ಅತಿವೃಷ್ಟಿ,ಅನಾವೃಷ್ಟಿಯಿಂದ ರಾಜ್ಯದ ಜನರು ಕಂಗಾಲು

| Published : Aug 03 2024, 12:37 AM IST

ಅತಿವೃಷ್ಟಿ,ಅನಾವೃಷ್ಟಿಯಿಂದ ರಾಜ್ಯದ ಜನರು ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಆದ ಹಾನಿ ಕುರಿತು ಹಾಗೂ ಅನಾವೃಷ್ಟಿಯಿಂದ ಸಂಕಷ್ಟ ಅನುಭವಿಸುತ್ತಿರುವ ಜನರ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸುತ್ತಿಲ್ಲ

ಲಕ್ಷ್ಮೇಶ್ವರ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಅತಿವೃಷ್ಟಿಯಾಗಿದ್ದರೆ,ಇನ್ನೊಂದಡೆ ಅನಾವೃಷ್ಟಿಯಿಂದ ಜನರು ನರಳುತ್ತಿದ್ದಾರೆ. ಜನರ ಸಂಕಷ್ಟಗಳ ವರದಿ ಮುಖ್ಯಮಂತ್ರಿಗಳಿಗೆ ತಲುಪಿಸಿ ಅವರಿಂದ ಸಹಾಯ, ಸಹಕಾರ ಕೋರುವ ಉದ್ದೇಶದಿಂದ ರಾಜ್ಯದ ಬಳ್ಳಾರಿ ಮತ್ತು ಗದಗ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿರುವುದಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಪಟ್ಟಣದ ಅಡರಕಟ್ಟಿ ಗ್ರಾಮದ ವ್ಯಾಪ್ತಿಯ ಬೂದವಂತ ಬಸವಣ್ಣ ದೇವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಆದ ಹಾನಿ ಕುರಿತು ಹಾಗೂ ಅನಾವೃಷ್ಟಿಯಿಂದ ಸಂಕಷ್ಟ ಅನುಭವಿಸುತ್ತಿರುವ ಜನರ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸುತ್ತಿಲ್ಲ. ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಆದ ಜೀವ ಮತ್ತು ಬೆಳೆ ಹಾನಿಯ ಕುರಿತು ಸಮೀಕ್ಷೆ ಕಾರ್ಯ ಕೈಗೊಂಡಿಲ್ಲ, ಇದು ಜನರ ಹಿತ ಕಡೆಗಣಿಸಿದ ಸರ್ಕಾರವಾಗಿದೆ ಎಂದು ಆರೋಪಿಸಿದ ಅವರು, ರಾಜ್ಯದ ಬಳ್ಳಾರಿ ಹಾಗೂ ಗದಗ ಜಿಲ್ಲೆಯಲ್ಲಿ ತುಂಗಭದ್ರಾ ನದಿ ನೀರಿನ ಪ್ರವಾಹದಿಂದ ಹಲವಾರು ಪ್ರದೇಶಗಳ ಬೆಳೆಗಳು ಕೊಚ್ಚಿಕೊಂಡು ಹೋಗಿವೆ, ಮನೆ, ಮಠ ಕಳೆದುಕೊಂಡು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಪ್ರದೇಶಗಳಲ್ಲಿ ಆದ ಹಾನಿಯ ಕುರಿತು ಸಮೀಕ್ಷೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳು, ದೇವರು ಬಗ್ಗೆ ಅಪಾರ ಗೌರವವಿದೆ, ಇವುಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿದ್ದು, ಅವುಗಳ ಅಸ್ತಿತ್ವ ಉಳಿಸಿಕೊಂಡು ಹೋಗುವದು ಸಮಾಜದ ಎಲ್ಲರ ಕರ್ತವ್ಯವಾಗಿದೆ. ಕಳೆದ ೮ ವರ್ಷಗಳ ಹಿಂದೆ ಈ ದೇವಸ್ಥಾನದ ಮುಖ್ಯಸ್ಥರು ಹಾಗೂ ಪ್ರಧಾನ ಅರ್ಚಕರಾಗಿರುವ ಶ್ರೀಶೈಲ ಮಹಾಸ್ವಾಮಿಗಳ ಇಚ್ಚೆಯ ಮೇರೆಗೆ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗಿತ್ತು, ಆದರೆ ಕಾರಣಾಂತರಗಳಿಂದ ಕಾಮಗಾರಿ ನಿಂತು ಹೋಗಿತ್ತು, ಇದು ನನಗೂ ಬೇಸರದ ಸಂಗತಿಯಾಗಿತ್ತು, ಪ್ರತಿ ವರ್ಷ ನಾನು ಇಲ್ಲಿಗೆ ಬಂದು ಹೋಗುತ್ತಿದ್ದು, ಕಳೆದ ೩ ವರ್ಷಗಳಿಂದ ಈ ದೇವಸ್ಥಾನಕ್ಕೆ ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಕಾಲ ಕೂಡಿ ಬಂದಿದ್ದು, ದೇವಸ್ಥಾನದ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದೇನೆ. ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಕಾರ್ಯ ಶಾಶ್ವತವಾಗಿರುತ್ತವೆ ಎನ್ನುವದು ನನ್ನ ಅಭಿಪ್ರಾಯವಾಗಿದೆ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯಸ್ಥರು ಹಾಗೂ ಪ್ರಧಾನ ಅರ್ಚಕರಾಗಿರುವ ಶ್ರೀಶೈಲ ಮಹಾಸ್ವಾಮಿಗಳು ಮಾತನಾಡಿ, ಶ್ರೀರಾಮುಲು ಅವರ ಇಚ್ಚೆಯಂತೆ ದೇವಸ್ಥಾನವು ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ, ಅನಿವಾರ್ಯ ಕಾರಣಗಳಿಂದ ನಿಂತು ಹೋಗಿತ್ತು. ಆದರೆ ಇದೀಗ ಮತ್ತೆ ಕಾಮಗಾರಿ ಪ್ರಾರಂಭವಾಗಲಿದ್ದು, ದೇವರ ಇಚ್ಚೆಯಂತೆ ಶ್ರೀರಾಮುಲು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ನುಡಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಮುಖಂಡ ನಾಗರಾಜ ಕುಲಕರ್ಣಿ, ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿವಪುತ್ರಯ್ಯ ಹಿರೇಮಠ, ರಾಮಣ್ಣ ಚಿಕ್ಕಣ್ಣವರ, ನಿಂಗಪ್ಪ ಪ್ಯಾಟಿ, ವಿಜಯ ಹತ್ತಿಕಾಳ, ನಿಂಗಪ್ಪ ಬನ್ನಿ, ಅನಿಲ ಮುಳಗುಂದ, ಮುದಿಯಪ್ಪ ಹವಳದ, ಪ್ರಕಾಶ ಬೆಂತೂರ, ಭೀಮಣ್ಣ ಯಂಗಾಡಿ, ಹನುಮಂತ ಜಾಲಿಮರದ ಮುಂತಾದವರಿದ್ದರು.