ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೋಟಿ ಕೋಟಿ ಅಭಿಮಾನಿಗಳ ಹಾರೈಕೆಗಳೊಂದಿಗೆ, ನಾಡಿನ ಲಕ್ಷಾಂತರ ಜನರ ಸಮ್ಮುಖದಲ್ಲಿ ಚಿತ್ರದುರ್ಗದಲ್ಲಿ ಜರುಗಿದ ಐತಿಹಾಸಿಕ ‘ಬಿಎಸ್‌ವೈ ಅಭಿಮಾನೋತ್ಸವ’, ಅಭೂತಪೂರ್ವ, ಯಶಸ್ವಿ ಕಾರ್ಯಕ್ರಮವಾಗಿ ಮಾತ್ರವಲ್ಲದೆ, ಅದೊಂದು ನಾಡಿನ ಅಭಿಮಾನದ ‘ಸಾಂಸ್ಕೃತಿಕ ಜನೋತ್ಸವ’ವಾಗಿ ಚರಿತ್ರೆಯ ಪುಟ ಸೇರಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಅಭಿಮಾನೋತ್ಸವದ ಯಶಸ್ವಿ ಆಯೋಜನೆ ಕುರಿತಂತೆ ಅತ್ಯಂತ ವಿನಮ್ರವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಸಂಸದ ರಾಘವೇಂದ್ರ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಕೃತಜ್ಞತಾಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

ಜನಸಾಗರದ ಪ್ರೀತಿಗೆ ಸಾಷ್ಟಾಂಗ ನಮನ: ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಮೇಲಿರುವ ಅಚಲವಾದ ಪ್ರೀತಿ, ಅಭಿಮಾನ ಮತ್ತು ವಿಶ್ವಾಸದಿಂದ, ದೂರವನ್ನಾಗಲಿ, ಸುಡುವ ಬಿಸಿಲನ್ನಾಗಲಿ ಲೆಕ್ಕಿಸದೆ ನಾಡಿನ ಮೂಲೆ ಮೂಲೆಗಳಿಂದ ಚಿತ್ರದುರ್ಗಕ್ಕೆ ಬಂದ ಅಭಿಮಾನಿಗಳು, ಕಾರ್ಯಕರ್ತರು, ಸ್ವಯಂಸೇವಕರು, ತಾಯಂದಿರು, ಸಹೋದರಿಯರು, ಶ್ರೀಸಾಮಾನ್ಯರ ಜನಸಾಗರದ ಸಂಪೂರ್ಣ ಸಹಕಾರದಿಂದ ತಮ್ಮ ನಾಯಕನ ಅಭಿಮಾನೋತ್ಸವ, ನಾಡಿನ ಜನೋತ್ಸವವಾಗಿ ಮಾರ್ಪಟ್ಟಿತು. ಪೂಜ್ಯ ತಂದೆಯವರ ಮೇಲೆ ಜನರ ಅತಿಶಯವಾದ ಪ್ರೀತಿ, ವಿಶ್ವಾಸಗಳಿಗೆ ಪ್ರತಿಯಾಗಿ ನಾವು ಏನು ಹೇಳುವುದು ಸಾಧ್ಯ, ಆಗಮಿಸಿದ ಪ್ರತಿಯೊಬ್ಬ ಅಭಿಮಾನಿಗಳಿಗೂ, ಅತ್ಯಂತ ವಿನೀತ ಭಾವದಿಂದ ಹೃದಯತುಂಬಿ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

ಮಠಾಧೀಶರ ಆಶೀರ್ವಾದ, ಅಭಿಮಾನ ಮಂಟಪದ ಸ್ಮರಣೆ: ನಾಡಿನ ಎಲ್ಲ ಅಗ್ರಮಾನ್ಯ ಸ್ವಾಮೀಜಿಗಳೂ ಸೇರಿದಂತೆ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲಾ ಮಠಾಧೀಶರು, ಹರ ಗುರು ಚರ ಮೂರ್ತಿಗಳು, ಧರ್ಮಗುರುಗಳಿಗೆ, ಆಗಮಿಸಿ ಆಶೀರ್ವದಿಸಿದ ಎಲ್ಲಾ ಗುರುಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಎಲ್ಲ ಪರಮಪೂಜ್ಯರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನಗಳು ‘ಅನುಭವ ಮಂಟಪ’ದ ಪರಿಕಲ್ಪನೆಯನ್ನು ಸ್ಮರಿಸುವಂತೆ ಅಭಿಮಾನೋತ್ಸವ, ''''''''ಅಭಿಮಾನ ಮಂಟಪ''''''''ವಾಗಿತ್ತು ಎಂದು ಭಕ್ತಿಪೂರ್ವಕವಾಗಿ ಸ್ಮರಿಸಿದ್ದಾರೆ.


ರಾಷ್ಟ್ರೀಯ ನಾಯಕತ್ವಕ್ಕೆ ಕೃತಜ್ಞತೆ: ಸಂದೇಶ ಕಳುಹಿಸಿ ಹಾರೈಸಿದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದೀಜೀ ಅವರಿಗೆ, ತಮ್ಮ ಬಿಡುವಿಲ್ಲದ ಕಾರ್ಯಗಳ ಒತ್ತಡದ ನಡುವೆಯೂ, ಕಾರ್ಯಕ್ರಮವನ್ನು ಉದ್ಘಾಟಿಸಿ ಉತ್ಸವದ ಗರಿಮೆ ಹೆಚ್ಚಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರಿಗೆ, ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ, ಶ್ರೀ ರಾಧಾ ಮೋಹನ್ ಅಗರ್ವಾಲ್, ಶ್ರೀ ಸುಧಾಕರ್ ರೆಡ್ಡಿ ಸೇರಿದಂತೆ ಆಗಮಿಸಿದ ಎಲ್ಲ ಕೇಂದ್ರ ಸಚಿವರಿಗೆ, ರಾಷ್ಟ್ರೀಯ ನಾಯಕರುಗಳಿಗೆ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ನಾಯಕರಿಗೆ, ಮುಖಂಡರಿಗೆ, ಪದಾಧಿಕಾರಿಗಳಿಗೆ, ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ರಾಘವೇಂದ್ರ ಧನ್ಯವಾದ ಸಲ್ಲಿಸಿದ್ದಾರೆ.

ಅಭಿಮಾನೋತ್ಸವ ಸಮಿತಿ, ಬಿಎಸ್‌ವೈ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಯಶಸ್ಸಿನ ಶ್ರೇಯಸ್ಸು ಸಲ್ಲುತ್ತದೆ. ಹಾಗೆಯೇ, ಅಭಿಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಗೋವಿಂದ ಕಾರಜೋಳ ಹಾಗೂ ಸಮಿತಿಯ ಪ್ರಮುಖರಾದ ಪ್ರಭಾಕರ್ ಕೋರೆ, ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದ ಸಮಿತಿಯ ಮಾರ್ಗದರ್ಶನವನ್ನು, ಪರಿಶ್ರಮವನ್ನು ಸಂಸದರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪಕ್ಷದ ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು, ಸ್ವಯಂಸೇವಕರು, ಅಭಿಮಾನಿಗಳು ಹಾಗೂ ಚಿತ್ರದುರ್ಗದ ಸ್ಥಳೀಯ ಪುರ ಪ್ರಮುಖರ ಸಹಕಾರ ಸಮಾವೇಶದ ಯಶಸ್ಸಿನ ಹಿಂದಿನ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳ ಸಹಕಾರಕ್ಕೆ ಧನ್ಯವಾದ: ಈ ಐತಿಹಾಸಿಕ ಕ್ಷಣವನ್ನು ಕೋಟ್ಯಂತರ ಜನರಿಗೆ ತಲುಪಿಸಿದ ಮಾಧ್ಯಮ ಮಿತ್ರರ ಸಹಕಾರ ಕೂಡ ಅತ್ಯಂತ ಸ್ಮರಣೀಯ. ಇದೊಂದು ರಾಜಕೀಯ ಸಮಾವೇಶವಾಗಿ ಉಳಿಯದೆ, ನಾಡಿನ ಜನರ ಸಾಂಸ್ಕೃತಿಕ ಹಬ್ಬವಾಗಿ, ಜನೋತ್ಸವಾಗಿ ಮಾರ್ಪಟ್ಟಿದ್ದು, ನಿಜಕ್ಕೂ ಹೆಮ್ಮೆ ಹಾಗೂ ಸಂತೃಪ್ತಿಯನ್ನು ನೀಡಿದೆ ಎಂದಿರುವ ಸಂಸದ ರಾಘವೇಂದ್ರ, ಅಭಿಮಾನೋತ್ಸವದ ಆಯೋಜನೆಯ ಹಿಂದೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಅತ್ಯಂತ ಆತ್ಮೀಯವಾಗಿ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.