ಸಾರಾಂಶ
ರಸ್ತೆಯಲ್ಲಿ ಮಕ್ಕಳು, ವಯೋವೃದ್ಧರು ಓಡಾಡಲು ಸಂಕಷ್ಟ । ಪ್ರಸಕ್ತ ವರ್ಷ ಜನವರಿಯಿಂದ ಮೇ 1994 ಜನರಿಗೆ ಶುನಕಗಳ ಕಡಿತ
ನಂದನ್ಪುಟ್ಟಣ್ಣಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ರಸ್ತೆಯಲ್ಲಿ ಮಕ್ಕಳು, ವಯಸ್ಕರರು, ವಯೋವೃದ್ಧರು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.ಈ ವರ್ಷ ಜನವರಿಯಿಂದ ಮೇ ತಿಂಗಳ ತನಕ 1994 ಜನರಿಗೆ ತಾಲೂಕಿನಲ್ಲಿ ನಾಯಿಗಳ ಹಾವಳಿಗೆ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದರೆ, ಇದರಲ್ಲಿ ಪಟ್ಟಣಿಗರು 1700 ಜನ ಚಿಕಿತ್ಸೆ ಪಡೆದಿದ್ದಾರೆ. ಒಬ್ಬ ವ್ಯಕ್ತಿಗೆ ನಾಯಿ ಕಚ್ಚಿದರೆ ಆಸ್ಪತ್ರೆಯಲ್ಲಿ ಐದು ಇಂಜೆಕ್ಷನ್ ಕೊಡಿಸಬೇಕಾಗಿದ್ದು ಇದರ ಬಗ್ಗೆ ಅಧಿಕಾರಿಗಳು ಮೌನವಹಿಸಿರುವುದು ಎಷ್ಟರ ಮಟ್ಟಿಗೆ ಸರಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಕೋಳಿ, ಮೀನು, ಮಟನ್ ಮಾರುಕಟ್ಟೆಗಳ ಸುತ್ತಮುತ್ತ ನಾಯಿಗಳು ಹೆಚ್ಚಾಗಿ ಕಾಣಿಸುತ್ತಿದ್ದು ಮಾಂಸಕ್ಕಾಗಿ ನೂರಾರು ನಾಯಿಗಳು ಜಮಾಯಿಸಿ ಕಚ್ಚಾಟಗಳು ಸರ್ವೆಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಹೊಟ್ಟೆ ತುಂಬಿದ ನಾಯಿಗಳು ಸರ್ಕಾರಿ ಕಚೇರಿಗಳಾದ ಮಿನಿ ವಿಧಾನಸೌಧ, ಪುರಸಭೆ, ನ್ಯಾಯಾಲಯ ಕಟ್ಟಡ ಮತ್ತಿತರ ಕಡೆಗಳಲ್ಲಿ ನಾಯಿಗಳು ಮಲಗುವುದು ನಿತ್ಯದ ದಿನಚರಿಯಾಗಿಬಿಟ್ಟಿದೆ.ಮಾಂಸಗಳು ಸಿಗದೆ ಇರುವ ನಾಯಿಗಳು ವಾರ್ಡ್‌ಗಳಿಗೆ ನುಗ್ಗಿ ಜನರ ಮೇಲೆ ಕಚ್ಚಲು ಮುಂದಾಗುತ್ತವೆ. ಇನ್ನು ಪಟ್ಟಣದ ವಾರ್ಡ್‌ಗಳಲ್ಲಿ ವಾಹನ ಸವಾರರು ತಿರುಗಾಡುತ್ತಿದ್ದರೆ ಹಿಂಬದಿಯಿಂದ ನಾಯಿಗಳ ಹಿಂಡು ಅಟ್ಟಾಡಿಸಿಕೊಂಡು ಹೋಗುವುದರಿಂದ ಭಯಬೀತರಾಗುವ ಸವಾರರು ವಾಹನಗಳನ್ನು ಬೀಳಿಸುವುದು ಅಥವಾ ವೇಗವಾಗಿ ಪ್ರಯಾಣ ಮಾಡುವುದು ತಲೆನೋವಾಗಿ ಪರಿಣಮಿಸಿದೆ.
ಕಳೆದ ವರ್ಷ 200 ರಿಂದ 250 ಜನ ನಾಯಿ ದಾಳಿಗೆ ತುತ್ತಾಗಿದ್ದರೆ, ಈ ವರ್ಷ ಪ್ರತಿ ತಿಂಗಳಿಗೆ ಕಡಿತಕ್ಕೊಳಗಾದವರ ಸಂಖ್ಯೆ 400 ದಾಟುತ್ತಿದೆ. ನಾಯಿ ಕಡಿತ ಕಳೆದ ವರ್ಷ ತಾಲೂಕಲ್ಲಿ 2693 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ ನಗರ ಪ್ರದೇಶದ 1746 ಮಂದಿ ಇದ್ದಾರೆ. ಒಟ್ಟಾರೆ ಸರ್ಕಾರ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಹೊಸ ನಿಯಮಗಳನ್ನು ಮಾಡಬೇಕಾಗಿದ್ದು ಪುರಸಭೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಬೀದಿ ನಾಯಿಗಳಿಂದ ಮುಕ್ತಿ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.ಪಟ್ಟಣದ ಸರ್ಕಾರಿ ಕಚೇರಿಗಳ ಎದುರು ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಮಾಡಿಸಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ.
ದಿಂಡಗೂರು ಚಂದ್ರಶೇಖರ್, ಪತ್ರಬರಹಗಾರರು.ಬೀದಿ ನಾಯಿ ಕಡಿತದಿಂದ ಒಬ್ಬರಿಗೆ ಐದು ಇಂಜೆಕ್ಷನ್ ಕೊಡಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಯ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೀದಿ ನಾಯಿಗಳಿಂದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಪುರಸಭೆಗೆ ತಿಳಿಸಿದ್ದು ಪತ್ರಗಳನ್ನು ಸಹ ಬರೆಯಲಾಗಿದೆ.
ಡಾ.ವಿ.ಮಹೇಶ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ.ಈಗಾಗಲೇ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನೀಡಲು ಸಾರ್ವಜನಿಕ ಟೆಂಡರ್ ಅನ್ನು ಹಲವಾರು ಬಾರಿ ಕರೆಯಲಾಗಿದ್ದು ಯಾರೂ ಕೂಡ ಮುಂದೆ ಬಂದಿಲ್ಲ.
ಹೇಮಂತ್‌ಕುಮಾರ್, ಮುಖ್ಯಾಧಿಕಾರಿ, ಪುರಸಭೆ.