ಕಾರವಾರ: ಶತಕ ದಾಟಿದ ಡೆಂಘೀ ಪೀಡಿತರ ಸಂಖ್ಯೆ

| Published : Jun 28 2024, 02:15 AM IST / Updated: Jun 28 2024, 12:08 PM IST

ಸಾರಾಂಶ

ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಮಾಹಿತಿ ನೀಡುತ್ತಿದ್ದಾರೆ.

ಕಾರವಾರ: ಉತ್ತರ ಕನ್ನಡದಲ್ಲಿ ಡೆಂಘೀ ಹಾವಳಿ ಮುಂದುವರಿದಿದೆ. ಡೆಂಘೀ ಪೀಡಿತರ ಸಂಖ್ಯೆ ಈಗ ಶತಕ ದಾಟಿದೆ. ಮಳೆಗಾಲದಲ್ಲಿ ಸಂಗ್ರಹವಾಗುತ್ತಿರುವ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿರುವುದು ಈ ರೋಗ ನಿಯಂತ್ರಣಕ್ಕೆ ಸವಾಲಾಗಿ ಪರಿಣಮಿಸಿದೆ.

ಕಾರವಾರ 6, ಅಂಕೋಲಾ 27, ಕುಮಟಾ 9, ಹೊನ್ನಾವರ 28, ಭಟ್ಕಳ 11, ಶಿರಸಿ 7, ಸಿದ್ಧಾಪುರ 5, ಯಲ್ಲಾಪುರ 5, ಮುಂಡಗೋಡ 1, ಹಳಿಯಾಳ 1, ಜೋಯಿಡಾದಲ್ಲಿ 0, ಜನವರಿಯಿಂದ ಡೆಂಘೀ ಶಂಕೆಯಿಂದ 1154 ಜನರಲ್ಲಿ 997 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 100 ಜನರಿಗೆ ಡೆಂಘೀ ತಗುಲಿರುವುದು ಪತ್ತೆಯಾಗಿದೆ.

ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಮಾಹಿತಿ ನೀಡುತ್ತಿದ್ದಾರೆ.

ಮಳೆಗಾಲ ಶುರುವಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತುಕೊಂಡಿದೆ. ಇಂತಹ ಸ್ಥಳಗಳಲ್ಲಿ ಸೊಳ್ಳೆಗಳು ವ್ಯಾಪಕವಾಗಿ ಉತ್ಪತ್ತಿಯಾಗಿ ಡೆಂಘೀಯಂತಹ ಕಾಯಿಲೆಗಳಿಗೆ ಕಾರಣವಾಗಲಿದೆ. ಎಲ್ಲೆಡೆ ಚರಂಡಿಯನ್ನೂ ಸ್ವಚ್ಛಗೊಳಿಸಲಾಗಿಲ್ಲ.

 ಚರಂಡಿಯಲ್ಲೂ ನೀರು ನಿಲ್ಲುವಂತಾಗಿದೆ. ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕೈಜೋಡಿಸಬೇಕಾಗಿದೆ. ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕಾಗಿದೆ. 

ಡೆಂಘೀ ಜ್ವರ ನಿಯಂತ್ರಣಕ್ಕಾಗಿ ಪ್ರತಿ ಶುಕ್ರವಾರ ಈಡಿಸ್ ಲಾರ್ವಾ ಉತ್ಪತ್ತಿ ತಾಣವನ್ನು ನಾಶಗೊಳಿಸುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ. ಸಾರ್ವಜನಿಕರು ತಮ್ಮ ಮನೆ, ಕಚೇರಿ, ಶಾಲಾ ಮೈದಾನಗಳಲ್ಲಿ ನೀರು ತುಂಬುವ ಪರಿಕರಗಳನ್ನು ಸ್ವಚ್ಛಗೊಳಿಸಬೇಕು. ಘನತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಸೊಳ್ಳೆಗಳ ಉತ್ಪತ್ತಿ ತಾಣವನ್ನು ನಿರ್ಮೂಲನೆ ಮಾಡಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಇಲಾಖೆ ತಿಳಿಸಿದೆ. 

ಅಗತ್ಯ ಕ್ರಮ: ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಲಾರ್ವಾ ಸರ್ವೆ ಮಾಡುತ್ತಿರುವುದರ ಜತೆಗೆ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಹೋಗಿ ಲಾರ್ವಾ ಸ್ವಚ್ಛಗೊಳಿಸುವುದು ಹೇಗೆ ಎಂಬ ಮಾಹಿತಿ ನೀಡುತ್ತಿದ್ದಾರೆ. ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆ. ಪಿಡಿಒಗಳಿಗೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕ್ಯಾಪ್ಟನ್ ರಮೇಶರಾವ್ ತಿಳಿಸಿದರು.