ಸಾರಾಂಶ
ತಲಕಾಡು ಹೋಬಳಿ ಕೇಂದ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತೆರೆಯುವುದರಿಂದ ತಲಕಾಡು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಮೂವತ್ತಕ್ಕೂ ಹೆಚ್ಚಿನ ಹಳ್ಳಿಗಳ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಸೇವೆಗೆ ನೆರವಾಗುತ್ತದೆ ಎಂದು ನಿರೀಕ್ಷಿಸಿದ್ದವರಿಗೆ ಭಾರೀ ನಿರಾಸೆ.
ಅಕ್ರಂಪಾಷ
ಕನ್ನಡಪ್ರಭ ವಾರ್ತೆ ತಲಕಾಡುಗ್ರಾಮದ ಅರುಂಧತಿ ನಗರದ ಬಳಿ 7.85 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ನಾಲ್ಕು ವರ್ಷಗಳಿದ ಉದ್ಘಾಟನೆಯಾಗದೆ ಸಾರ್ವಜನಿಕರ ಪ್ರಯೋಜನಕ್ಕೆ ಬಂದಿಲ್ಲ.
ಕಟ್ಟಡ ನಿರ್ಮಿಸುವಾಗ ತೋರಿದ ಆಸಕ್ತಿ ಅಧಿಕಾರಿಗಳು ಬಳಿಕ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಲು ವಿಫಲರಾಗಿದ್ದಾರೆ.ಇಲ್ಲಿನ ಅಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಕವಾಗದೆ ಸಾರ್ವಜನಿಕ ಆರೋಗ್ಯ ಸೇವೆಯಿಂದ ವಂಚಿತವಾಗಿದೆ. ಹೀಗಾಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡದ ಉದ್ದೇಶ ಈಡೇರದೆ ನಿರರ್ಥಕವಾಗಿದೆ.
ಹೋಬಳಿ ಕೇಂದ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತೆರೆಯುವುದರಿಂದ, ತಲಕಾಡು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಮೂವತ್ತಕ್ಕೂ ಹೆಚ್ಚಿನ ಹಳ್ಳಿಗಳ ಮಹಿಳೆಯರು ಹಾಗು ಮಕ್ಕಳ ಆರೋಗ್ಯ ಸೇವೆಗೆ ನೆರವಾಗುತ್ತದೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ.ಈಗಲೂ ಕೂಡ ಹೋಬಳಿ ಭಾಗದ ಬಹುತೇಕ ಮಹಿಳೆಯರು, ಪ್ರಸೂತಿ ಹಾಗೂ ಶಿಶು ಆರೋಗ್ಯ ಸೇವೆಗೆ ದೂರದ ತಾಲೂಕು ಅಥವಾ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ತೆರಳುತ್ತಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಆರೋಗ್ಯ ಸೇವೆಗೆ ಸಮೀಪದಲ್ಲಿ ನೆರವಾಗುವ ಮಹತ್ವದ ಉದ್ದೇಶದೊಂದಿಗೆ ಹೋಬಳಿ ಕೇಂದ್ರದಲ್ಲಿ ಸರ್ಕಾರ ತೆರದ ಸುಸಜ್ಜಿತ ಆಸ್ಪತ್ರೆ ಕಟ್ಟಡ ಅಗತ್ಯ ವೈದ್ಯ ಸಿಬ್ಬಂದಿ ಕೊರತೆಯಿಂದ ಜನತೆಯ ಸೇವೆಯಿಂದ ದೂರ ಉಳಿದಿದೆ.
ನೂತನ ಆಸ್ಪತ್ರೆಗೆ ಅಗತ್ಯ ವೈದ್ಯ ಸಿಬ್ಬಂದಿ ನಿಯೋಜಿಸಿ, ಹೋಬಳಿ ಭಾಗದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆಯ ಪ್ರಯೋಜನಕ್ಕೆ ಬರುವಂತೆ ಮಾಡಲು ವಿಫಲರಾದ ಮೇಲಾಧಿಕಾರಿಗಳು ವೈದ್ಯರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ, ಸದ್ಯದಲ್ಲೇ ಆಸ್ಪತ್ರೆ ಉದ್ಘಾಟನೆ ಆಗಲಿದೆ ಎಂದು ಹುಸಿ ಭರವಸೆ ನೀಡುತ್ತ ನಾಲ್ಕು ವರ್ಷದಿಂದ ಕಾಲ ದೂಡುತ್ತಿದ್ದಾರೆ.ಸಚಿವರಲ್ಲಿ ಮನವಿ:
ಹೀಗಾಗಿ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶೀಘ್ರ ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ, ಹೋಬಳಿ ಭಾಗದ ಗ್ರಾಮೀಣ ಜನತೆಯ ಅರೋಗ್ಯ ಸೇವೆಗೆ ನೆರವಾಗುವಂತೆ ಸ್ಥಳೀಯರು ನಿವೇದಿಸಿ ಕೊಂಡಿದ್ದಾರೆ.ಆಸ್ಪತ್ರೆ ಸುಸಜ್ಜಿತ ಸೌಕರ್ಯಗಳು:
ಇಲ್ಲಿನ ಆಸ್ಪತ್ರೆ ಆವರಣದಲ್ಲೇ ನಾಲ್ಕು ವೈದ್ಯಾಧಿಕಾರಿಗಳಿಗೆ ವಸತಿಗೃಹ ಕಟ್ಟಡ, ದಾದಿಯರಿಗೆ ನಾಲ್ಕು, ಡಿಗ್ರೂಪ್ ನೌಕರರಿಗೆ ಮೂರು ವಸತಿ ಗೃಹ ಕಲ್ಪಿಸಲಾಗಿದೆ. ಕಟ್ಟಡದ ಸುತ್ತ ರಕ್ಷಣಾ ಗೋಡೆ, ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಕಬ್ಬಿಣದ ಗೇಟ್ ಅಳವಡಿಸಲಾಗಿದೆ.ಇಲ್ಲಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಎರಡು ಬಾರಿ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಧ್ಯದಲ್ಲೆ ಇಲ್ಲಿನ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಚಾಲನೆ ನೀಡಲಾಗುತ್ತದೆ. - ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಮೈಸೂರು