ಸಾರಾಂಶ
ಹರಪನಹಳ್ಳಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಹತ್ಯೆಯನ್ನು ಖಂಡಿಸಿ ಎಬಿವಿಪಿ ತಾಲೂಕು ಘಟಕದಿಂದ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಎಬಿವಿಪಿ, ವಿಶ್ವ ಹಿಂದೂ ಪರಿಷತ್ತು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯೊಂದಿಗೆ ಹೊಸಪೇಟೆ ರಸ್ತೆ, ಐ.ಬಿ. ವೃತ್ತದ ಮೂಲಕ ತಹಸೀಲ್ದಾರರ ಕಚೇರಿಗೆ ತೆರಳಿ ಬಹಿರಂಗ ಸಭೆ ನಡೆಸಿದರು.
ಶಾಲಾ-ಕಾಲೇಜುಗಳು ಜ್ಞಾನದ ದೇಗುಲಗಳು ಇಂತಹ ದೇಗುಲದಲ್ಲಿ ಹಾಡುಹಗಲೇ ವಿದ್ಯಾರ್ಥಿನಿಯನ್ನು ಭೀಕರ ಹತ್ಯೆ ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ ಎಂದು ಅವರು ಹೇಳಿದರು.ಕಾಲೇಜು ಕ್ಯಾಂಪಸ್‌ಗಳು ಸುರಕ್ಷತೆಯ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಪೊಲೀಸರು ಗಮನ ಹರಿಸಬೇಕು. ರಾಜಾರೋಷವಾಗಿ ಇಂತಹ ಕೃತ್ಯ ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಇದರಿಂದ ಕಾಲೇಜಿಗೆ ವಿದ್ಯಾರ್ಥಿಗಳು ಹೋಗಲು ಭಯದ ವಾತವಾರಣ ಉಂಟಾಗುತ್ತಿದೆ ಎಂದು ನುಡಿದರು.
ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು. ಸೂಕ್ತ ತನಿಖೆ ನಡೆಸಿ ಕೊಲೆ ಮಾಡಿರುವ ಅಪರಾಧಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯ ವರುಣ್ ಕೌಟಿ, ವಿಹಿಂಪ ಎಚ್.ಎಂ. ಜಗದೀಶ, ಮುಖಂಡರಾದ ಕುಸುಮ ಜಗದೀಶ, ಸ್ವಪ್ನ ಮಲ್ಲಿಕಾರ್ಜುನ, ಹರೀಶ್, ಪ್ರಜ್ವಲ್ ಆಚಾರ್, ಕುಲದೀಪ, ಜೀವನ, ಬಸವರಾಜ, ಸುರೇಶ, ಜವಳಿ ಮಹೇಶ, ಶಿವಕುಮಾರ ಸೇರಿದಂತೆ ಇತರರು ಇದ್ದರು.