ಮಳೆಗೆ ಹಳ್ಳವಾಗುವ ಹಳೇ ಕುಂದುವಾಡ ರಸ್ತೆ

| Published : Oct 18 2024, 12:00 AM IST

ಸಾರಾಂಶ

ಜೋರು ಮಳೆಯಿಂದಾಗಿ ರಸ್ತೆಗೆ ಉಕ್ಕಿ ಬರುತ್ತಿದ್ದ ಮಳೆನೀರಿನ ಮಧ್ಯೆ ಸಾಗಲು ಯತ್ನಿಸಿದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ, ನೀರಿನಲ್ಲಿ ಬೈಕ್‌ ಸಮೇತ ಬಿದ್ದ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡ ರಸ್ತೆಯಲ್ಲಿ ನಡೆದಿದೆ.

- ಬೈಕ್‌ ನಿಯಂತ್ರಣ ತಪ್ಪಿ ಬಿದ್ದ ಹಿರಿಯ ವ್ಯಕ್ತಿಗೆ ನೆರವಾದ ಯುವಕರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜೋರು ಮಳೆಯಿಂದಾಗಿ ರಸ್ತೆಗೆ ಉಕ್ಕಿ ಬರುತ್ತಿದ್ದ ಮಳೆನೀರಿನ ಮಧ್ಯೆ ಸಾಗಲು ಯತ್ನಿಸಿದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ, ನೀರಿನಲ್ಲಿ ಬೈಕ್‌ ಸಮೇತ ಬಿದ್ದ ಘಟನೆ ನಗರದ ಹಳೇ ಕುಂದುವಾಡ ರಸ್ತೆಯಲ್ಲಿ ನಡೆದಿದೆ.

ಇಲ್ಲಿನ ಹಳೇ ಕುಂದುವಾಡ ರಸ್ತೆಯಲ್ಲಿ ಮಳೆನೀರು ಉಕ್ಕಿ ಹರಿಯುತ್ತಿತ್ತು. ಆದರೂ, ಹಿರಿಯರೊಬ್ಬರು ಬೈಕ್ ಚಾಲನೆ ಮಾಡಿಕೊಂಡು ಮುಂದೆ ಸಾಗಲು ಯತ್ನಿಸಿದ್ದಾರೆ. ಆದರೆ, ಹರಿವಿನ ರಭಸಕ್ಕೆ ನಿಯಂತ್ರಣ ತಪ್ಪಿದ ವ್ಯಕ್ತಿ ಆಯತಪ್ಪಿ ನೀರಿನಲ್ಲಿ ಬಿದ್ದಿದ್ದಾರೆ. ತಕ್ಷಣವೇ ದಾರಿಹೋಕ ಯುವಕರು ಸ್ಥಳಕ್ಕೆ ಧಾವಿಸಿ, ಬೈಕ್ ಬೇರೆಡೆಗೆ ತಳ್ಳಿ ನಿಲ್ಲಿಸಿ, ನೀರಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸುರಕ್ಷಿತ ಜಾಗಕ್ಕೆ ಕರೆ ತರುವಲ್ಲಿ ನೆರವಾದರು.

ಭಾರಿ ಮಳೆಯಿಂದಾಗಿ ಈ ಭಾಗದ ತಗ್ಗು ಪ್ರದೇಶದ ರಸ್ತೆಗೆ ಅಪಾರ ಪ್ರಮಾಣದಲ್ಲಿ ಮಳೆನೀರು ಹರಿದುಬರುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸುವುದು ಸಹ ಕಷ್ಟವಾದ ಪರಿಸ್ಥಿತಿ ಅಲ್ಲಿತ್ತು. ಜೋರು ಮಳೆಯಾದರೆ ಈ ಮಾರ್ಗದಲ್ಲಿ ಸಾಗುವ ಪಾದಚಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಜೀವಭಯದಲ್ಲೇ ಸಾಗಬೇಕು. ದ್ವಿಚಕ್ರ, ತ್ರಿಚಕ್ರ ವಾಹನಗಳ ಸವಾರರೂ ಇದರಿಂದ ಹೊರತಲ್ಲ.

ಸ್ಥಳದಲ್ಲೇ ಕಾಮಗಾರಿ ಸಹ ಕೈಗೊಂಡಿದ್ದಾರೆ. ಜಾಗದ ಸಮಸ್ಯೆ ಆಗಿದ್ದರಿಂದ ಅಪೂರ್ಣವಾಗಿ ನಿಂತಿದೆ. ಈ ಹಿನ್ನೆಲೆ ಅಲ್ಲಿ ಗುಂಡಿ ಬಿದ್ದು, ಪ್ರತಿ ಸಲವೂ ಜೋರು ಮಳೆಯಾದರೆ ಸಮಸ್ಯೆಯಾಗುತ್ತಿದೆ. ಮಹಾನಗರ ಪಾಲಿಕೆ ಆಯುಕ್ತರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- - - -17ಕೆಡಿವಿಜಿ9, 10, 11:

ದಾವಣಗೆರೆ ಹಳೇ ಕುಂದುವಾಡ ರಸ್ತೆಯಲ್ಲಿ ಮಳೆ ನೀರಿನಲ್ಲಿ ವ್ಯಕ್ತಿ ಬಿದ್ದಿರುವುದು.

-17ಕೆಡಿವಿಜಿ12:

ದಾವಣಗೆರೆ ಹಳೇ ಕುಂದುವಾಡ ರಸ್ತೆಯ ಮಳೆನೀರಿನಲ್ಲಿ ಬಿದ್ದ ವ್ಯಕ್ತಿಯ ರಕ್ಷಣೆಗೆ ಯುವಕರು ನೆರವಾದರು.