ಸಾರಾಂಶ
ಹೊನ್ನಾವರ:ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.ಮಾರ್ಚ್ 15ರೊಳಗೆ ಇಲಾಖೆಗಳ ಹಣ ಖರ್ಚಾಗಬೇಕು. ನಂತರ ಮರಳಿ ಹೋಗುತ್ತದೆ. ಹಣ ತರುವುದು ಕಷ್ಟ. ಮರಳಿ ಸರ್ಕಾರಕ್ಕೆ ಹೋದರೆ ಆ ಇಲಾಖೆಗಳ ಅಧಿಕಾರಿಗಳೇ ಜವಾಬ್ದಾರರು. ಖರ್ಚು ಮಾಡದಿದ್ದರೆ ನೀವು ಆ ಇಲಾಖೆಯಲ್ಲಿ ಇರಲು ಯೋಗ್ಯರಲ್ಲ. ನೀವು ಇಲ್ಲಿಗೆ ಬೇಕಾಗಿಲ್ಲ ಎಂದು ಕಟುವಾಗಿ ಹೇಳಿದರು.ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು. ಔಷಧಿಗೆ ಹೊರಗಡೆ ಚೀಟಿ ಬರೆಯಬೇಡಿ ಎಂದು ಈ ಬಾರಿಯೂ ಸೂಚಿಸಿದ ಸಚಿವರು, ಕೋವಿಡ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಜ. ೨೦ರಂದು ಇಲ್ಲಿಯ ತಾಲೂಕಾಸ್ಪತ್ರೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಕ್ಯಾಂಪ್ ಏರ್ಪಡಿಸಲು ಸಚಿವರ ಸಮ್ಮುಖದಲ್ಲಿ ನಿರ್ಧರಿಸಲಾಯಿತು.ತಾಲೂಕಿನಲ್ಲಿ ಎಲ್ಲ ಪಶುವೈದ್ಯರ ಹುದ್ದೆ ಖಾಲಿ ಇವೆ. ಆಕಳು ಸತ್ತರೆ ಪೋಸ್ಟ್ ಮಾರ್ಟಂ ಮಾಡಲು ಬೇರೆಡೆಯಿಂದ ಡಾಕ್ಟರ್ ಬರಬೇಕು. ಜನರೂ ಪೋಸ್ಟ್ ಮಾರ್ಟ್ಂ ಮಾಡಲು ಒಪ್ಪುವುದಿಲ್ಲ. ಹಾಗಾಗಿ ಪರಿಹಾರ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಪಾಟೀಲ ವಿವರಿಸಿದರು.ತಾಲೂಕಿನಲ್ಲಿ ೩೮ ಸಾವಿರ ಜಾನುವಾರುಗಳಿದ್ದು ಒಬ್ಬರೂ ಪಶುವೈದ್ಯರಿಲ್ಲ. ಐದು ವರ್ಷ ಮಜಾ ಮಾಡಕೊಂಡು ಹೋದರು. ನಾವು ಈಗ ಒದ್ದಾಡಬೇಕು ಎಂದು ಸಚಿವ ಮಂಕಾಳ ವೈದ್ಯ ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಒಂದೆಡೆ ಗೋರಕ್ಷಣೆ ಮಾಡಬೇಕು. ಬೇರೆಲ್ಲೂ ಇಲ್ಲದ ಮಲೆನಾಡ ಗಿಡ್ಡ ವಿಶೇಷ ಗೋತಳಿ ಇಲ್ಲಿದೆ. ಹಿಂದಿನವರು ಇದರ ಬಗ್ಗೆ ಕಾಳಜಿ ತೆಗದುಕೊಂಡಿಲ್ಲ ಎಂದ ಸಚಿವರು, ಜನರು ಆಕಳನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿರುತ್ತಾರೆ. ಆಕಳು ಸತ್ತಾಗ ಅವರೆದುರೇ ಅದರ ಅಂಗಾಂಗ ಕೊಯ್ದು ಪೋಸ್ಟ್ ಮಾರ್ಟ್ಂ ಮಾಡಲು ಮನಸು ಒಪ್ಪುವುದಿಲ್ಲ. ಪೋಸ್ಟ್ ಮಾರ್ಟ್ಂ ಮಾಡದೇ ಪರಿಹಾರ ನೀಡುವ ಸಾಧ್ಯತೆಗಳ ಬಗ್ಗೆ ಪ್ರಯತ್ನಿಸಿ ಎಂದು ಸೂಚಿಸಿದರು.ಕುಡಿಯುವ ನೀರು, ಗಂಗಾಕಲ್ಯಾಣ ಯೋಜನೆಗಳಿಗೆ ವಿಳಂಬ ಮಾಡದೇ ವಿದ್ಯುತ್ ಸಂಪರ್ಕ ಕೊಡುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಚಿವ ತಿಳಿಸಿದರು.
ಯಾವುದೇ ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಬಿಡಬೇಕು. ಅವರಿಂದ ದೂರು ಬರಕೂಡದು. ಅಗತ್ಯವಿರುವಲ್ಲಿ ಬಸ್ ಸಮಯ ಬದಲಾವಣೆ ಮಾಡಿಕೊಡಿ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗೆ ಸಚಿವರು ತಾಕೀತು ಮಾಡಿದರು.ಹೊನ್ನಾವರ ತಾಲೂಕು ಬರಗಾಲ ಪೀಡಿತವಾಗದಿರುವುದಕ್ಕೆ ಇಲ್ಲಿಯ ಜನರು ಅರಣ್ಯ ಉಳಿಸಿಕೊಂಡಿರುವುದೇ ಕಾರಣವಾಗಿದ್ದು ಈಗಾಗಲೇ ಇರುವ ಅರಣ್ಯ ಭೂಮಿ ಅತಿಕ್ರಮಣದಾರರಿಗೆ ತೊಂದರೆ ಕೊಡಬೇಡಿ ಎಂದರು. ಕುಡಿಯುವ ನೀರು, ಅಂಗನವಾಡಿ-ಶಾಲಾ ಕಟ್ಟಡ, ರಸ್ತೆ, ಸೇತುವೆ ಮುಂತಾದ ಸಾರ್ವಜನಿಕ ಉದ್ದೇಶಗಳಿಗೆ ಅರಣ್ಯ ಇಲಾಖೆ ತೊಂದರೆ ಕೊಡದಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.ಅಂಗನವಾಡಿ ವ್ಯವಸ್ಥೆ ಬಂದು ೩೩ ವರ್ಷಗಳಾದರೂ ಅನೇಕ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆಯೆಂದರೆ ಇಲಾಖೆಗೆ ನಾಚಿಕೆಗೇಡು. ಜಾಗವಿಲ್ಲದಿದ್ದರೆ ದಾನಿಗಳ ಬಳಿ ವಿಚಾರಿಸಿ; ನಾನು ಖರೀದಿ ಮಾಡಿಕೊಡುತ್ತೇನೆ ಎಂದು ಕಳೆದ ಬಾರಿಯೇ ಹೇಳಿದ್ದೆ. ಆದರೂ ಮಾಡುವುದಿಲ್ಲ ಎಂದರೇನು ಎಂದು ಮಹಿಳಾ ಮತ್ತು ಮಕ್ಕಳ ಇಲಾಖಾಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು. ಅಂಗನವಾಡಿಗಳಿಗೆ ಸ್ವಂತ ಜಾಗದಲ್ಲಿ ಕಟ್ಟಡ ಆಗಬೇಕು. ಇಲ್ಲದಿದ್ದರೆ ಅಂತಹ ಅಂಗನವಾಡಿಗಳ ಶಿಕ್ಷಕರು, ಕಾರ್ಯಕರ್ತೆಯರನ್ನು ಬೇರೆಡೆಗೆ ವರ್ಗಾಯಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನಕ್ಕೆ ಯಾರಾದರೂ ತಕರಾರು ತೆಗೆದರೆ ಪೊಲೀಸ್ ರಕ್ಷಣೆ ಪಡೆದು ಕಾರ್ಯಗತಗೊಳಿಸಿ ಎಂದು ಅಧಿಕಾರಿಗೆ ಸೂಚಿಸಿದರು.ತಹಸೀಲ್ದಾರ್ ಕಚೇರಿಗೆ ನಾನು ಭೇಟಿ ನೀಡಿದ್ದೆ. ಆದರೆ ಈ ವರೆಗೆ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಬದಲಾವಣೆಯಾಗದಿದ್ದರೆ ಮತ್ತೊಮ್ಮೆ ನಾನು ಬಂದರೆ ನಿಮ್ಮನ್ನು ಬದಲಾವಣೆ ಮಾಡುತ್ತೇನೆ ಎಂದು ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಶಿಕ್ಷಣ, ಅಕ್ಷರ ದಾಸೋಹ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ರೇಷ್ಮೆ, ಕುಡಿಯುವ ನೀರು, ಕಾರ್ಮಿಕ, ಲೋಕೋಪಯೋಗಿ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.ವೇದಿಕೆಯಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಎನ್., ತಹಸೀಲ್ದಾರ್ ರವಿರಾಜ ದೀಕ್ಷಿತ, ತಾಪಂ ಆಡಳಿತಾಧಿಕಾರಿ ವಿನೋದ ಅಣ್ವೇಕರ, ಇಒ ಸುರೇಶ ನಾಯ್ಕ ಉಪಸ್ಥಿತರಿದ್ದರು.