ಹಳ್ಳಿಗಳಲ್ಲಿ ಹೆಚ್ಚುತ್ತಿದೆ ಮದ್ಯ ಸೇವಿಸುವವರ ಸಂಖ್ಯೆ: ಹಿರೇಮಠದ ಮರುಳಸಿದ್ದಯ್ಯಸ್ವಾಮಿ

| Published : Sep 30 2024, 01:24 AM IST

ಹಳ್ಳಿಗಳಲ್ಲಿ ಹೆಚ್ಚುತ್ತಿದೆ ಮದ್ಯ ಸೇವಿಸುವವರ ಸಂಖ್ಯೆ: ಹಿರೇಮಠದ ಮರುಳಸಿದ್ದಯ್ಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಹಳ್ಳಿಗಳಲ್ಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಮದ್ಯವರ್ಜನ ಶಿಬಿರಗಳು ಹೆಚ್ಚಾಗಬೇಕಾಗಿದೆ.

ಮದ್ಯವರ್ಜನ ಶಿಬಿರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕಾರಟಗಿ

ಇತ್ತೀಚೆಗೆ ಹಳ್ಳಿಗಳಲ್ಲಿ ಮದ್ಯ ಸೇವೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಮದ್ಯವರ್ಜನ ಶಿಬಿರಗಳು ಹೆಚ್ಚಾಗಬೇಕಾಗಿದೆ ಎಂದು ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಹೇಳಿದರು.

ಇಲ್ಲಿನ ಕೆರೆಬಸವೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಮಧ್ಯವರ್ಜನ ವ್ಯವಸ್ಥಾಪನಾ ಸಮಿತಿ ಹಾಗೂ ಜನ ಜಾಗೃತಿ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುಡಿತದ ಚಟದಿಂದ ಹಲವು ಕುಟುಂಬಗಳು ಹಾಳಾಗಿವೆ. ಮದ್ಯವ್ಯಸನದಿಂದ ಕೊಲೆ ಮತ್ತು ದರೋಡೆಯಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಇಂಥ ಶಿಬಿರ ನೆರವಾಗಲಿದೆ. ದುಶ್ಚಟ ಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕ-ಕ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ್ ಮಾತನಾಡಿ, ಸಂಸ್ಥೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಉದ್ದೇಶ ಹೊಂದಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಇದು ೧೮೬೪ನೇ ಶಿಬಿರವಾಗಿದೆ ಎಂದರು.

ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದಲ್ಲಿ ತಾಲೂಕಿನ ವಿವಿಧ ಹಳ್ಳಿಗಳ ೮೦ ಜನರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದಾರೆ. ೮ ದಿನಗಳ ಕಾಲ ಶಿಬಿರವು ನಡೆಯಲಿದೆ. ಶಿಬಿರದಲ್ಲಿ ವ್ಯಸನಮುಕ್ತರಾಗಲು ದಿನನಿತ್ಯ ಯೋಗ, ವ್ಯಾಯಾಮ, ಕುಡಿತದ ದುಷ್ಪರಿಣಾಮದ ಮೇಲ್ವಿಚಾರಣೆ, ಗುಂಪು ಚಟುವಟಿಕೆ, ಗುಂಪು ಸಲಹೆ, ಸಾಧಕರ ಯಶೋಗಾಥೆಗಳ ವಿವರ ಹಂಚಿಕೊಳ್ಳಲಾಗುತ್ತದೆ ಎಂದರು.

ಶಿಬಿರದ ಅಧ್ಯಕ್ಷ ಹಾಗೂ ಪತಂಜಲಿ ಯೋಗ ಸಮಿತಿಯ ಸಿ.ಎಚ್. ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಶಿವರೆಡ್ಡಿ ನಾಯಕ, ರಮೇಶ ಕುಲಕರ್ಣಿ, ಎಂ. ಸುಬ್ಬಾರಾವ್, ಪ್ರಹ್ಲಾದ್ ಜೋಷಿ, ಮಂಜುನಾಥ್ ಮಸ್ಕಿ, ಶೇಷಗಿರಿ ಕಟ್ಟಿಮನಿ, ಸಿದ್ದನಗೌಡ ಹೊಸಮನಿ, ರಮೇಶ ನಾಯಕ, ನಿಂಗಪ್ಪ ಡಿ. ಅಗಸರ್, ಮಹಾರುದ್ರಯ್ಯಸ್ವಾಮಿ, ಗಂಗಾಧರ್, ನವಜೀವನ ಸಮಿತಿ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.