ಸಾರಾಂಶ
ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಕಬ್ಬಾಳು ಅರಣ್ಯ ಪ್ರದೇಶದ ಹಲಸಿನಮರದ ದೊಡ್ಡಿ ಗ್ರಾಮದ ಅರಣ್ಯದಲ್ಲಿ ಏಳು ಸಾಕಾನೆಗಳ ತಂಡದಿಂದ ಅರಣ್ಯ ಇಲಾಖೆ ಕೈಗೊಂಡಿದ್ದ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಭೇಟಿ ನೀಡಿ ಕಾರ್ಯಾಚರಣೆಯ ಬಗ್ಗೆ ಅರಣ್ಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.ಕಬ್ಬಾಳು ಅರಣ್ಯ ಪ್ರದೇಶದ ಹಲಸಿನ ಮರದೊಡ್ಡಿ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಳ್ಳಲು ಸಾಕಾನೆಗಳ ತಂಡದೊಂದಿಗೆ ಮಾವುತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದರು, ಕಾಡಾನೆಗಳನ್ನು ಕಾವೇರಿ ವನ್ಯಜೀವಿ ಧಾಮಕ್ಕೆ ಅಟ್ಟಲು ದುಬಾರೆ ಆನೆಗಳ ಶಿಬಿರದಿಂದ ಏಳು ಸಾಕಾನೆಗಳೊಂದಿಗೆ ನುರಿತ ಮಾವುತರ ತಂಡವು ಕಾರ್ಯಾಚರಣೆಯಲ್ಲಿ ತೊಡಗಿತ್ತು.
ಕಾರ್ಯಾಚರಣೆ ಯಶಸ್ವಿಯಾಗಿದ್ದು, ಕಾಡಿನಿಂದ ನಾಡಿಗೆ ಬಂದು ಹಾವಳಿ ಇಡುತ್ತಿದ್ದ ಕಾಡಾನೆಗಳು, ಸಾಕಾನೆಗಳ ಘರ್ಜನೆಗೆ ಮರಳಿ ಕಾಡಿಗೆ ಕಾಲ್ಕಿತ್ತಿವೆ.ಕಾರ್ಯಾಚರಣೆ ಬೆನ್ನಲ್ಲೇ ಶನಿವಾರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸಾಕಾನೆಗಳು ಬೀಡು ಬಿಟ್ಟಿದ್ದ ಸಾತನೂರು ಹೋಬಳಿಯ ಹಲಸಿನ ಮರದ ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಶಿಬಿರದಲ್ಲಿ ಒದಗಿಸಿರುವ ಸಾಕಾನೆಗಳ ಆಹಾರ,ಮಾವುತರ ಆರೋಗ್ಯದ ಬಗ್ಗೆ ಹಾಗೂ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಡಿಎಫ್ ಒ ರಾಮಕೃಷ್ಣಪ್ಪ, ಎಸಿ ಎಫ್ ಗಣೇಶ್, ವಲಯ ಅರಣ್ಯ ಅಧಿಕಾರಿ, ಆಶಾ, ಕಿರಣ್ ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆ ಶಿಬಿರದ ಮಾವುತರು ಉಪಸ್ಥಿತರಿದ್ದರು.