ಮಂತ್ರಿ ಮಂಡಲಕ್ಕೆ ಗೋಮಾತೆ ಬಗ್ಗೆ ಕನಿಕರವಿಲ್ಲ

| Published : Jan 15 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದ ಮುಖ್ಯಮಂತ್ರಿಯನ್ನೊಳಗೊಂಡು ಕಾಂಗ್ರೆಸ್ಸಿನ ಇಡೀ ಮಂತ್ರಿಮಂಡಲವೇ ಗೋ ಮಾತೆಯ ಬಗ್ಗೆ ಕನಿಕರ ಇಲ್ಲದ್ದಾಗಿದೆ. ಮುಖ್ಯಮಂತ್ರಿಯವರೇ ಗೋಮಾಂಸ ತಿನ್ನುವುದಾಗಿ ಹೇಳುವ ಮನಸ್ಥಿತಿ ಇರುವುದರಿಂದ ದುಷ್ಟ ಶಕ್ತಿಗಳು ರಾಜ್ಯದಲ್ಲಿ ಗೋಮಾತೆಯ ಕೆಚ್ಚಲು ಕೊಯ್ದು ಹೀನಾಯ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದ ಮುಖ್ಯಮಂತ್ರಿಯನ್ನೊಳಗೊಂಡು ಕಾಂಗ್ರೆಸ್ಸಿನ ಇಡೀ ಮಂತ್ರಿಮಂಡಲವೇ ಗೋ ಮಾತೆಯ ಬಗ್ಗೆ ಕನಿಕರ ಇಲ್ಲದ್ದಾಗಿದೆ. ಮುಖ್ಯಮಂತ್ರಿಯವರೇ ಗೋಮಾಂಸ ತಿನ್ನುವುದಾಗಿ ಹೇಳುವ ಮನಸ್ಥಿತಿ ಇರುವುದರಿಂದ ದುಷ್ಟ ಶಕ್ತಿಗಳು ರಾಜ್ಯದಲ್ಲಿ ಗೋಮಾತೆಯ ಕೆಚ್ಚಲು ಕೊಯ್ದು ಹೀನಾಯ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಕ್ರೋಶ ಹೊರಹಾಕಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಸಾಯಿ ಖಾನೆಗಳು ಸದ್ದಿಲ್ಲದೆ ಆರಂಭವಾಗಿವೆ ಎಂದು ಆರೋಪಿಸಿದರು.

ಹಿಂದುಗಳಾದ ನಾವು ಹಿಂದೂ ಧರ್ಮದಲ್ಲಿ ಯಾವುದೇ ಹಬ್ಬದಲ್ಲಿ, ಶುಭ ಸಂದರ್ಭದಲ್ಲಿ ಹಸುವಿನ ಪೂಜೆ ಮಾಡುತ್ತೇವೆ. ಹಸುವಿನಲ್ಲಿ 33 ಕೋಟಿ ದೇವಾನುದೇವತೆಗಳು ವಾಸಿಸುತ್ತಾರೆ ಎಂದು ನಂಬಿದ್ದೇವೆ. ವಾಸ್ತುದೋಷ, ನಿವಾರಕ ನಿವಾರಣೆಗಾಗಿ ಗೋಮಾತೆಯ ಹೊಸ ಮನೆ ಕಟ್ಟಿದಾಗ ಆ ಸ್ವಾಗತ ಮಾಡುತ್ತೇವೆ. ಆದರೆ, ಕಾಂಗ್ರೆಸ್‌ ಆಡಳಿತದಲ್ಲಿ ಗೋಮಾತೆ ಕೆಚ್ಚಲು ಕತ್ತರಿಸುವಂತಹ ನೀಚಕೃತ್ಯ ಎಸಗಲು ಕುಮ್ಮಕ್ಕು ನೀಡಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಮೊದಲಿಗೆ ಕಾಂಗ್ರೆಸ್ ಪಕ್ಷದ ಚಿಹ್ನೆ ಆಕಳು ಮತ್ತು ಕರು ಇತ್ತು. ಆದರೆ, ಆಕಳು ಮತ್ತು ಕರು ಬಿಟ್ಟು ಕೈಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಇದು ಆಕಳಿನ ಕೆಚ್ಚಲು ಕೊಯ್ಯಲೆಂದೇ?, ಎಂಬುದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರ ಮೇಲೆ ಒಂದಿಲ್ಲ ಒಂದು ಹೊರೆ ಹಾಕುತ್ತಾ ಹೊರಟಿದೆ. ರೈತರಿಗಾಗಿಯೇ ಇದ್ದ ಸಾಕಷ್ಟು ರೈತ ಉಪಯೋಗಿ ಕಾರ್ಯಕ್ರಮಗಳನ್ನು ನಿಲ್ಲಿಸಿ ದುಸ್ಸಾಹಸ ಮೆರೆದಿದೆ. ಮುಖ್ಯಮಂತ್ರಿ ಗಾದಿಗಾಗಿ ಒಳಗೊಳಗೆ ಮುಸಕಿನ ಗುದ್ದಾಟದಿಂದ ಕಾರ್ಮಿಕ ವರ್ಗಕ್ಕೆ ಕೆಲಸ ಇಲ್ಲದೆ ಕಾರ್ಮಿಕ ವರ್ಗ ಒದ್ದಾಡುತ್ತಿದೆ. ರಾಜ್ಯದಲ್ಲಿ ಗುತ್ತಿಗೆದಾರರು ಬೇರೆ ಉದ್ಯೋಗ ಹುಡುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಕೆಟ್ಟ ನೀತಿಗಳಿಂದ ಮುಂದಿನ ದಿನ ಸರ್ಕಾರದ ಕೆಲಸಗಳಿಗಾಗಿ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಗುತ್ತಿಗೆದಾರರನ್ನು ಕರೆಯಿಸಿ ಕೆಲಸ ಮಾಡಿಸುವ ಪ್ರಸಂಗ ಬರಬಹುದು. ಯಾಕೆಂದರೆ ಗುತ್ತಿಗೆದಾರರಿಗೆ ಎರಡು ವರ್ಷದಿಂದ ಹಳೆಯ ಬಾಕಿ ಹಣವನ್ನು ಕೊಡದೆ ಗುತ್ತಿಗೆದಾರರು ಬೀದಿಗೆ ಬಂದು ಹೊರಾಟಕ್ಕೆ ಇಳಿಯುವ ಕಾಲ ಸಮೀಪವಿದೆ. ರೈತರ ಆತ್ಮಹತ್ಯೆ ಜೊತೆಗೆ ಗುತ್ತಿಗೆದಾರರ ಆತ್ಮಹತ್ಯೆಯೂ ರಾಜ್ಯದಲ್ಲಿ ಕಾಣುತ್ತಿದ್ದೇವೆ ಎಂದರು.

ಇದೇ ವೇಳೆ ಗೋಮಾತೆಯ ಕೆಚ್ಚಲು ಕತ್ತರಿಸಲು ಕುಮ್ಮಕ್ಕು ನೀಡುವ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಗೋ ಮಾತೆಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ಹಸುವಿಗೆ ಕುಂಕುಮವಿಟ್ಟು, ಹಾರ ಹಾಕಿ ಪೂಜೆ ಸಲ್ಲಿಸಿ ಬಾಳೆಹಣ್ಣು ತಿನ್ನಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ಡೊಳ್ಳಿ, ಬಾಲರಾಜ ರೊಳ್ಳಿ, ಉಪಾಧ್ಯಕ್ಷ ಬಿ ಜಿ ಬಿರಾದಾರ, ಕುಮಾರ ನಿಡೋಣಿ, ರಾಚಪ್ಪ ಬಿರಾದಾರ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ: 14BIJ06

ಬರಹ: ಗೋವಿನ ಕೆಚ್ಚಲು ಕೊಯ್ದ ಕೃತ್ಯ ಖಂಡಿಸಿ ಬಿಜೆಪಿ ರೈತಮೋರ್ಚಾ ಸುದ್ದಿಗೋಷ್ಠಿಕೋಟ್‌

ಹಿಂದೂಗಳ ಮೇಲೆ, ಗೋಮಾತೆಯ ಮೇಲೆ ಅಟ್ಟಹಾಸ ಮೆರೆಯುವುದು, ಗುತ್ತಿಗೆದಾರರನ್ನು ಸತಾಯಿಸುವುದನ್ನು ರಾಜ್ಯ ಸರ್ಕಾರ ತಕ್ಷಣ ಬಿಡಬೇಕು. ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮತ್ತೊಮ್ಮೆ ಯಾರೂ ಇಂತಹ ದುಷ್ಕ್ರತ್ಯಗಳನ್ನು ಎಸಗುವ ದುಸ್ಸಾಹಸ ಮಾಡದಂತೆ ತಡೆಯುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು.ಗುರುಲಿಂಗಪ್ಪ ಅಂಗಡಿ, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ