ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಬಿಜಿಕೆರೆ ಬಸವರಾಜಬಯಲು ಸೀಮೆಯಲ್ಲಿ ಕಳೆದೆರಡು ತಿಂಗಳಿಂದ ಉತ್ತಮ ಹದ ಮಳೆ ಇಲ್ಲದೆ ಕಾಯಿ ಕಟ್ಟುವ ಮುನ್ನವೇ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗುತ್ತಿದ್ದು ವರುಣನ ಅವಕೃಪೆ ರೈತರಿಗೆ ಬರ ಸಿಡಿಲು ಬಡಿದಂತಾಗಿ ತಾಲೂಕಿನಲ್ಲಿ ಮತ್ತೊಮ್ಮೆ ಬರದ ಛಾಯೆ ಆವರಿಸಿದೆ.
ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶೇಂಗಾ ಬಿತ್ತನೆ ಮಾಡಿ ಮೂರು ತಿಂಗಳು ಕಳೆಯುತ್ತಾ ಬಂದರೂ ಉತ್ತಮ ಹದ ಮಳೆ ಇಲ್ಲದಾಗಿದೆ. ಭೂಮಿಯಲ್ಲಿ ತೇವಾಂಶ ಇಲ್ಲದೆ ಪಸಲು ಬೆಂಕಿ ರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ಒಣಗುತ್ತಿದೆ. ಮಳೆ ಬರುವಿಕೆಗಾಗಿ ರೈತರು ಆಕಾಶದತ್ತ ಮುಖ ಮಾಡುವಂತಾ ಸ್ಥಿತಿ ಎದುರಾಗಿದೆ.ತಾಲೂಕಿನಲ್ಲಿ ಶೇಂಗಾ ಎಡೆ ಒಡೆದು ಕಳೆ ಕಿತ್ತು ಎರಡೂ ತಿಂಗಳು ಕಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದೇ ಗಿಡದಲ್ಲಿ ಭ್ರೂಣಾವಸ್ಥೆಯಲ್ಲಿ ಕಾಯಿಗಳು ಸೊರಗುತ್ತಿವೆ. ವರುಣನ ಅವಕೃಪೆಯಿಂದ ಶೇ.60ರಷ್ಟು ಬೆಳೆ ಕುಂಠಿತಗೊಂಡಿದ್ದು ರೈತರಲ್ಲಿ ಇಳುವರಿ ಕುಸಿತದ ಆತಂಕ ಮನೆ ಮಾಡಿದೆ. ಬಹುತೇಕ ಮಳೆಯನ್ನೇ ನೆಚ್ಚಿಕೊಂಡು ಬಿತ್ತನೆ ಮಾಡುವ ರೈತರಿಗೆ ಆರಂಭದಲ್ಲಿ ಅಬ್ಬರಿಸಿದ್ದ ಮಳೆರಾಯ ದಿನ ಕಳೆದಂತೆ ಮುಸುಕಾಗಿ ಮುಂಗಾರು ಕಳೆಯುತ್ತಾ ಬಂದರೂ ಉತ್ತಮ ಹದ ಮಳೆ ಬಾರದೇ ಗಿಡಗಳು ಬೆಳೆಯುವ ಹಂತದಲ್ಲಿ ಮೊಟಕಾಗಿ ಹಾಕಿದ ಬಂಡವಾಳ ಕೈಸೇರಿದೆ ರೈತರು ಮತ್ತೊಮ್ಮೆ ಸಾಲದ ಸುಳಿಗೆ ಸಿಲುಕುವಂತಾ ಸ್ಥಿತಿ ಎದುರಾಗಿದ್ದು ತಾಲೂಕಿನಲ್ಲಿ ಮತ್ತೊಮ್ಮೆ ಬರದ ಛಾಯೆ ಆವರಿಸಿದೆ.
ತಾಲೂಕಿನಲ್ಲಿ ಒಟ್ಟು 33 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು 24 ಸಾವಿರ ಹೆಕ್ಟರ್ ಶೇಂಗಾ, 2 ಸಾವಿರ ಹತ್ತಿ, 1 ಸಾವಿರ ತೊಗರಿ, 1ಸಾವಿರ ಮೆಕ್ಕೆ ಜೋಳ ಸೇರಿದಂತೆ ಉಳಿದಂತೆ ನವಣೆ, ಸಜ್ಜೆ, ರಾಗಿ ಸೇರಿದಂತೆ ಕಿರು ದಾನ್ಯಗಳ ಬಿತ್ತನೆಯಾಗಿದೆ. ಬಹುತೇಕ ಮಳೆಯಾಶ್ರಿತ ಬೆಳೆಯಾಗಿರುವ ಬಯಲು ಸೀಮೆಯಲ್ಲಿ ಮಳೆರಾಯನ ಕಣ್ಣಾ ಮುಚ್ಚಾಲೆ ಆಟದಿಂದ ರೈತಾಪಿ ವರ್ಗ ಹೈರಾಣಾಗಿದ್ದಾರೆ.ಮಳೆ ಇಲ್ಲದೆ ಸಂಕಷ್ಟ ಒಂದಡೆಯಾದರೆ ದಿನ ದಿನಕ್ಕೆ ಏರಿಕೆಯಾಗುತ್ತಿರುವ ಸುಡು ಬಿಸಿಲು ಭೂಮಿ ತೇವಾಂಶವನ್ನು ಇಲ್ಲವಾಗಿಸುತ್ತಿದೆ. ಇದರಿಂದ ಶೇಂಗಾ ಗಿಡಗಳು ಕಮರುತ್ತಿವೆ. ಇದರೊಟ್ಟಿಗೆ ಶೇಂಗಾ ಬೆಳೆಗೆ ಸಾಂಪ್ರದಾಯಿಕವಾಗಿ ಕಾಡುವ ಎಲೆ ಚುಕ್ಕಿ. ಬೂದು, ಬೆಂಕಿ ರೋಗ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
ತಾಲೂಕಿನ ಕಸಬಾ ಹೋಬಳಿಗೆ ಹೋಲಿಕೆ ಮಾಡಿಕೊಂಡಲ್ಲಿ ದೇವಸಮುದ್ರ ಹೋಬಳಿಯಲ್ಲಿ ಮಳೆ ಹೆಚ್ಚು ಆಗಿದ್ದರೂ ಕಳೆದೊಂದು ತಿಂಗಳಿಂದ ಸ್ತಬ್ಧವಾಗಿದೆ. ಅಲ್ಲಿನ ಹತ್ತಿ, ಮೆಕ್ಕೆ ಜೋಳದ ಪಸಲು ಕಟಾವು ಆಗಿದ್ದರೂ ಶೇಂಗಾ ಬೆಳೆಗೆ ಮಳೆಯ ಅಗತ್ಯವಿದೆ. ಒಂದು ವಾರದಲ್ಲಿ ಮಳೆ ಬಾರದಿದ್ದಲ್ಲಿ ಅಲ್ಲಿಯೂ ಪಸಲು ಕೈಜಾರುವ ಭೀತಿ ರೈತರಲ್ಲಿ ಕಾಣಸಿಗುತ್ತಿದೆ.ತಾಲೂಕಿನ ಯಾವ ಭಾಗದಲ್ಲೂ ಮೋಡಗಳು ಮಳೆ ಸುರಿಸದೆ ಅಲ್ಲಲ್ಲಿ ತುಂತುರು ಹನಿ ಚುಮುಕಿಸಿ ಓಡುತ್ತಿವೆ. ಕಸಬಾ ಹೋಬಳಿಯ ನೇರ್ಲಹಳ್ಳಿ. ಕೋನಸಾಗರ, ಕೊಂಡ್ಲಹಳ್ಳಿ, ಬಿಜಿಕೆರೆ, ತುಮಕೂರ್ಲ ಹಳ್ಳಿ, ಹಾನಗಲ್ ರಾಯಾಪುರ, ನಾಗಸಮುದ್ರ, ತಳವಾರಹಳ್ಳಿ, ಸಿದ್ದಯ್ಯನಕೋಟೆ ಸೇರಿದಂತೆ ದೇವಸಮುದ್ರ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ನಾನಾ ಬೆಳೆಗಳು ಒಣಗುತ್ತಿದ್ದು ಈ ವಾರದಲ್ಲಿ ಮಳೆ ಬಂದರೂ ಶೇ.40ರಷ್ಟು ಇಳುವರಿ ಸಿಗುವುದಿಲ್ಲ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಇನ್ನಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂಬುದು ರೈತರ ಅಭಿಪ್ರಾಯವಾಗಿದೆ.