ಜಾನಪದ ಸಾಹಿತ್ಯ ಸಾಗಿದ ಹಾದಿಯೇ ವಿಶೇಷ: ಡಾ.ಹಂಪನಹಳ್ಳಿ ತಿಮ್ಮೇಗೌಡ

| Published : Oct 26 2024, 01:05 AM IST

ಜಾನಪದ ಸಾಹಿತ್ಯ ಸಾಗಿದ ಹಾದಿಯೇ ವಿಶೇಷ: ಡಾ.ಹಂಪನಹಳ್ಳಿ ತಿಮ್ಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಜಾನಪದ ಸಾಹಿತ್ಯ ಯುನೆಸ್ಕೋ ಮಾನ್ಯತೆ ಪಡೆಯಲು ಸಾಗಿ ಬಂದಿರುವ ಹಾದಿಯೇ ವಿಶೇಷವಾದದು ಎಂದು ಹಾಸನ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು. ಚನ್ನರಾಯಪಟ್ಟಣದಲ್ಲಿ ಜನಪದ ಗೀತೆಗಳ ಕಲಿಕಾ ತರಬೇತಿ ಶಿಬಿರದ ‘ಪ್ರಾತ್ಯಕ್ಷಿಕೆ’ ಹಾಗೂ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಂಸಾಳೆ, ಡೊಳ್ಳು ಕುಣಿತ, ಜನಪದ ಗೀತೆಗಳ ಕಲಿಕಾ ತರಬೇತಿ ಶಿಬಿರ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕನ್ನಡ ಜಾನಪದ ಸಾಹಿತ್ಯ ಯುನೆಸ್ಕೋ ಮಾನ್ಯತೆ ಪಡೆಯಲು ಸಾಗಿ ಬಂದಿರುವ ಹಾದಿಯೇ ವಿಶೇಷವಾದದು ಎಂದು ಹಾಸನ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಮತ್ತು ತಾಲೂಕು ಘಟಕ ಚನ್ನರಾಯಪಟ್ಟಣ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣ ಜಂಟಿಯಾಗಿ ಕಂಸಾಳೆ, ಡೊಳ್ಳು ಕುಣಿತ ಹಾಗೂ ಜನಪದ ಗೀತೆಗಳ ಕಲಿಕಾ ತರಬೇತಿ ಶಿಬಿರದ ‘ಪ್ರಾತ್ಯಕ್ಷಿಕೆ’ ಹಾಗೂ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜನಪದ ಬೇರುಗಳು ವಿಶ್ವಮನ್ನಣೆ ಪಡೆಯಲು ಕಾರಣ ನಮ್ಮ ನೆಲದ ಗಟ್ಟಿತನ. ಹಾಡು, ಕುಣಿತ ಇವೆಲ್ಲವೂ ಪ್ರಕೃತಿಯ ಅನುಕರಣೆಯಿಂದ ಬಂದವು. ಪ್ರಕೃತಿಗೂ ಜನಪದರಿಗೂ ಅವಿನಾಭಾವ ಸಂಬಂಧವಿದೆ. ಜೀವನದ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಜನಪದ ಕಲೆಗಳು ಮಾಡಿಕೊಂಡು ಬಂದಿವೆ. ಜನಪದ ಸಾಹಿತ್ಯ ಸವಕಳಿ ಸಾಹಿತ್ಯವಲ್ಲ. ಜಾನಪದ ಜನರ ಸಂಸ್ಕೃತಿಯನಷ್ಟೇ ಬಿಂಬಿಸದೇ ಶಿಕ್ಷಣವನ್ನು ನೀಡುತ್ತದೆ. ಅನಕ್ಷರಸ್ಥರು ಸೃಷ್ಟಿಸಿದ ಈ ಸಾಹಿತ್ಯ ಶಿಷ್ಟ ಸಾಹಿತ್ಯಕ್ಕಿಂತ ಮಿಗಿಲು. ಜಾನಪದ ಕಲೆಗಳನ್ನು ಉಳಿಸಿಕೊಳ್ಳದಿದ್ದರೆ ನಮ್ಮ ಬದುಕುಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಜನರ ಜೀವನದೊಂದಿಗೆ ಉಸಿರಿನಂತೆ ಜಾನಪದ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಜಾನಪದ ವಿದ್ವಾಂಸರಾದ ಮೇಟಿಕೆರೆ ಹಿರಿಯಣ್ಣ, ಜಾನಪದ ಎಂಬುದು ಜನರ ನೋವು ನಲಿವಿನಲ್ಲಿ ಮೂಡಿದ ಪದಕಣಜ. ನಮ್ಮ ಹಿರಿಯರು ಅವರ ಬದುಕಿನ ರೀತಿ ನೀತಿಗಳನ್ನು ನಮಗೆ ತಲುಪಿಸಿದಂತೆ ಜಾನಪದ ಸಾಹಿತ್ಯ ಮತ್ತು ಕಲೆಗಳನ್ನು ನಮ್ಮ ತಲೆಮಾರಿಗೆ ತಲುಪಿಸಿದ್ದಾರೆ. ನಾವು ಅದನ್ನು ಮುಂದಿನ ತಲೆಮಾರಿಗೆ ತಲುಪಿಸಿ, ಉಳಿಸಿಕೊಂಡು ಹೋಗುವ ಕಾರ್ಯವನ್ನು ಮಾಡಬೇಕಿದೆ. ಜಾನಪದ ಹಾಸ್ಯ, ಜಾನಪದ ಒಗಟುಳು ಮನುಷ್ಯರ ಬೇಸರವನ್ನು ಕಳೆಯುತ್ತಿದ್ದವು. ಇಂದು ಕೃತಕ ಹಾಸ್ಯಗಳು ನಮ್ಮನ್ನು ನಗೆಯಿಂದ ವಂಚಿತ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಸಂತೋಷ್ ದಿಂಡಗೂರು, ಜಾನಪದ ಸಾಹಿತ್ಯವನ್ನು ಹೊಸ ತಲೆಮಾರಿಗೆ ಹೊಸ ರೀತಿಯಲ್ಲೇ ಕಲಿಸುವ ಮತ್ತು ಓದಿಸುವ ಕ್ರಿಯೆಯನ್ನು ನಾವು ಮಾಡಬೇಕಿದೆ. ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಲು ಮತ್ತು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಜಾನಪದ ಕಲೆಗಳು ಮಾರ್ಗವನ್ನು ಒದಗಿಸುತ್ತದೆ. ಮಕ್ಕಳು ಶಿಕ್ಷಣದ ಜೊತೆಗೆ ಜಾನಪದ ಕಲೆಗಳನ್ನು ರೂಪಿಸಿಕೊಳ್ಳುವಂತೆ ಮಾಡಬೇಕು. ಅದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಗಂಗೇಗೌಡ ಎಸ್.ಎಚ್., ನಾವು ಸಣ್ಣ ವಯಸ್ಸಿನಲ್ಲಿ ಕಲಿತ ಜಾನಪದ ಗೀತೆಗಳು ಈಗಲೂ ನಮ್ಮ ಎದೆಯಲ್ಲಿವೆ. ಜಾನಪದ ಕಲೆಗಳು ನಮಗೆ ಏಕಾಗ್ರತೆಯನ್ನು ಕಲಿಸುತ್ತವೆ. ನಮ್ಮ ವಿದ್ಯಾರ್ಥಿಗಳು ಹೆಚ್ಚಾಗಿ ಆಧುನಿಕ ಕಲೆಗಳನ್ನು ಬಿಟ್ಟು ಜಾನಪದ ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಕಂಸಾಳೆ ಮತ್ತು ಡೊಳ್ಳು ಕುಣಿತದ ಪ್ರದರ್ಶನ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಗುರುರಾಜ್ ಜೆ.ಎಸ್., ಕನ್ನಡ ಪ್ರಾಧ್ಯಾಪಕರಾದ ಹಳ್ಳಿವೆಂಕಟೇಶ್, ಚೆಲುವೇಗೌಡ ಡಿ.ಆರ್., ಮಂಜುನಾಥ ಎಚ್.ಜೆ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮುನಿರಾಜು, ಐಕ್ಯೂಎಸ್ಸಿ ಸಂಚಾಲಕ ಡಾ.ವಾಸುದೇವಪ್ರಸಾದ್ ಮತ್ತು ಅಧೀಕ್ಷಕ ಕೃಷ್ಣ, ಎಲ್ಲಾ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು.