ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವಲ್ಲಿ ನಗರಸಭೆ ವಿಫಲ

| Published : Nov 20 2024, 12:35 AM IST

ಸಾರಾಂಶ

The Municipal Council has failed to provide good governance to the public.

-ಚಳ್ಳಕೆರೆ ನಗರಸಭೆಯ ತುರ್ತು ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ಆರೋಪ

-----

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳ ಅಡಿ ಕರೆದಿರುವ ಟೆಂಡರ್‌ಗಳ ಆರ್ಥಿಕ ಬಿಡ್‌ಗೆ ಅನುಮೋದನೆ ನೀಡಬೇಕು. ವಿದ್ಯುತ್ ದೀಪ, ವಿವಿಧ ಪಾರ್ಕ್‌ಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಒತ್ತಾಯಿಸಿ ನಗರಸಭೆ ಅಧ್ಯಕ್ಷೆ ಜೈತುಂಬಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಮನವಿ ಮಾಡಿದರು.

ನಗರಸಭೆಯ ೨೦೨೧, ೨೨,೨೩, ೨೪ರ ಶೇ.೫ರ ಅನುದಾನದಲ್ಲಿ ೭೩ ಜನ ವಿಕಲಚೇತನರಿಗೆ ತ್ರಿಚಕ್ರವಾಹನ ನೀಡಲು ಅವಕಾಶವಿದ್ದು, ಈ ಬಗ್ಗೆ ಸದಸ್ಯರು ಚರ್ಚೆ ನಡೆಸಿ ಮಾರ್ಗದರ್ಶನ ನೀಡುವಂತೆ ತಿಳಿಸಿದರು.

ಸದಸ್ಯೆ ಜಯಲಕ್ಷ್ಮಿ, ಪ್ರಮೋದ್, ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಕಾಟ ನಿಯಂತ್ರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಜ್ಜಯ್ಯಗುಡಿ ರಸ್ತೆಯ ತುಂಬೆಲ್ಲಾ ಮಾಂಸದ ಅಂಗಡಿಗಳಿದ್ದು, ಜನರಿಗೆ, ಶಾಲೆ ಮಕ್ಕಳಿಗೆ ರಸ್ತೆಯಲ್ಲಿ ಸಂಚರಿಸಲು ತೊಂದರೆ ಆಗಿದೆ. ಅಲ್ಲಿರುವ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಒತ್ತಾಯಿಸಿದರು. ತಿಪ್ಪಕ್ಕ, ಸಾಕಮ್ಮ, ಪಾಲಮ್ಮ, ಜಯಲಕ್ಷ್ಮಿ, ಕವಿತಾಬೋರಯ್ಯ ಮುಂತಾದವರು ಕಳೆದ ಹಲವಾರು ತಿಂಗಳುಗಳಿಂದ ಯಾವುದೇ ವಾರ್ಡ್‌ ಗಳಲ್ಲಿ ಡಿಡಿಟಿ ಫೌಡರ್ ಸಿಂಪಡಣೆಯಾಗಿಲ್ಲವೆಂದು ಆಕ್ಷೇಪಿಸಿದರು.

ಪ್ರಾರಂಭದಲ್ಲಿ ವಿರೋಧ ಪಕ್ಷದ ಸದಸ್ಯರಾದ ಎಸ್.ಜಯಣ್ಣ, ಸಿ.ಶ್ರೀನಿವಾಸ್, ವೆಂಕಟೇಶ್, ವಿ.ವೈ.ಪ್ರಮೋದ್, ಸಿ.ಎಂ.ವಿಶುಕುಮಾರ್, ತಿಪ್ಪಕ್ಕ, ಸಾಕಮ್ಮ, ಪಾಲಮ್ಮ, ಕವಿತಾನಾಯಕಿ, ನಿರ್ಮಲ ಅವರು ವಿಕಲಚೇತನರಿಗೆ ೪೧.೭೭ ಲಕ್ಷ ವೆಚ್ಚದಲ್ಲಿ ತ್ರಿಚಕ್ರವಾಹನ ನೀಡುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದೀರಿ, ಕೇವಲ ಒಬ್ಬ ಗುತ್ತಿಗೆದಾರ ಮಾತ್ರ ಟೆಂಡರ್ ಸಲ್ಲಿಸಿದ್ದು, ಇದು ನಿಯಮಬಾಹಿರ. ಆದ್ದರಿಂದ ಮರುಟೆಂಡರ್ ಮಾಡಿ ಎಂದು ಒತ್ತಾಯಿಸಿದರು.

ಆಡಳಿತ ಪಕ್ಷದ ಸದಸ್ಯರಾದ ಆರ್.ರುದ್ರನಾಯಕ, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ವೈ.ಪ್ರಕಾಶ್, ಕವಿತಾಬೋರಯ್ಯ, ಎಚ್.ಪ್ರಶಾಂತ್‌ಕುಮಾರ್ ಈಗಾಗಲೇ ಟೆಂಡರ್ ಆದವರಿಗೆ ತ್ರಿಚಕ್ರವಾಹನ ನೀಡಲು ಅವಕಾಶ ಮಾಡಿಕೊಡಿ ಎಂದು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪೌರಾಯುಕ್ತರು ಮಾಹಿತಿ ನೀಡಿ, ನಗರದ ೩೧ ವಾರ್ಡ್‌ ಗಳಿಗೆ ಎಲ್‌ಇಡಿ ಲೈಟ್ ಅವಳಡಿಸಲು ೨೦ ಲಕ್ಷ ಹಣ ಮೀಸಲಿದ್ದು, ಇದನ್ನು ಅನುಮೋದಿಸುವಂತೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರಾದ ಎಂ.ಜೆ.ರಾಘವೇಂದ್ರ, ರಮೇಶ್‌ಗೌಡ, ವಿರೋಧ ಪಕ್ಷದ ಜಯಣ್ಣ, ವಿಶುಕುಮಾರ್, ಪ್ರಮೋದ್, ಶ್ರೀನಿವಾಸ್, ಎಲ್‌ಇಡಿ ಬಲ್ಬ್‌ ಗಳು ಕೆಲ ದಿನಗಳು ಮಾತ್ರ ಬರಲಿವೆ, ಅದರ ಬದಲಿ ಸೋಡಿಯಂ ಲೈಟ್ ಅಳವಡಿಸುವಂತೆ ಮನವಿ ಮಾಡಿದರು.

ಕರೇಕಲ್ ಕೆರೆ ಅಭಿವೃದ್ದಿಗೆ ೨.೪೦ ಕೋಟಿ ಮೊತ್ತವನ್ನು ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ವಿನಯ್‌ ತಿಳಿಸಿದರು. ನಗರದ ಜಾಫರ್‌ಶರೀಫ್ ಬಡಾವಣೆಯಲ್ಲಿ ಒಂದು ಎಕರೆಗೂ ಹೆಚ್ಚು ಪ್ರದೇಶ ಪಾರ್ಕ್ ಗಳಿಗೆ ಮೀಸಲಿದ್ದು, ಅಲ್ಲಿಯೂ ಅಭಿವೃದ್ಧಿ ಪಡಿಸಲು ಅವಕಾಶವಿದೆ ಎಂದರು.

ಉಪಾಧ್ಯಕ್ಷೆ ಸುಜಾತ ಸೇರಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಪೌರಾಯುಕ್ತ ಜಗರೆಡ್ಡಿ ಎಲ್ಲರನ್ನೂ ಸ್ವಾಗತಿಸಿ ಸಭೆಯ ಕಾರ್ಯಸೂಚಿಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡುವಂತೆ ವಿನಂತಿಸಿದರು.

-----

ಪೋಟೋ: ಚಳ್ಳಕೆರೆ ನಗರಸಭೆಯಲ್ಲಿ ಮಂಗಳವಾರ ತುರ್ತು ಸಭೆ ನಡೆಸಲಾಯಿತು.

೧೯ಸಿಎಲ್‌ಕೆ೧

---

ಪೋಟೋ: ಚಳ್ಳಕೆರೆ ನಗರಸಭೆಯಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು.

೧೯ಸಿಎಲ್‌ಕೆ೦೧