ದತ್ತ ಜಯಂತಿಯಲ್ಲಿ ಬಂಟಿಂಗ್ಸ್ ತೆರವು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯಗೈದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ನಡೆದಿದೆ. ಗ್ರಾಪಂ ಸದಸ್ಯ ಗಣೇಶ ಗೌಡ (೩೮) ಕೊಲೆಯಾದವರು.
ಕನ್ನಡಪ್ರಭ ವಾರ್ತೆ ಕಡೂರು
ದತ್ತ ಜಯಂತಿಯಲ್ಲಿ ಬಂಟಿಂಗ್ಸ್ ತೆರವು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯಗೈದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ನಡೆದಿದೆ. ಗ್ರಾಪಂ ಸದಸ್ಯ ಗಣೇಶ ಗೌಡ (೩೮) ಕೊಲೆಯಾದವರು.ದತ್ತ ಜಯಂತಿ ಸಂದರ್ಭದಲ್ಲಿ ಅಳವಡಿಸಲಾದ ಬಂಟಿಂಗ್ಸ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಗಣೇಶಗೌಡ ಮತ್ತು ಸಂಜಯ್ ಎನ್ನುವವರ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ನಾಗಭೂಷಣ ಮತ್ತು ಇತರರ ಮೇಲೆ ಹಲ್ಲೆ ಕೂಡ ನಡೆದಿತ್ತು. ಗಲಾಟೆ ಅಷ್ಟಕ್ಕೆ ಮುಗಿಯದೆ ಗ್ರಾಮದ ಬಾರ್ ಬಳಿ ಸಂಜಯ್ ಸಹಚರರು ಗಣೇಶ್ ಮೇಲೆ ಹಲ್ಲೆ ನಡೆಸಿದ್ದರು.
ರಾತ್ರಿ ಸಖರಾಯಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕಲ್ಮರುಡಿ ಮಠದ ಬಳಿ ಕಾರ್‌ನಲ್ಲಿ ಬಂದ ಗಣೇಶ್ ತಂಡದ ಮೇಲೆ ಸಂಜಯ್ ಸಹಚರರು ಕಲ್ಲು ತೂರಾಟ ನಡೆಸಿದಾಗ ಗಣೇಶ ಜೊತೆಗಿದ್ದವರು ಓಡಿ ಹೋಗಿದ್ದರು. ಈ ವೇಳೆ ಒಂಟಿಯಾಗಿ ಸಿಕ್ಕ ಗಣೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಗಣೇಶ್‌ನನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಶನಿವಾರ ಬೆಳಗ್ಗೆ ಶವವನ್ನು ಸಖರಾಯಪಟ್ಟಣಕ್ಕೆ ತಂದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಸ್ತೆ ತಡೆದು ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು, ಸಹಾಯಕ ವರಿಷ್ಠಾಧಿಕಾರಿಗಳು, ತರೀಕೆರೆ ಡಿವೈಎಸ್ಪಿ ಭೇಟಿ ನೀಡಿದ್ದರು. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಕಾಂಗ್ರೆಸ್ ಮುಖಂಡರ ಖಂಡನೆ:ಗಣೇಶ್ ಕೊಲೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಶಾಸಕ ಎಚ್ ಡಿ ತಮ್ಮಯ್ಯ, ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಬಿ.ಎಲ್.ಶಂಕರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ ಸೇರಿ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಿಗಮಂಡಳಿ ಅಧ್ಯಕ್ಷ ಬಿ.ಎಚ್.ಹರೀಶ್, ಕಾಂಗ್ರೆಸ್ ಮುಖಂಡರಾದ ಎಚ್.ಎಚ್.ದೇವರಾಜ್, ಮಹಡಿ ಮನೆ ಸತೀಶ್,ಎಂ.ಎಲ್ ಮೂರ್ತಿ, ಮುಂತಾದವರು ಮಾಧ್ಯಮದವರೊಂದಿಗೆ ಮಾತನಾಡಿ, ಈ ಘಟನೆಯನ್ನು ಖಂಡಿಸುತ್ತೇವೆ, ಪಕ್ಷ ಸಿದ್ಧಾಂತ ಯಾವುದೇ ಇರಲಿ ಒಂದು ಜೀವವನ್ನು ತೆಗೆಯುವಂತಹ ಕೆಲಸವನ್ನು ಯಾರು ಮಾಡಬಾರದು. ಕೃತ್ಯದಲ್ಲಿ ಭಾಗಿಯಾಗಿರುವ, ಹಾಗೂ ಇವರಿಗೆ ಕುಮಕ್ಕು ನೀಡಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಿ ನ್ಯಾಯ ದೊರಕಿಸಬೇಕು, ಇದನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಪಕ್ಷದ ಯುವ ಮುಖಂಡನಾಗಿ ಬೆಳವಣಿಗೆ ಹೊಂದುತ್ತಿದ್ದು ಇದನ್ನು ಸಹಿಸದೆ ದುರುಳರು ಹೊಂಚು ಹಾಕಿ ಈ ರೀತಿ ಹತ್ಯೆ ಮಾಡಿದ್ದಾರೆ. ಇತ್ತೀಚಿಗೆ ಯುವಕರು ಮದ್ಯ ವ್ಯಸನಿಗಳಾಗಿ ಇಂತಹ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿದ್ದು ಇವರ ಮೇಲೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕ ದರ್ಶನದ ನಂತರ ಮೃತ ಗಣೇಶ ಗೌಡ ಇವರ ಪಾರ್ಥಿವ ಶರೀರವನ್ನು, ಅಯ್ಯನಕೆರೆ ಸಮೀಪದ ಅವರ ಫಾರ್ಮ್ ಹೌಸ್ ಅಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಸ್ಥಳದಲ್ಲಿ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧ್ಯಕ್ಷರ ನೇತೃತ್ವದಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಈ ಬಗ್ಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು 3-4 ಜನ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.