ಸಾರಾಂಶ
ಕಾಲ ಬದಲಾಗಿದ್ದರೂ, ಹೆಣ್ಣು ಸ್ವಾವಲಂಬಿ, ಸ್ವಾಭಿಮಾನಿಯಾಗಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾಗಿಲ್ಲವಾದ್ದರಿಂದ ಈ ದೃಷ್ಟಿಕೋನ ಬದಲಾದಾಗ ಮಾತ್ರ ಹೆಣ್ಣು ಸಬಲಳಾಗಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕಾಲ ಬದಲಾಗಿದ್ದರೂ, ಹೆಣ್ಣು ಸ್ವಾವಲಂಬಿ, ಸ್ವಾಭಿಮಾನಿಯಾಗಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾಗಿಲ್ಲವಾದ್ದರಿಂದ ಈ ದೃಷ್ಟಿಕೋನ ಬದಲಾದಾಗ ಮಾತ್ರ ಹೆಣ್ಣು ಸಬಲಳಾಗಲು ಸಾಧ್ಯ ಎಂದು ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ತಿಳಿಸಿದರು. ನಗರದ ನಿವೃತ್ತ ನೌಕರರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಸಂಘದ ಮಾಸಿಕ ಸಭೆಯ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆ ಮಾಡುತ್ತಾ ಬಾವಿಯೊಳಗಿನ ಕಪ್ಪೆಯಂತೆ ಜೀವನ ಮಾಡುತ್ತಿದ್ದಳು. ಆದರೆ ಕಾಲ ಬದಲಾದಂತೆ ಮಹಿಳೆಯರು ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾ ಯಾರಿಗೂ ಕಮ್ಮಿ ಇಲ್ಲವೆಂಬಂತೆ ಸ್ವಾಭಿಮಾನ ಮತ್ತು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಜೀವನದಲ್ಲಿ ಹೆಣ್ಣಿನ ಪಾತ್ರ ಅತಿಮುಖ್ಯವಾಗಿದ್ದು ಒಂದು ಕುಟುಂಬಕ್ಕೆ ಹೆಣ್ಣು ಆಧಾರಸ್ತಂಭವಾಗಿ ನಿಂತು ನಾನು ಅಬಲೆಯಲ್ಲ ಸಬಲೆ ಎಂದು ತೋರಿಸುತ್ತಿದ್ದಾಳೆ. ಆದರೂ ಸಮಾಜದಲ್ಲಿ ಮಾತ್ರ ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಿಲ್ಲ. ಆದ್ದರಿಂದ ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಮತ್ತಷ್ಟು ಸಬಲರಾಗುವ ಮೂಲಕ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ದೌರ್ಬಲ್ಯತೆಯನ್ನು ಮೆಟ್ಟಿನಿಂತು ಸಮಾಜದ ಶಕ್ತಿಯಾಗಿ ಬೆಳೆಯಬೇಕು ಎಂದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೆ.ಎಂ. ರಾಜಣ್ಣ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಅನುಭವ ಮಂಟಪ ರಚಿಸಿ ಸಮಾನತೆ ಸಾರುವ ಮೂಲಕ ಪುರುಷ ಮತ್ತು ಮಹಿಳೆಯರು ಸಮಾನರು ಎಂದು ಕರೆ ನೀಡಿದ್ದರು. ಅದರಂತೆ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ಗುರ್ತಿಸಿಕೊಳ್ಳುವ ಮೂಲಕ ಪುರುಷರಿಗೆ ಸರಿಸಮನಾಗಿದ್ದಾಳೆ. ಆದರೆ ಮಹಿಳೆಯರಿಗೆ ಕೊಟ್ಟಿರುವ ಸಮಾನತೆಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಒಳ್ಳೆಯದು, ಕೆಟ್ಟದ್ದನ್ನು ಯೋಚಿಸುವ ಶಕ್ತಿ ನಿಮ್ಮಲ್ಲಿದ್ದು ಕೆಟ್ಟದನ್ನು ಪ್ರತಿಭಟಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದರು. ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷೆ ಸರಸ್ವತಿ ಭೂಷಣ್ ಮಾತನಾಡಿ, ಮಹಿಳೆ ತ್ಯಾಗ, ಆತ್ಮಸ್ಥೈರ್ಯ, ಸಾಹಸ ಹಾಗೂ ಅಪ್ರತಿಮ ಸಾಧನೆಗಳ ಪ್ರತೀಕವಾಗಿದ್ದು, ಸಹನೆ ತ್ಯಾಗ ಮನೋಭಾವದಿಂದ ಕುಟುಂಬವನ್ನು ನಿರ್ವಹಿಸಿಕೊಂಡು ಹೋಗುವ ಜೊತೆಗೆ ತನ್ನನ್ನು ತಾನು ಕಾಪಾಡಿಕೊಂಡು ಸಮಾಜದ ಕಣ್ಣಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ಅವರ ಜೀವನದ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪಾರಂಪರಿಕ ನಾಟಿ ವೈದ್ಯರಾದ ಕಮಲಮ್ಮ ಸತ್ತೇರಾಮನಹಳ್ಳಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ಇತ್ತೀಚಿಗೆ ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಸಂಘದ ಕಾರ್ಯದರ್ಶಿ ಸಿ. ಕುಮಾರ್ ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಜಯಶೀಲಾ, ಕದಳಿ ವೇದಿಕೆ ಅಧ್ಯಕ್ಷ ಸ್ವರ್ಣಗೌರಮ್ಮ, ನಿವೃತ್ತ ಶಿಕ್ಷಕಿ ಚಂದ್ರಮ್ಮ, ನಿವೃತ್ತ ಪ್ರಾಂಶುಪಾಲ ಮರುಳಪ್ಪ, ನಿವೃತ್ತ ನೌಕರರ ಸಹಕಾರ ಸಂಘದ ಅಧ್ಯಕ್ಷ ವಿ.ಎನ್.ಮಹದೇವಯ್ಯ, ಸಂಘದ ಸದಸ್ಯರಾದ ಸೋಮಶೇಖರ್, ನಂದೀಶ್, ನರಸಿಂಹಮೂರ್ತಿ, ರುಕ್ಮಿಣಿ, ಸಂಸ್ಕಾರ ಭಾರತಿ ಸುಜಾತ, ಯೋಗಶಿಕ್ಷಕಿ ಚೆನ್ನಾಂಬಿಕ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಮಹಿಳೆಯರು ಭಾಗವಹಿಸಿದ್ದರು.