ದೇಶಾದ್ಯಂತ ಬದಲಾಗುತ್ತಿದೆ ರೈಲು ನಿಲ್ದಾಣಗಳ ಸ್ವರೂಪ

| Published : Mar 07 2024, 01:45 AM IST

ಸಾರಾಂಶ

ಆಲಮಟ್ಟಿ: ಬಡ,ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆ ವಿಮಾನ ಸಾರಿಗೆಯಷ್ಟೆ ಸುಖಕರವಾಗಿರಲಿ ಎಂಬ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಎಂದು ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಬಡ,ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆ ವಿಮಾನ ಸಾರಿಗೆಯಷ್ಟೆ ಸುಖಕರವಾಗಿರಲಿ ಎಂಬ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಎಂದು ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ಆಲಮಟ್ಟಿ ರೈಲು ನಿಲ್ದಾಣದಲ್ಲಿ ಶಿರಡಿ-ಮೈಸೂರು ಎಕ್ಸಪ್ರೆಸ್ ರೈಲಿಗೆ ಆಲಮಟ್ಟಿಯಲ್ಲಿ ನಿಲುಗಡೆಗೆ ಅವಕಾಶ ದೊರೆತ ಪ್ರಯುಕ್ತ ರೈಲ್ವೆ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ರೈಲ್ವೆ ಬೋಗಿಯ ವಿನ್ಯಾಸಗಳು ಬದಲಾಗಿವೆ, ರೈಲ್ವೆಯ ವೇಗ ಹೆಚ್ಚಾಗಿದೆ, ನಿಗದಿತ ಸಮಯಕ್ಕೆ ನಿಗದಿತ ಸ್ಥಳ ತಲುಪುವ ವ್ಯವಸ್ಥೆ ಕಟ್ಟುನಿಟ್ಟಾಗಿದೆ. ರೈಲುಗಳ ಸಂಖ್ಯೆಗಳು ಹೆಚ್ಚಿವೆ. ಈಗ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕೆ ಕಾರಣ ಪ್ರಧಾನಿ ಮೋದಿ ಎಂದರು.

ಆಲಮಟ್ಟಿ ಮೂಲಕ ಹಾದು ಹೋಗುವ ಗದಗ-ಹೊಟಗಿ ರೈಲು ಮಾರ್ಗ ದ್ವಿಪಥಗೊಳ್ಳುವುದರ ಜತೆಗೆ ಎಲೆಕ್ಟ್ರಿಶಿಯನ್ ಕಾಮಗಾರಿಯೂ ಅಂತಿಮ ಹಂತದಲ್ಲಿದೆ. ಈ ಭಾಗದ ಅಭಿವೃದ್ಧಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರ ಕಾರ್ಯ ಸಾಕಷ್ಟಿದೆ ಎಂದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ನನ್ನ ವಿಶೇಷ ಪ್ರಯತ್ನದ ಫಲವಾಗಿ ನಿಡಗುಂದಿ-ಕೊಲ್ಹಾರ ಸೇರಿದಂತೆ ಜಿಲ್ಲೆಯಲ್ಲಿ 8 ಹೊಸ ತಾಲೂಕುಗಳು ರಚನೆಯಾಗಿವೆ. ಆದರೆ, ಅದರಲ್ಲಿ ಇನ್ನುವರೆಗೂ ಹೊಸ ಹೊಸ ಕಚೇರಿಗಳು ಆರಂಭಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಸದ ರಮೇಶ ಜಿಗಜಿಣಗಿ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ರಸ್ತೆ, ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ ಮಾತನಾಡಿ, ರೈಲ್ವೆ ಅಂಡರ್ ಪಾಸ್ ನಿರ್ಮಿಸಬೇಕು. ಆಲಮಟ್ಟಿ ಗ್ರಾಮದ ಬಳಿ ಪ್ಲಾಟ್ ಫಾರ್ಮ್ ನಿರ್ಮಿಸಬೇಕು, ವಿಜಯಪುರ-ತಿರುಪತಿ, ವಿಜಯಪುರ-ಪಣಜಿ, ವಿಜಯಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಆರಂಭಿಸಬೇಕು, ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಆಲಮಟ್ಟಿಗೆ ನಿಲುಗಡೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ, ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ದಾಮೋದರ ರಾಠಿ, ಎನ್.ಎ.ಪಾಟೀಲ, ಬಸವರಾಜ ಬಾಗೇವಾಡಿ, ರಮೇಶ ಆಲಮಟ್ಟಿ, ಡಾ.ಸಂಗಮೇಶ ಗೂಗಿಹಾಳ, ಶಿವಾನಂದ ಮುಚ್ಚಂಡಿ, ಮಲ್ಲು ರಾಠೋಡ, ರೈಲ್ವೆ ಇಲಾಖೆ ಅಧಿಕಾರಿಗಳಾದ ಪ್ರಾಣೇಶ ಕವಲಗಿ, ಚಂದನಕುಮಾರ ಝಾ ಇದ್ದರು.