ಸಾರಾಂಶ
ಹಾಲುಮತ ಸಮಾಜದವರು ಹಾಲಿನಂತಹ ಮನಸ್ಸುವುಳ್ಳವರು. ಇದು ಸರ್ವಧರ್ಮದ ಸಮಾಜದವರೊಂದಿಗೆ ಬೆರೆತು ಕೂಡಿಬಾಳುವ ಸಮಾಜವಾಗಿದೆ.
ನೂತನ ಬೀರಲಿಂಗೇಶ್ವರ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಕನ್ನಡಪ್ರಭ ವಾರ್ತೆ ಯಲಬುರ್ಗಾ
ಹಾಲುಮತ ಸಮಾಜದವರು ಹಾಲಿನಂತಹ ಮನಸ್ಸುವುಳ್ಳವರು. ಇದು ಸರ್ವಧರ್ಮದ ಸಮಾಜದವರೊಂದಿಗೆ ಬೆರೆತು ಕೂಡಿಬಾಳುವ ಸಮಾಜವಾಗಿದೆ ಎಂದು ತಿಂಥಿಣಿ ಬ್ರಿಜ್‌ನ ಕಾಗಿನೆಲೆಯ ಕನಕಗುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ದಮ್ಮೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಸರಿಯಲ್ಲ. ಇಂತಹ ಕೆಟ್ಟ ಸಂಪ್ರದಾಯಕ್ಕೆ ಪ್ರತಿಯೊಬ್ಬರು ಕಡಿವಾಣ ಹಾಕಲು ಮುಂದಾಗಬೇಕು ಎಂದರು.ನಮ್ಮ ಸ್ವಾರ್ಥಕ್ಕಾಗಿ ದೇವರ ಹೆಸರಿನಲ್ಲಿ ಪ್ರಾಣಿ ಕಡಿಯುವುದು, ಕುಡಿಯುವುದು ಮಾಡಿದರೆ ಭಗವಂತನಿಗೆ ಮಾಡುವ ಬಹುದೊಡ್ಡ ಅಪಮಾನ. ಇಂತಹ ಆಚರಣೆಗಳನ್ನು ಕೈ ಬಿಡಬೇಕು. ಶಿಕ್ಷಣವಂತರಾಗಿ ಉತ್ತಮ ಸಂಸ್ಕಾರ, ನಡೆ-ನುಡಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೊಬೈಲ್ ಬಂದ ಮೇಲೆ ಹೆಣ್ಮಕ್ಕಳ ಬದುಕು ಬದಲಾವಣೆಯಾಗಿದೆ. ಅವರವರ ಮೂಲ ಕಸುಬುಗಳು ಕಣ್ಮರೆಯಾಗುತ್ತಿವೆ ಎಂದು ಹೇಳಿದರು.ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜದವರು ದಮ್ಮೂರು ಗ್ರಾಮದಲ್ಲಿ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕತೆಗೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರು ದಾನ, ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಗ್ರಾಮದಲ್ಲಿ ಪ್ರತಿ ವರ್ಷವೂ ಇದರ ಜಾತ್ರೆ ನಡೆಸಬೇಕು ಇದರಿಂದ ಜನರಲ್ಲಿ ಧಾರ್ಮಿಕತೆ ಬೆಳೆಯುತ್ತದೆ ಎಂದರು.ತಾಲೂಕಾ ಹಾಲುಮತ ಸಮಾಜಾಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿ, ಎಲ್ಲರ ಸಹಾಯ-ಸಹಕಾರದಿಂದ ಈ ಕಾರ್ಯ ನೆರವೇರಿದೆ ಎಂದರು. ಲೇಬಗೇರಿಯ ಸರಸ್ವತಿ ಪೀಠದ ಶ್ರೀ ನಾಗಮೂರ್ತೇಂದ್ರ ಸ್ವಾಮೀಜಿ, ಬಾದಿಮನಾಳ ಹಾಲವರ್ತಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಅತಿಥಿಗಳಾಗಿ ಧರ್ಮರಮಠದ ಹನುಮಂತಪ್ಪಜ್ಜನವರು, ಶರಣಯ್ಯ ಹಿರೇಮಠ, ಶಿವಶಂಕರ ದೇಸಾಯಿ, ಸತೀಶ ಗಾಂವಕರ, ರಸೂಲಸಾಬ ದಮ್ಮೂರ, ರೇವಣೆಪ್ಪ ಹಿರೇಕುರಬರ, ಭೀಮಣ್ಣ ಜರಕುಂಟಿ, ಶರಣಗೌಡ ಗೌಡ್ರ, ಈರಣ್ಣ ರ‍್ಯಾವಣಕಿ, ಸಂಗಯ್ಯ ಶಾಸ್ತ್ರಿಮಠ, ಮೌನೇಶ ಬಡಿಗೇರ, ಭೀಮನಗೌಡ ಚಿಕ್ಕಗೌಡ್ರ, ಹೇಮಣ್ಣ ನಾಯಕ, ಯಮನೂರಪ್ಪ ಕುಡಗುಂಟಿ, ದುರಗೇಶ ಹರಿಜನ, ಹನುಮಂತಪ್ಪ ಶಾನಬೋಗ, ಮಲ್ಲನಗೌಡ ಪಾಟೀಲ, ರಮೇಶ ಚಿಕ್ಕಗೌಡ್ರ, ಬಸವರಾಜ ಮೇಲಸಕ್ರಿ, ಶರಣಬಸಪ್ಪ ದಾನಕೈ, ಹನುಮಂತಪ್ಪ ಕುರಿ, ಈಶ್ವರ ಅಟಮಾಳಗಿ, ಗುರುಮೂರ್ತಿ ಬಡಿಗೇರ ಮತ್ತಿತರರು ಇದ್ದರು.