ಕಳೆದ ಆರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರವಿಕುಮಾರ್ ಅವರು ತಮ್ಮ 8 ಎಕರೆ ಜಮೀನಿನಲ್ಲಿ ವಿವಿಧ ಬಗೆಯ ತರಕಾರಿ, ಸೊಪ್ಪು ಹಾಗೂ ಇತರೆ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿಯೇ ಬೆಳೆಯುತ್ತಿದ್ದಾರೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ಕೃಷಿ ಲಾಭದಾಯಕವಲ್ಲ. ಕೃಷಿಯಿಂದ ಸುಖವೂ ಇಲ್ಲ ಎಂಬ ರೈತರ ಕೊರಗಿನ ನಡುವೆ ಬಳ್ಳಾರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಎಂಬಿಎ ಪದವೀಧರ ಯುವಕ ಬಿ. ರವಿಕುಮಾರ್ ಅವರು ಸಾವಯವ ಕೃಷಿಯನ್ನೇ ಬದುಕಿನ ದಾರಿಯನ್ನಾಗಿಸಿಕೊಂಡು ಯಶಸ್ಸಿನತ್ತ ಹೆಜ್ಜೆ ಇಟ್ಟಿದ್ದು ವಿಷಮುಕ್ತ ಆಹಾರ ಉತ್ಪಾದನೆಯ ಜತೆಗೆ ಗ್ರಾಹಕರಿಗೂ ನೇರವಾಗಿ ಸಾವಯವ ಉತ್ಪನ್ನಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಕಳೆದ ಆರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರವಿಕುಮಾರ್ ಅವರು ತಮ್ಮ 8 ಎಕರೆ ಜಮೀನಿನಲ್ಲಿ ವಿವಿಧ ಬಗೆಯ ತರಕಾರಿ, ಸೊಪ್ಪು ಹಾಗೂ ಇತರೆ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿಯೇ ಬೆಳೆಯುತ್ತಿದ್ದಾರೆ. ಒಂದು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ಜಮೀನಿನಲ್ಲಿ ಪಪ್ಪಾಯಿ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಳೆಸುತ್ತಿದ್ದಾರೆ.
ಬೆಡ್‌ಗಳಲ್ಲಿ ತರಕಾರಿ ಕೃಷಿ: ಕಾಯಿಪಲ್ಯೆ ಹಾಗೂ ತರಕಾರಿ ಬೆಳೆಯಲು ಜಮೀನಿನಲ್ಲಿ ವ್ಯವಸ್ಥಿತವಾಗಿ ಬೆಡ್‌ಗಳನ್ನು ನಿರ್ಮಿಸಲಾಗಿದೆ. ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸದೆ, ಎರೆಹುಳು ಗೊಬ್ಬರ, ಜೀವಾಮೃತ ಸೇರಿದಂತೆ ನೈಸರ್ಗಿಕ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಜತೆಗೆ ಆರೋಗ್ಯಕರ ಆಹಾರ ಉತ್ಪಾದನೆಗೆ ಆದ್ಯತೆ ನೀಡಿದ್ದಾರೆ.ಪಾಲಕ್, ರಾಜಗಿರಿ, ಕೊತ್ತಂಬರಿ, ಸಬ್ಬಾಕ್ಷಿ ಸೇರಿದಂತೆ ವಿವಿಧ ಸೊಪ್ಪು, ತರಕಾರಿ ಹಾಗೂ ಕಾಯಿಪಲ್ಯೆಗಳನ್ನು ಕಾಲಕ್ಕೆ ತಕ್ಕಂತೆ ಬೆಳೆಯಲಾಗುತ್ತಿದೆ. ಜತೆಗೆ ಮೆಣಸಿನಕಾಯಿ, ಅಂಜೂರ, ಪಪ್ಪಾಯಿ, ಕಬ್ಬು, ನಿಂಬೆ, ನುಗ್ಗೆ ಸೇರಿದಂತೆ ವಿವಿಧ ಬೆಳೆ ಬೆಳೆಯುವ ಮೂಲಕ ವರ್ಷವಿಡೀ ಆದಾಯ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ಸಾವಯವ ಉತ್ಪನ್ನಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ಬದಲು ಗ್ರಾಹಕರಿಗೆ ನೇರವಾಗಿ ತಲುಪಿಸುವುದು ರವಿಕುಮಾರ್ ಅವರ ಉದ್ದೇಶ. ಬಳ್ಳಾರಿಯ ಗಾಂಧಿಭವನದಲ್ಲಿ ಪ್ರತಿ ಬುಧವಾರ ನಡೆಯುವ ಸಾವಯವ ಸಂತೆಯಲ್ಲಿ ತಾವು ಸೇರಿದಂತೆ ಹಲವು ಸಾವಯವ ಕೃಷಿಕರು ಭಾಗವಹಿಸುತ್ತಾರೆ. ಆಸಕ್ತ ಗ್ರಾಹಕರು ಇಲ್ಲಿಗೆ ಭೇಟಿ ನೀಡಿ ರೈತರಿಂದಲೇ ನೇರವಾಗಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಇದರೊಂದಿಗೆ ಗ್ರಾಹಕರು ತಮ್ಮ ಹೊಲಕ್ಕೆ ನೇರವಾಗಿ ಭೇಟಿ ನೀಡಿ ಕೃಷಿ ಪದ್ಧತಿ ವೀಕ್ಷಿಸಿ ಉತ್ಪನ್ನ ಖರೀದಿಸಲು ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಸಾವಯವ ಕೃಷಿಯ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸುವ ಪ್ರಯತ್ನವೂ ನಡೆಯುತ್ತಿದೆ.ಕಬ್ಬಿನಿಂದ ಜ್ಯೂಸ್: ಜಮೀನಿನಲ್ಲಿ ಬೆಳೆಯುವ ಕಬ್ಬಿಗೂ ಮಾರುಕಟ್ಟೆ ವ್ಯವಸ್ಥೆಯನ್ನು ತಾವೇ ರೂಪಿಸಿಕೊಂಡಿದ್ದಾರೆ. ಕಬ್ಬು ಬೆಳೆ ಬಂದ ಬಳಿಕ ಬಳ್ಳಾರಿಯ ತಾಲೂಕು ಪಂಚಾಯಿತಿ ಕಚೇರಿ ಬಳಿಯ ಮಿಲೆಟ್ ಅಂಗಡಿ ಮುಂಭಾಗ ಹಾಗೂ ತಾಳೂರು ರಸ್ತೆಯಲ್ಲಿ ಕಬ್ಬಿನ ಜ್ಯೂಸ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಹೊಲದಲ್ಲಿ ಬೆಳೆದ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಪ್ರಯತ್ನವೂ ಇದಾಗಿದೆ.
ಸಾವಯವ ಕೃಷಿಯ ಈ ಪಯಣದಲ್ಲಿ ರವಿಕುಮಾರ್ ಅವರಿಗೆ ಕುಟುಂಬದ ಸಂಪೂರ್ಣ ಸಹಕಾರ ದೊರೆಯುತ್ತಿದೆ. ಕೃಷಿಯ ವಿವಿಧ ಚಟುವಟಿಕೆಗಳಲ್ಲಿ ಕುಟುಂಬದ ಸದಸ್ಯರು ಕೈಜೋಡಿಸುತ್ತಿದ್ದು, ಇದರಿಂದ ಕೃಷಿ ಕಾರ್ಯ ಸುಗಮವಾಗಿದೆ. ಎಂಬಿಎ ಪದವಿಯ ಬಳಿಕ ಬೇರೆ ವೃತ್ತಿಯತ್ತ ಮುಖ ಮಾಡುವ ಬದಲು ಕೃಷಿಯನ್ನು ಆಯ್ಕೆ ಮಾಡಿಕೊಂಡಿರುವುದು ಗ್ರಾಮೀಣ ಯುವಕರಿಗೆ ಮಾದರಿಯಾಗಿದೆ.‘ಸಾವಯವ ಉತ್ಪನ್ನಗಳು ದುಬಾರಿ’ ಎಂಬ ಮನಸ್ಥಿತಿ ಗ್ರಾಹಕರಲ್ಲಿದೆ. ಆದರೆ, ರೈತರಿಂದ ನೇರವಾಗಿ ಖರೀದಿಸಿದರೆ ವಿಷಮುಕ್ತ ಆಹಾರವನ್ನು ನಿಯಮಿತ ದರದಲ್ಲಿಯೇ ಪಡೆಯಬಹುದು. ಗ್ರಾಹಕರು ನಮ್ಮ ಹೊಲಕ್ಕೆ ಬಂದು ಸಾವಯವ ಕೃಷಿ ಪದ್ಧತಿ ವೀಕ್ಷಿಸಿ, ಉತ್ಪನ್ನಗಳನ್ನು ಖರೀದಿಸಬಹುದು. ನಮ್ಮ ಹೊಲಕ್ಕೆ ಬರುವ ಪ್ರತಿಯೊಬ್ಬ ಗ್ರಾಹಕರಿಗೂ ಸದಾ ಸ್ವಾಗತವಿದೆ ಎಂದು ರವಿಕುಮಾರ್ ಹೇಳುತ್ತಾರೆ. ಆಸಕ್ತರು ಅವರ ಮೊಬೈಲ್ ಸಂಖ್ಯೆ 9986711975 ಅನ್ನು ಸಂಪರ್ಕಿಸಬಹುದು.
ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನನಗೆ ಖುಷಿಯಿದೆ. ವಿಷಮುಕ್ತ ಆಹಾರ ಉತ್ಪಾದಿಸಿ ಜನರ ಆರೋಗ್ಯ ಕಾಪಾಡುತ್ತಿದ್ದೇನೆ ಎಂಬ ನೆಮ್ಮದಿಯಿದೆ. ಬಳ್ಳಾರಿಯ ಗಾಂಧಿಭವನದಲ್ಲಿ ಪ್ರತಿ ಬುಧವಾರ ಜರುಗುವ ಸಾವಯವ ಸಂತೆಯಲ್ಲಿ ನಾನು ಭಾಗವಹಿಸುತ್ತೇನೆ. ಎಲ್ಲ ತರಕಾರಿಗಳಿಗೆ ಕೆಜಿಗೆ ₹ 50, ಸೊಪ್ಪು ಒಂದು ಕಟ್ಟು ₹ 10 ನಿಗದಿಗೊಳಿಸಲಾಗಿದೆ. ಆಸಕ್ತರು ಗಾಂಧಿಭವನಕ್ಕೆ ಆಗಮಿಸಿ ವಿಷಮುಕ್ತ ತರಕಾರಿ, ಕಾಯಿಪಲ್ಯೆ ಖರೀದಿಸಬಹುದು. ನಮ್ಮ ಹೊಲಕ್ಕೆ ಗ್ರಾಹಕರು ನೇರವಾಗಿ ಬಂದು ಖರೀದಿಸಬಹುದು ಎಂದು ಎಂಬಿಎ ಪದವೀಧರ ರೈತ ಬಿ. ರವಿಕುಮಾರ್ ತಿಳಿಸಿದರು.