಜಯಲಕ್ಷ್ಮಿ, ಅಧೀಕ್ಷಕ ಕುಮಾರಸ್ವಾಮಿ, ಆನಂದ್ ಕುಮಾರ್ ನೀಲಿ, ಉಪನ್ಯಾಸಕರಾದ ಎಂ.ಎಚ್.ಮೂರ್ತಿ, ಉಮೇಶ್, ರಘು, ಶಿವರಾಮು, ಸೇರಿದಂತೆ ಹಲವರು ಭಾಗವಹಿಸಿದ್ದರು.