ಪೌರಾಯುಕ್ತರಿಗೆ ತಿಳಿವಳಿಕೆ ನೀಡುವಂತೆ ಸದಸ್ಯೆ ದೂರು

| Published : Nov 06 2024, 12:53 AM IST

ಪೌರಾಯುಕ್ತರಿಗೆ ತಿಳಿವಳಿಕೆ ನೀಡುವಂತೆ ಸದಸ್ಯೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯಲ್ಲಿ ಹಲವು ಲೋಪಗಳಿವೆ ಎಂಬುದರ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೆ 23ನೇ ವಾರ್ಡ್‌ ಸದಸ್ಯ ಜಯಮೇರಿ ಅವರು ಪೌರಾಡಳಿತ ನಿರ್ದೇಶಕರು, ಜಿಲ್ಲಾಧಿಕಾರಿಗೆ ಡಿ ಗ್ರೂಪ್ ನೌಕರರಿಗೆ ನೀಡಿರುವ ಹೊಣೆ ಸರಿಯಲ್ಲ, ಕೂಡಲೇ ಈ ಸಂಬಂಧ ನಗರಸಭೆ ಪೌರಾಯುಕ್ತರಿಗೆ ತಿಳಿವಳಿಕೆ ನೀಡಿ ಆದೇಶ ಹಿಂಪಡೆಯಲು ಸೂಚಿಸಿ ಎಂದು ಲಿಖಿತ ದೂರು ಸಲ್ಲಿಸಿರುವ ಘಟನೆ ಮಂಗಳವಾರ ನಡೆದಿದೆ.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಗರಸಭೆಯಲ್ಲಿ ಹಲವು ಲೋಪಗಳಿವೆ ಎಂಬುದರ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೆ 23ನೇ ವಾರ್ಡ್‌ ಸದಸ್ಯ ಜಯಮೇರಿ ಅವರು ಪೌರಾಡಳಿತ ನಿರ್ದೇಶಕರು, ಜಿಲ್ಲಾಧಿಕಾರಿಗೆ ಡಿ ಗ್ರೂಪ್ ನೌಕರರಿಗೆ ನೀಡಿರುವ ಹೊಣೆ ಸರಿಯಲ್ಲ, ಕೂಡಲೇ ಈ ಸಂಬಂಧ ನಗರಸಭೆ ಪೌರಾಯುಕ್ತರಿಗೆ ತಿಳಿವಳಿಕೆ ನೀಡಿ ಆದೇಶ ಹಿಂಪಡೆಯಲು ಸೂಚಿಸಿ ಎಂದು ಲಿಖಿತ ದೂರು ಸಲ್ಲಿಸಿರುವ ಘಟನೆ ಮಂಗಳವಾರ ನಡೆದಿದೆ.

ಕೊಳ್ಳೇಗಾಲ ನಗರಸಭಾಧಿಕಾರಿಗಳು ಡೀಸಿ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಮೂಲಕ ಡಿಗ್ರೂಪ್ ನೌಕರ ಪ್ರಭಾಕರ್ ಎಂಬವರಿಗೆ ಖಾತೆ, ಕಂದಾಯ ವಿಭಾಗದ ಜವಾಬ್ದಾರಿ ವಹಿಸಿರುವ ಬಗ್ಗೆ ಕನ್ನಡ ಪ್ರಭ ನ.5ರ ದಿನಪತ್ರಿಕೆಯಲ್ಲಿ ಸವಿವರ ವರದಿ ಪ್ರಕಟಿಸಿತ್ತು. ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಸ್ವತಃ ಜಿಲ್ಲಾಧಿಕಾರಿಗಳೇ 2023ರ ಆ.19ರಲ್ಲಿ ಸ್ಪಷ್ಟವಾಗಿ ಡಿಗ್ರೂಪ್ ನೌಕರರಿಗೆ ಯಾವುದೇ ಕಂದಾಯ ವಿಭಾಗ ಇತ್ಯಾದಿ ವಿಭಾಗಗಳ ಹೊಣೆ ನೀಡದಂತೆ ಸ್ಪಷ್ಟವಾಗಿ ಆದೇಶ ಹೊರಡಿಸಿದ್ದರೂ ಕೂಡ ನಗರಸಭೆ ಪೌರಾಯುಕ್ತರು 2024ರ ಮಾರ್ಚ್ 20ರಲ್ಲಿ ಡಿಗ್ರೂಪ್ ನೌಕರಿಯಲ್ಲಿರುವ ಪ್ರಭಾಕರ್ ಎಂಬವರಿಗೆ ಪ್ರಭಾರಿಯಾಗಿ ಕಂದಾಯ, ಖಾತೆ ವಿಭಾಗಗಳ ಜವಾಬ್ದಾರಿ ಹೊರಡಿಸಿ ಆದೇಶಿಸಿರುವುದರ ಕುರಿತು ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಪಾರದರ್ಶಕ ಆಡಳಿತ ನಡೆಸಲು ಲಿಖಿತ ದೂರು: ಕೊಳ್ಳೇಗಾಲ ನಗರಸಭೆಯಲ್ಲಿ ದ್ವಿತೀಯ ದರ್ಜೆ ನೌಕರರಿಗೆ ರಾಘವೇಂದ್ರ, ಮುನಿಯ ಕೆಂಪಣ್ಣ ಎಂಬವರಿದ್ದು ಇವರಿಗೆ ಕಂದಾಯ, ಖಾತಾ ವಿಭಾಗದ ಹೊಣೆ ನೀಡಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು, ಈ ಮೂಲಕ ಪಾರದರ್ಶಕ ಕೆಲಸವಾಗಲು ಹಿರಿಯ ಅಧಿಕಾರಿಗಳು ಒತ್ತು ನೀಡಬೇಕು, ಹಾಲಿ ಡಿಗ್ರೂಪ್ ನೌಕರ ಪ್ರಭಾಕರ್ ಎಂಬವರಿಗೆ ಕರ ವಸೂಲಾತಿ, ಕಂದಾಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದಂತೆ ನಗರಸಭೆ ಪೌರಾಯುಕ್ತರಿಗೆ ತಿಳಿವಳಿಕೆ ನೀಡಬೇಕು ಎಂದು ಪೌರಾಡಳಿತ ನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಸದಸ್ಯೆ ಜಯಮೇರಿ ಅವರು ಲಿಖಿತ ದೂರು ಪ್ರತಿಯನ್ನು ನಗರಸಭೆ ಆಯುಕ್ತರಿಗೂ ಸಲ್ಲಿಸಿದ್ದಾರೆ.ಇನ್ನಷ್ಟು ದೂರು ಸಲ್ಲಿಸಿದ ಸದಸ್ಯೆ:

ನಗರಸಭೆಯಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆಯಲ್ಲಿ ಅವಾಂತರ, ಅಧ್ವಾನಗಳ ಕುರಿತು ಈ ಹಿಂದೆ ನಗರಸಭೆಯಲ್ಲಿ ಶಾಸಕರು, ಅಧಿಕಾರಿಗಳು, ಅಧ್ಯಕ್ಷರ ಸಮ್ಮುಖದಲ್ಲಿ ದಾಖಲೆ ಸಮೇತ ಗಮನಕ್ಕೆ ತಂದರೂ ನನ್ನ ದೂರನ್ನು ಮಹಿಳಾ ಸದಸ್ಯೆ ಎಂದು ಶಾಸಕರು ಹಾಗೂ ಅಧಿಕಾರಿಗಳು ಕಡೆಗಣಿಸುವ ಮೂಲಕ ನನಗೆ ಮತ ನೀಡಿದೆ 23ನೇ ವಾರ್ಡ್ ಸದಸ್ಯರು ಹಾಗೂ ನನಗೂ ಅವಮಾನಿಸಿದ್ದಾರೆ. ಈ ಸಂಬಂಧಿಸಿದ ಎಂಜಿನಿಯರ್‌ಗಳಾದ ಕಾರ್ತಿಕ್ , ರಮೇಶ್, ಲಕ್ಷ್ಮಿ, ಸುರೇಶ್ ಅವರೂ ಗಮನಹರಿಸಿಲ್ಲ.

ಹಿಂದಿನ ನಗರಸಭೆ ಸಭೆಯಲ್ಲಿ 1ತಿಂಗಳೊಳಗೆ ಸದಸ್ಯರ ಸಮ್ಮುಖದಲ್ಲಿ ಅವ್ಯವಸ್ಥೆ ಸರಿಪಡಿಸಲು ಸೂಚಿಸಲಾಗಿತ್ತು, ಆದರೂ ಕ್ರಮ ಆಗಿಲ್ಲ, ಇನ್ನು ಇಲ್ಲಿನ ಲೋಪ ಸರಿಪಡಿಸದ ಅಧಿಕಾರಿಗಳು ಮತ್ತು ಇಲ್ಲಿನ ನೌಕರರನ್ನು ಬಳಸಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡದೆ ನಲ್ಲಿ ಸೋರಿಕೆ ತಡೆಗಟ್ಟಲು 37ಮಂದಿಯನ್ನು ಎಂಡಿಎ ಲೇಬರ್ ಸರ್ವಿಸ್ ಎಂಬ ಕಂಪನಿಗೆ ಗುತ್ತಿಗೆ ನೀಡಿ ನೇಮಿಸಿಕೊಂಡಿದ್ದು ಪ್ರತಿ ನೌಕರರಿಗೆ ತಿಂಗಳಿಗೆ 18ಸಾವಿರ ರು.ಗಳನ್ನು ನಗರಸಭೆಯೇ ನೀಡುತ್ತಿದ್ದು ಇದರಿಂದ ನಗರಸಭೆಗೆ 6 ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗುತ್ತಿದೆ. ಈ ಕಂಪನಿ ನೌಕರರ ಮುಖನೋಡಿ 10ರಿಂದ 12ಸಾವಿರ ಮಾತ್ರ ಗುತ್ತಿಗೆದಾರ ಅಲ್ತಾಫ್ ನೀಡುತ್ತಿದ್ದು ನಗರಸಭೆ ಅಧಿಕಾರಿಗಳೇ ಅಕ್ರಮಕ್ಕೆ ಆಸ್ಪದ ಮಾಡಿಕೊಟ್ಟಂತಾಗಿದ್ದು ಹಿರಿಯ ಅಧಿಕಾರಿಗಳು ಗಮನಹರಿಸಬೇಕು, 24ಗಂಟೆ ನೀರು ಪೂರೈಕೆ ಯೋಜನೆ ಅಧಿಕಾರಿಗಳು, ಗುತ್ತಿಗೆದಾರರು ನಿರ್ವಹಿಸಬೇಕಾದ ಈ ಕೆಲಸವನ್ನು ಕಾಯಂ ನೌಕರರಿಂದ ನಗರಸಭೆ ನಿರ್ವಹಿಸುತ್ತಿರುವುದು ಅಕ್ರಮವಾಗಿದ್ದು ಈ ಸಂಬಂಧ ತನಿಖೆ ನಡೆಸಬೇಕು, ಗುತ್ತಿಗೆ ರದ್ದು ಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ದೇವರ ಅನುಗ್ರಹ ಬೇಕಿದೆ:

₹97ಕೋಟಿ ಅನುದಾನದ ಯುಜಿಡಿ ಕಾಮಗಾರಿ ಲೋಪ ಪ್ರಶ್ನಿಸಿ ದೂರು ನೀಡಿರುವ ನನಗಿಂತ ಲೋಕಾಯುಕ್ತದಲ್ಲಿ ಆಪಾದಿತರಾಗಿರುವ ಕಾಂಗ್ರೆಸ್ ಪಕ್ಷದ ಕೆಲಸ ಸದಸ್ಯರಿಗೆ ಒಳ್ಳೇಯದ್ದಾಗಬೇಕಿದೆ ಎಂದು ಜಯಮೇರಿ ದೂರಿನಲ್ಲಿ ಹೇಳಿದ್ದಾರೆ. ಈ ಪ್ರಕರಣ ಕುರಿತು ಶಾಸಕ ಕೃಷ್ಣಮೂರ್ತಿ ಅವರ ಒಪ್ಪಿಗೆ ಪಡೆದು ಲೋಕಾಯುಕ್ತದಲ್ಲಿ ದೂರಿನ ಬಳಿಕ ಅಲ್ಲಿನ ಆಪಾದಿತ ಸದಸ್ಯರಿಗೆ ನನಗಿಂತ ಹೆಚ್ಚು ಒಳ್ಳೇಯದ್ದಾಗಬೇಕಿದೆ. ಅವರಿಗೆ ದೇವರ ಅನುಗ್ರಹ ಬೇಕಿದೆ ಎಂದು ದೂರಿನಲ್ಲಿ ಶಾಸಕರಿಗೆ ಟಾಂಗ್ ನೀಡಿದ್ದಾರೆ.

ಪತ್ರಿಕೆ ನ್ಯೂಸ್ ಬಂದ್ರೇನ್‌ ಮಾಡಲಾಗುತ್ತೆ?ಪತ್ರಿಕೆಯಲ್ಲಿ ನ್ಯೂಸ್ ಬಂದರೆ ಏನು ಮಾಡಲಾಗುತ್ತೆ, ನಗರಸಭೆ ಆಯುಕ್ತರೇ ನನ್ನ ಪರವಿದ್ದಾರೆ, ಅವರೇ ಆದೇಶ ನೀಡಿದ್ದಾರೆ. ಹಾಗಾಗಿ ನ್ಯೂಸ್ ಬಂದ ತಕ್ಷಣ ನನ್ನ ಬದಲಿಸಲು ಸಾಧ್ಯವಿಲ್ಲ. ಹೀಗೆಂದು ಖಾತೆ, ಕಂದಾಯ ವಿಭಾಗದ ಹೊಣೆ ಹೊತ್ತಿರುವ ಡಿಗ್ರೂಪ್ ನೌಕರ ಉಡಾಫೆಯಿಂದ ನಗರಸಭೆಯೊಳಗೆ ಉದ್ದಟ ರೀತಿಯಲ್ಲಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ನಾನು ಪ್ರಮಾಣಿಕವಾಗಿದ್ದೇನೆ, ಪತ್ರಿಕೆಯಲ್ಲಿ ವರದಿ ಬಂದರೆ ಏನೂ ಮಾಡಿಕೊಳ್ಳಲಾಗಲ್ಲ ಎಂದು ಉಡಾಫೆಯಿಂದ ಮಾತನಾಡಿಕೊಂಡು ನಿಂತಿದ್ದನ್ನು ಸಾರ್ವಜನಿಕರು, ನಗರಸಭೆ ಸಿಬ್ಬಂದಿ ಕೇಳಿಸಿಕೊಂಡು ಸುಮ್ಮನಾದರು ಎನ್ನಲಾಗಿದೆ. ನನಗೆ ಅಧಿಕಾರಿಗಳು ಮತ್ತು ಬಲಾಢ್ಯರ ಬಲವಿದೆ ಏನು ಮಾಡಲಾಗಲ್ಲ ಎಂದು ಇದೇ ವೇಳೆ ಪ್ರಭಾಕರ್ ಹೇಳಿಕೊಂಡಿದ್ದಾರಂತೆ.

ಮಹಿಳಾ ಸದಸ್ಯೆ ಎಂಬ ಕಾರಣಕ್ಕೆ ನನ್ನನ್ನು, ನಾನು ಪ್ರತಿನಿಧಿಸುತ್ತಿರುವ ವಾರ್ಡ್ ಅಭಿವೃದ್ಧಿಗೂ ಆಸ್ಪದ ನೀಡದೆ ಪೌರಾಯುಕ್ತರು ಕಡೆಗಣಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಈಗಾಗಲೇ ಯುಜಿಡಿ ಅಕ್ರಮ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿರುವೆ. 24ಗಂಟೆ ನೀರು ಪೂರೈಕೆ ಕಾಮಗಾರಿ ಸಂಬಂಧವೂ ಈಗ ದೂರಿದ್ದು ಆಯುಕ್ತರು ಡಿಗ್ರೂಪ್ ನೌಕರ ಪ್ರಭಾಕರ್ ಅವರಿಗೆ ಖಾತೆ, ಕಂದಾಯ ಹೊಣೆ ನೀಡಿರುವ ಕ್ರಮ ಸರಿಯಲ್ಲ, ಅವರಿಗೆ ತಿಳಿವಳಿಕೆ ನೀಡಿ ಎಂದು ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿರುವೆ.

ಜಯಮೇರಿ, ಬಿಎಸ್ಪಿ, ನಗರಸಭಾ ಸದಸ್ಯೆ