ಸಾರಾಂಶ
ಮದ್ಯ ಸೇವನೆಯಿಂದ ಕುಟುಂಬ, ಹೆಂಡತಿ ಮಕ್ಕಳಿಂದ ದೂರವಾಗುತ್ತೀರಿ. ಜೀವನದಲ್ಲಿ ಕಠಿಣ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಮದ್ಯ ಸೇವನೆ ತ್ಯಜಿಸಿ ಶ್ರೀ ಸದ್ಗುರು ಸಿದ್ಧಾರೂಢಸ್ವಾಮಿ ತತ್ವಗಳನ್ನು ಪಾಲಿಸಿ ಒಳ್ಳೆಯ ಜೀವನ ಸಾಗಿಸಿ
ಹುಬ್ಬಳ್ಳಿ: ಶ್ರೀಸಿದ್ಧಾರೂಢಸ್ವಾಮಿಗಳ ತತ್ವ ಪಾಲನೆಯಿಂದ ಮನಸ್ಸಿನ ಪರಿವರ್ತನೆ ಸಾಧ್ಯ ಎಂದು ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ವಿಜೇತ ಡಾ. ರಮೇಶ ಮಹಾದೇವಪ್ಪನವರ ಹೇಳಿದರು.
ಬಿಡ್ನಾಳ ಕ್ರಾಸ್ ಹತ್ತಿರದ ಶಕ್ತಿನಗರದಲ್ಲಿರುವ ಶ್ರೀಮೈತ್ರಿ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಶ್ರೀಸದ್ಗುರು ಸಿದ್ಧಾರೂಢಸ್ವಾಮಿ ಸದ್ಭಕ್ತ ಮಂಡಳಿಯಿಂದ ಆಯೋಜಿಸಿದ್ದ ಶ್ರೀಸಿದ್ಧಾರೂಢಸ್ವಾಮಿಗಳ 189ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ಮದ್ಯ ಸೇವನೆಯಿಂದ ಕುಟುಂಬ, ಹೆಂಡತಿ ಮಕ್ಕಳಿಂದ ದೂರವಾಗುತ್ತೀರಿ. ಜೀವನದಲ್ಲಿ ಕಠಿಣ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಮದ್ಯ ಸೇವನೆ ತ್ಯಜಿಸಿ ಶ್ರೀ ಸದ್ಗುರು ಸಿದ್ಧಾರೂಢಸ್ವಾಮಿ ತತ್ವಗಳನ್ನು ಪಾಲಿಸಿ ಒಳ್ಳೆಯ ಜೀವನ ಸಾಗಿಸಿ ಎಂದು ಕರೆ ನೀಡಿದರು.
ನಿವೃತ್ತ ವೈದ್ಯಾಧಿಕಾರಿ ಡಾ.ವಿ.ಬಿ.ನಿಟಾಲಿ ಶಿಬಿರಾರ್ಥಿಗಳಿಗೆ ಮದ್ಯ ಸೇವನೆಯಿಂದ ಆಗುವ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳು, ಕುಟುಂಬದಲ್ಲಿ ಹೇಗೆ ಆರ್ಥಿಕ ಸಮಸ್ಯೆಗಳು ಹೇಗೆ ಉದ್ಭವಿಸುತ್ತವೆ ಎಂದು ಉದಾಹರಣೆ ಸಮೇತವಾಗಿ ವಿವರಿಸಿದರು. ಮದ್ಯಸೇವನೆ ತ್ಯಜಿಸಿ ಸನ್ಮಾರ್ಗ ಹಿಡಿಯಿರಿ ಎಂದು ಹೇಳಿದರು.ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಶ್ರೀಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ " ಎಂಬ ನುಡಿಯಿದೆ.ವಿಭೂತಿ, ಗಂಧ, ಅಂಗಾರ ಹಣೆಗೆ ಹಚ್ಚುವುದರಿಂದ ಮನುಷ್ಯನಲ್ಲಿ ಧನಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ತಿಳಿಸಿದರು.
ದೂರದರ್ಶನ ಜಾನಪದ ಕಲಾವಿದ ಪ್ರಕಾಶ ಕಂಬಳಿ ಸಿದ್ಧಾರೂಢಸ್ವಾಮಿಗಳ, ಶ್ರೀ ಶರೀಫ ಪದಗಳನ್ನು ಹಾಡಿ ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧಗೊಳಿಸಿದರು.ಪ್ರೊ. ಕೆ.ಎಸ್. ಕೌಜಲಗಿ ಹಾಗೂ ಕುಮಾರಣ್ಣ ವಿ. ಪಾಟೀಲ ಉಪನ್ಯಾಸ ನೀಡಿದರು. ಸಂಗೀತಕಾರ ದಾನೇಶ ಬುರಡಿ ಹಾಗೂ ಗಾಯಕರಾದ ಶಿವರಾಮ ನಾಗಲಿಂಗಸ್ವಾಮಿಮಠ ಶ್ರೀ ಸದ್ಗುರು ಸಿದ್ಧಾರೂಢಸ್ವಾಮಿ ಹಾಡುಗಳನ್ನು ಹಾಡಿದರು.
ಎಸ್.ಎಸ್.ಕೆ. ಬ್ಯಾಂಕಿನ ಚೇರಮನ್ ವಿಠಲ ಲದವಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದ್ಭಕ್ತ ಮಂಡಳಿ ಅಧ್ಯಕ್ಷ ಚನ್ನಬಸಪ್ಪ ಬ. ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಶಂಕರ ಉಮದಿ, ರಾಚಣ್ಣ ಕುಬಸದ, ವಿಶ್ವನಾಥ ಕುಷ್ಟಗಿ, ಎಚ್,ಎಸ್. ಕಿರಣ, ಬಸವರಾಜ ಧಾರವಾಡ, ಮಲ್ಲಿಕಾರ್ಜುನ ಕೊಣ್ಣೂರ, ಗಣಪತಿ ಹೆಗಡೆ, ಶಂಕರ ಮಿಸ್ಕಿನ ಉಪಸ್ಥಿತಿಯಲ್ಲಿದ್ದರು. ಶಾರದಾ ಪಾಟೀಲ ನಿರೂಪಿಸಿದರು. ಮಂಡಳಿ ಕಾರ್ಯದರ್ಶಿ ಶಂಕರ ಮಿಸ್ಕಿನ ವಂದಿಸಿದರು.