‘ಗೃಹಲಕ್ಷ್ಮೀ’ ಹಣದಲ್ಲಿ ಸೊಸೆಗೆ ಫ್ಯಾನ್ಸಿ ಸ್ಟೋರ್‌ ತೆರೆದ ಅತ್ತೆ

| Published : Aug 28 2024, 12:50 AM IST

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟ ಅತ್ತೆಯೊಬ್ಬರು ತಮ್ಮ ಸೊಸೆಗೆ ಫ್ಯಾನ್ಸಿ ಸ್ಟೋರ್ ತೆರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟ ಅತ್ತೆಯೊಬ್ಬರು ತಮ್ಮ ಸೊಸೆಗೆ ಫ್ಯಾನ್ಸಿ ಸ್ಟೋರ್ ತೆರೆಯುವ ಮೂಲಕ ಗಮನ ಸೆಳೆದಿದ್ದಾರೆ.ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ಪಾಟೀಲ ಅವರು ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟು, ₹20 ಸಾವಿರದಲ್ಲಿ ತಮ್ಮ ಸೊಸೆ ಕುಮಾರಿ ಶಿವನಗೌಡ ಪಾಟೀಲ್‌ಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ತೆರೆದಿದ್ದಾರೆ.

ದಾಕ್ಷಾಯಿಣಿಯವರು ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಒಂದು ಪೈಸೆಯನ್ನೂ ಪೋಲು ಮಾಡದೇ ಕೂಡಿಟ್ಟು, ₹20 ಸಾವಿರವನ್ನು ಸೊಸೆಯ ಕೈಗೆ ಕೊಟ್ಟಿದ್ದಾರೆ. ಈ ಹಣದಲ್ಲಿ ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಮನೆಯಲ್ಲೇ ನೂತನವಾಗಿ ಫ್ಯಾನ್ಸಿ ಸ್ಟೋರ್ ತೆರೆದಿದ್ದಾರೆ. ಶ್ರಾವಣ ಮಾಸದ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್‌ಗೆ ಪೂಜೆ ಮಾಡಿ ಚಾಲನೆ ನೀಡಲಾಗಿದೆ. ದಾಕ್ಷಾಯಿಣಿ ಅವರ ಈ ಕಾರ್ಯಕ್ಕೆ ನೀರಲಗಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗೃಹಲಕ್ಷ್ಮೀ ಯೋಜನೆ ನಮ್ಮಂತ ಬಡ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಕಳೆದ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ತೆರೆದೆ. ಇದರಿಂದಾಗಿ ಸೊಸೆ ಹೊರಗಡೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದುಕೊಂಡು ಉದ್ಯೋಗ ಮಾಡಬಹುದಾಗಿದೆ ಎಂದು ದಾಕ್ಷಾಯಿಣಿ ಪಾಟೀಲ ತಿಳಿಸಿದ್ದಾರೆ.